ADVERTISEMENT

ಜ್ಞಾನಾರ್ಜನೆಗೆ ಸುಂದರ ಗ್ರಂಥಾಲಯ

ಯರಗೋಳ: ಪಾಳು ಬಿದ್ದ ಕಟ್ಟಡಕ್ಕೆ ಮರುಜೀವ ನೀಡಿದ ಗ್ರಾಮದ ಯುವಕರು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 10:40 IST
Last Updated 28 ಡಿಸೆಂಬರ್ 2019, 10:40 IST
ಗ್ರಂಥಾಲಯ ಕಟ್ಟಡದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು
ಗ್ರಂಥಾಲಯ ಕಟ್ಟಡದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು   

ಯರಗೋಳ: ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಪಾಳು ಬಿದ್ದು ಭೂತ ಬಂಗಲೆಯಂತಾಗಿದ್ದ ಕಟ್ಟಡ, ಯುವಕರ ಇಚ್ಛಾಶಕ್ತಿ, ಸಂಕಲ್ಪದಿಂದ ಗ್ರಂಥಾಲಯವಾಗಿ ರೂಪಗೊಂಡಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುವವರಿಗೆ ಸಿದ್ಧತೆ ನಡೆಸಿದೆ.

ಯರಗೋಳ ಗ್ರಾಮದಲ್ಲಿ ವಿದ್ಯಾರ್ಥಿಗಳ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವರಿಗೆ ಓದಿಗೆ ವ್ಯವಸ್ಥಿತವಾದ ಗ್ರಂಥಾಲಯದ ಕೊರತೆಯಿತ್ತು.

ಇಲ್ಲಿನ ಗ್ರಾಮ ಪಂಚಾಯಿತಿ ಮುಂಬದಿ ಇರುವ ಸಾರ್ವಜನಿಕ ಗ್ರಂಥಾಲಯದ ಕಟ್ಟಡ ಬಿರುಕು ಬಿಟ್ಟು ಮಳೆ ನೀರಿನಿಂದ ಪುಸ್ತಕಗಳು, ಕುರ್ಚಿ, ಟೇಬಲ್, ಪತ್ರಿಕೆ, ನಿಯತಕಾಲಿಕೆ ಇಡಲು ಸ್ಥಳದ ಕೊರತೆ ಎದುರಾಗುತಿತ್ತು. ವಿದ್ಯಾರ್ಥಿಗಳು ಕೂರಲು ಭಯಪಡುತ್ತಿದ್ದರು.

ADVERTISEMENT

ಗ್ರಂಥಾಲಯದ ಹೀನ ಸ್ಥಿತಿ ಅರಿತ ಗ್ರಾಮದ ರಾಹುಲ್ ಗೊಡೇಕರ್, ಮಾರ್ತಾಂಡಪ್ಪ ಮಾನೇಗಾರ್ ನೇತೃತ್ವದ ಯುವಕರ ತಂಡದ ಸದಸ್ಯರು ಗ್ರಾಮ ಪಂಚಾಯಿತಿ, ಪುಸ್ತಕ ಪ್ರೇಮಿಗಳು, ದಾನಿಗಳಿಂದ ಆರ್ಥಿಕ ನೆರವು ಪಡೆದರು. ವಾರ್ಡ್ ಸಂಖ್ಯೆ 4ರಲ್ಲಿನ ಸಮಾಜ ಕಲ್ಯಾಣ ವಸತಿ ನಿಲಯದ ಅಂಗಳದಲ್ಲಿರುವ ಶಿಕ್ಷಕರ ತರಬೇತಿ ಕೇಂದ್ರದ ಕಟ್ಟಡಕ್ಕೆ ಬಣ್ಣ, ಸುಣ್ಣ ಬಡೆದು ದುರಸ್ತಿ ಮಾಡಿಸಿದರು.

ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತಹ ಪುಸ್ತಕಗಳು, ಕಥೆ, ಕಾದಂಬರಿ, ಮ್ಯಾಗಜೀನ್ ಪತ್ರಿಕೆಗಳು ಸಂಗ್ರಹಿಸಲಾಗಿದೆ. ವಿದ್ಯಾರ್ಥಿಗಳ ಓದಿಗೆ ಅನುಕೂಲವಾಗಲು ಕುರ್ಚಿ, ಮೇಜುಗಳನ್ನು ಹಾಕಲಾಗಿದೆ. ಗ್ರಂಥಾಲಯದ ಸುತ್ತಲು ಗಿಡ ಮರಗಳಿರುವುದರಿಂದ ಸ್ವಚ್ಛಂದವಾದ ಹಸಿರು ವಾತಾವರಣ ನಿರ್ಮಾಣ ವಾಗಿದೆ. ಗಿಡದ ಕೆಳಗೆ ಕುಳಿತುಕೊಂಡು ಓದಲು ಕಲ್ಲಿನಿಂದ ನಿರ್ಮಿಸಿದ ಆಸನ, ಕುಡಿಯಲು ಶುದ್ಧವಾದ ನೀರಿನ ವ್ಯವಸ್ಥೆ ಮಾಡಲಾಗಿದೆ.

ಗ್ರಾಮಸ್ಥರ ಸಹಕಾರ, ಯುವಕರ ಇಚ್ಛಾಶಕ್ತಿಯಿಂದ, ಸಾರ್ವಜನಿಕ ಗ್ರಂಥಾಲಯ ವಿಧ್ಯಾರ್ಥಿಗಳ ಓದಿಗೆ ಸುತ್ತಲಿನ ಗ್ರಾಮಗಳಿಗೆ ಮಾದರಿಯಾಗಿದೆ.

ಗ್ರಾಮದ ಯುವಕ ವಿಜಯ್ ಕುಮಾರ್ ಚಟ್ನಳ್ಳಿ ಪತ್ರಿಕೆಯೊಂದಿಗೆ ಮಾತನಾಡಿ, ‘ವಿದ್ಯಾರ್ಥಿಗಳ ಓದಿಗೆ ಗ್ರಂಥಾಲಯ
ಅನುಕೂಲಕರವಾಗಿದ್ದು. ಮುಂದಿನ ದಿನಗಳಲ್ಲಿ ನಾವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.