ADVERTISEMENT

ಸುರಪುರ| ‘ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ’: ಎಚ್.ಎ. ಸರಕಾವಸ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 8:20 IST
Last Updated 3 ಆಗಸ್ಟ್ 2025, 8:20 IST
ಸುರಪುರ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ವ್ಯಸನ ಮುಕ್ತ ದಿನ ಆಚರಿಸಲಾಯಿತು
ಸುರಪುರ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ವ್ಯಸನ ಮುಕ್ತ ದಿನ ಆಚರಿಸಲಾಯಿತು   

ಸುರಪುರ: ‘ಸ್ವಾಸ್ಥ್ಯ ಸಮಾಜ ನಿರ್ಮಾಣವಾದರೆ ಮಾತ್ರ ಬದುಕು ಸುಂದರವಾಗುತ್ತದೆ. ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು’ ಎಂದು ತಹಶೀಲ್ದಾರ್ ಎಚ್.ಎ. ಸರಕಾವಸ್ ಹೇಳಿದರು.

ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆಯಲ್ಲಿ ಮಹಾಂತ ಶಿವಯೋಗಿ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

‘ಎಲ್ಲ ಸಂಪತ್ತಿಗಿಂತಲೂ ಆರೋಗ್ಯ ಸಂಪತ್ತು ಮುಖ್ಯವಾಗಿದೆ. ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಶರೀರ ಮತ್ತು ಯೋಗ್ಯವಾದ ಮಾನಸಿಕತೆಯನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ದುಶ್ಚಟಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನು ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನ ಮುಕ್ತ ಸಮಾಜಕ್ಕೆ ಶ್ರಮಿಸಿದವರು ಮಹಾಂತ ಶಿವಯೋಗಿಗಳು’ ಎಂದರು.

‘ಅವರ ಜನ್ಮದಿನವನ್ನು ಸರ್ಕಾರ ವ್ಯಸನ ಮುಕ್ತ ದಿನಾಚರಣೆಯಾಗಿ ಆಗಸ್ಟ್ 1ರಂದು ಆಚರಿಸುತ್ತದೆ. ಸಾರ್ವಜನಿಕರು ಹಾಗೂ ಯುವಜನರು ವ್ಯಸನಗಳಿಂದ ಮುಕ್ತವಾಗಲು ದಿನಾಚರಣೆ ಪ್ರೇರಣೆಯಾಗಲಿದೆ’ ಎಂದು ತಿಳಿಸಿದರು.

‘ಮನಸ್ಸು, ದೇಹ, ಕುಟುಂಬ ಹಾಗೂ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ವ್ಯಸನ ದಾಸ್ಯವೂ ಸಹ ಸಾಮಾಜಿಕ ಪಿಡುಗಗಳಲ್ಲಿ ಒಂದಾಗಿದೆ. ಇಂತಹ ದುಶ್ಚಟಗಳಿಗೆ ಒಳಗಾಗಿರುವವರನ್ನು ವ್ಯಸನ ಮುಕ್ತಗೊಳಿಸುವ ಉದ್ದೇಶದಿಂದ ಮಹಾಂತ ಶಿವಯೋಗಿಗಳು ಮಹಾಂತ ಜೋಳಿಗೆ 1975 ರಿಂದ ಯೋಜನೆ ಪ್ರಾರಂಭಿಸಿ ಯಶಸ್ವಿಯಾದರು’ ಎಂದು ವಿವರಿಸಿದರು.

ತಹಶೀಲ್ದಾರ್ ಕಚೇರಿಯ ಸಿಬ್ಬಂದಿ, ಸಾರ್ವಜನಿಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.