ಕೆಂಭಾವಿ: ಸಗರ ನಾಡಿನಾದ್ಯಂತ ಅನೇಕ ಸಂತ, ಶರಣರು ಆಗಿ ಹೋಗಿದ್ದಾರೆ. ಅಂಥ ಮಹಾಶರಣರಲ್ಲಿ ಒಬ್ಬ ಕೆಂಭಾವಿ ಭೋಗಣ್ಣ. ಪಟ್ಟಣದಲ್ಲಿ ಪ್ರಾಚೀನ ಕಾಲದ ಅತೀ ಹಳೆಯ ಅನೇಕ ದೇವಾಲಯಗಳು ಇತಿಹಾಸವನ್ನು ಸಾರಿ ಹೇಳುತ್ತವೆ.
ಪಟ್ಟಣವು ಚಂದೀಮರಸ ಎಂಬ ರಾಜನ ರಾಜಧಾನಿಯಾಗಿತ್ತು. ಅಲ್ಲದೆ ಚಾಲುಕ್ಯರ ಕಾಲದ ಅನೇಕ ಶಿಲಾಯುಗದ ಕೆತ್ತನೆಗಳು ಪಟ್ಟಣದ ರೇವಣಸಿದ್ದೇಶ್ವರ ದೇವಸ್ಥಾನ ಮತ್ತು ಗ್ರಾಮದ ಹಲವಾರು ಭಾಗಗಳಲ್ಲಿ ಇಂದಿಗೂ ಕಾಣಬಹುದಾಗಿದೆ.
ಪಟ್ಟಣದ ಬಗ್ಗೆ ಅನೇಕ ಇತಿಹಾಸಕಾರರು ಸಂಶೋಧನೆಗಳನ್ನು ಕೈಕೊಂಡು ಪ್ರಾಚೀನ ಶಿಲಾ ಶಾಸನ ಇದೆ ಎಂಬುದನ್ನು ದೃಢಡಿಸಿವೆ. ಆದ್ಯ ವಚನಕಾರ ಮುದನೂರಿನ ದೇವರ ದಾಸಿಮಯ್ಯನ ಸಮಕಾಲೀನರೆಂದೆ ಹೇಳಲ್ಪಡುವ ಶರಣ ಕೆಂಭಾವಿ ಭೋಗಣ್ಣ ಸಮಾಜದ ಪರಿವರ್ತನೆಗೆ ಅನೇಕ ಮಾರ್ಗೋಪಾಯ ಕಂಡುಹಿಡಿದವರು.
ಹಿಂದೆ ಭೋಗಣ್ಣನು ಗ್ರಾಮ ಬಿಟ್ಟು ಹೋಗುವಾಗ ಊರಿನಲ್ಲಿರುವ ಎಲ್ಲ ಲಿಂಗಗಳು ಅವನ ಬೆನ್ನುಹತ್ತಿ ಹೋಗಿದ್ದವು. ಮರುದಿನ ಶಿವಾಲಯಗಳಿಗೆ ಪೂಜೆ ಸಲ್ಲಿಸಲು ತೆರಳಿದ ಪೂಜಾರಿಗಳಿಗೆ ಲಿಂಗಗಳು ಇಲ್ಲದ್ದನ್ನು ದಿಗ್ಭ್ರಮೆಗೊಂಡು ನಂತರ ಭೋಗಣ್ಣನಿಗೆ ಕ್ಷಮೆ ಕೋರಿ ಮರಳಿ ಗ್ರಾಮಕ್ಕೆ ಬರುವಂತೆ ಪ್ರಾರ್ಥಿಸಿದಾಗ ಭೋಗಣ್ಣನ ಜೊತೆ ಲಿಂಗಗಳು ನಾ ಮುಂದು ತಾ ಮುಂದು ಎನ್ನುವಂತೆ ಬಂದು ಸಣ್ಣ ಪೀಠದಲ್ಲಿ ದೊಡ್ಡಲಿಂಗ, ದೊಡ್ಡ ಪೀಠದಲ್ಲಿ ಸಣ್ಣಲಿಂಗ ಕೂತಿವೆ ಎಂಬುವುದಕ್ಕೆ ಇಂದಿಗೂ ಇಲ್ಲಿನ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಕಾಣುತ್ತೇವೆ.
ಸುತ್ತಲೂ ನೀರು ಮಧ್ಯದಲ್ಲಿ ಭೋಗೇಶ್ವರ ದೇವಸ್ಥಾನವಿದ್ದು, ಸುಂದರವಾಗಿ ಕಂಗೊಳಿಸುತ್ತದೆ. ಆದರೆ ನಿರ್ವಹಣೆ ಕೊರತೆಯಿಂದ ಸುತ್ತಲಿನ ಕೆರೆಯಲ್ಲಿ ಹೂಳುತುಂಬಿದೆ. ಇಂಥ ಐತಿಹಾಸಿಕ ದೇವಸ್ಥಾನಗಳಿಗೆ ಪ್ರವಾಸೋದ್ಯಮ ಇಲಾಖೆ ಗಮನಹರಿಸಬೇಕು. ಪ್ರವಾಸಿ ತಾಣಗಳು ಎಂದು ಘೋಷಣೆ ಮಾಡಿ ಜೀರ್ಣೋದ್ಧಾರ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಹಿಪಾಲರಡ್ಡಿ ಡಿಗ್ಗಾವಿ ಅವರು ಮಂಗಳವಾರ ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಕೆಂಭಾವಿಯಲ್ಲಿ ಇತಿಹಾಸ ಸಾರುವ ಅನೇಕ ಶಿಲಾ ಶಾಸನಗಳು ಗುಮ್ಮಟಗಳು ದೇವಸ್ಥಾನಗಳು ಇವೆ. ಈ ಪಟ್ಟಣವು ಪ್ರಸಿದ್ದ ಪ್ರವಾಸಿ ತಾಣವಾಗಿ ಮಾಡಲು ವಿಶೇಷ ಗಮನಹರಿಸಬೇಕು
-ರಂಗಪ್ಪ ವಡ್ಡರ್ ಕಾಂಗ್ರೆಸ್ ಮುಖಂಡ
ಭೋಗೇಶ್ವರ ದೇವಸ್ಥಾನ ಹಾಗೂ ರೇವಣಸಿದ್ಧೇಶ್ವರ ದೇವಸ್ಥಾನಗಳು ಪ್ರವಾಸಿ ತಾಣಗಳೆಂದು ಘೋಷಣೆ ಮಾಡಿ ಜೀರ್ಣೋದ್ಧಾರ ಮಾಡಲು ಸಚಿವರಿಗೆ ಪತ್ರ ಬರೆಯಲಾಗಿದೆ.
-ಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.