ADVERTISEMENT

ಶಾಲಾ– ಕಾಲೇಜುಗಳ ಶುಲ್ಕ ಸರ್ಕಾರವೇ ಭರಿಸಲಿ: ಎಐಡಿಎಸ್‍ಒ ಮನವಿ

‘ಅಖಿಲ ಕರ್ನಾಟಕ ಆಗ್ರಹ ದಿನ’

​ಪ್ರಜಾವಾಣಿ ವಾರ್ತೆ
Published 26 ಮೇ 2020, 17:53 IST
Last Updated 26 ಮೇ 2020, 17:53 IST
ಎಐಡಿಎಸ್‍ಒ ಜಿಲ್ಲಾ ಸಮಿತಿಯಿಂದ ‘ಅಖಿಲ ಕರ್ನಾಟಕ ಆಗ್ರಹ ದಿನ’ ಅಂಗವಾಗಿ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು
ಎಐಡಿಎಸ್‍ಒ ಜಿಲ್ಲಾ ಸಮಿತಿಯಿಂದ ‘ಅಖಿಲ ಕರ್ನಾಟಕ ಆಗ್ರಹ ದಿನ’ ಅಂಗವಾಗಿ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು   

ಯಾದಗಿರಿ: ಕೋವಿಡ್-19 ಪರಿಣಾಮ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರೆ ನೀಡಿದ್ದ ‘ಅಖಿಲ ಕರ್ನಾಟಕ ಆಗ್ರಹ ದಿನ’ದ ಅಂಗವಾಗಿ ಎಐಡಿಎಸ್‍ಒ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಎಐಡಿಎಸ್‍ಒ ಜಿಲ್ಲಾದ್ಯಕ್ಷ ಎಚ್.ಪಿ.ಸೈದಪ್ಪ ಮಾತನಾಡಿ, ‘ಮಕ್ಕಳ ಶಿಕ್ಷಣ ಪೋಷಕರಿಗೆ ಹೊರೆಯಾಗದ ಹಾಗೆ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲಾ– ಕಾಲೇಜುಗಳ ಶುಲ್ಕವನ್ನು ಸರ್ಕಾರವೇ ಭರಿಸಬೇಕು. ವಿಶ್ವವಿದ್ಯಾಲಯಗಳ ಪರೀಕ್ಷಾ ಶುಲ್ಕ ರದ್ದುಗೊಳಿಸಬೇಕು. ಈಗಾಗಲೇ ಶುಲ್ಕ ಪಡೆದಿದ್ದಲ್ಲಿ, ಅದನ್ನು ವಾಪಸು ಮಾಡಬೇಕು. ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಬೇಕು. ಎಲ್ಲಾ ವಿದ್ಯಾರ್ಥಿಗಳ ಶಿಷ್ಯ ವೇತನವನ್ನು ಹೆಚ್ಚಿಸಿ, ಕಡ್ಡಾಯವಾಗಿ ನೀಡಬೇಕು. ಸರ್ಕಾರಿ ಹಾಸ್ಟೆಲ್‌ಗಳ ಅನುದಾನವನ್ನು ಹೆಚ್ಚಿಸಬೇಕು ಹಾಗೂ ಹಾಸ್ಟೆಲ್ ಸೌಕರ್ಯಗಳನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಒದಗಿಸಬೇಕು ಎಂದು ಆಗ್ರಹಿಸಿದರು.

‘ಆನ್‌ಲೈನ್ ತರಗತಿಗಳ ಆಧಾರದ ಮೇಲೆ ಪರೀಕ್ಷೆಗಳನ್ನು ನಡೆಸಬಾರದು. ಪರೀಕ್ಷೆಯ ರೂಪುರೇಷೆಯನ್ನು ಶಿಕ್ಷಣ ತಜ್ಞರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೊತೆಯಲ್ಲಿ ಚರ್ಚಿಸಿ ಪ್ರಜಾತಾಂತ್ರಿಕವಾಗಿ ರೂಪಿಸಬೇಕು. ಕ್ವಾರೆಂಟೈನ್ ಕೇಂದ್ರಗಳಾಗಿ ಬಳಸಿದ ಶಾಲೆ, ಕಾಲೇಜು ಹಾಗೂ ಹಾಸ್ಟೆಲ್ ಕಟ್ಟಡಗಳನ್ನು ಸಂಪೂರ್ಣವಾಗಿ ಶುದ್ಧೀಕರಿಸಿ ಸ್ಯಾನಿಟೈಸ್ ಮಾಡಿದ ನಂತರವೇ ವಿದ್ಯಾರ್ಥಿಗಳಿಗೆ ಅದನ್ನು ತೆರೆಯಬೇಕು. ಇತರ ಕ್ಷೇತ್ರಗಳ ಕಷ್ಟದಲ್ಲಿರುವ ಜನರಿಗೆ ಮತ್ತು ಸಮೂಹಗಳಿಗೆ ನೀಡಿದಂತೆ ವಿದ್ಯಾರ್ಥಿ ಸಮುದಾಯಕ್ಕೂ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲೆಯಾದ್ಯಂತ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಪೋಷಕರು, ಹಾಗೂ ಶಿಕ್ಷಣ ಪ್ರೇಮಿ ಜನತೆಯು ಬೇಡಿಕೆಯ ಫಲಕಗಳನ್ನು ಹಿಡಿದುಕೊಂಡು, ಆನ್‌ಲೈನ್ ಮೂಲಕ, ತಮ್ಮ ಭಾವಚಿತ್ರವನ್ನು ಮತ್ತು ವಿಡಿಯೋಗಳನ್ನು ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಈ ವೇಳೆ ಎಐಡಿಎಸ್‍ಒ ಕಾರ್ಯದರ್ಶಿ ಬಿ.ಕೆ.ಸುಭಾಷ್ಚಂದ್ರ, ಉಪಾಧ್ಯಕ್ಷೆ ಬಿ.ಸಿಂಧು, ಸಹಕಾರ್ಯದರ್ಶಿ ಕೆ.ಎಸ್.ಚೇತನಾ, ಪ್ರಿಯಾಂಕಾ, ಭಾಗ್ಯಶ್ರೀ, ಮಾಳಪ್ಪ, ವಿಶ್ವರಾಧ್ಯ, ವಿಶ್ವನಾಥ, ಪ್ರವೀಣ್, ವಿಕಾಸ, ಭವಾನಿ, ಪ್ರಿಯಾಂಕಾ, ಚೈತ್ರಾ, ನಿಖಿತಾ, ಮಂಜುಶ್ರೀ, ಸೌಮ್ಯಾ, ರಾಮಕೃಷ್ಣ, ಗಿರಿಜಾ, ಶ್ವೇತಾ, ವಿದ್ಯಾ, ಜ್ಯೋತಿ, ನಾಗರಾಜ ಸೇರಿದಂತೆ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT