ಶಹಾಪುರ: 'ಕಾರ್ಮಿಕರ ಕುಟುಂಬದ ಆರ್ಥಿಕ ಭದ್ರತೆ ಹಾಗೂ ರಕ್ಷಣೆ ನೀಡುವಲ್ಲಿ ಜೀವ ವಿಮಾ ಪಾಲಿಸಿ ಅಗತ್ಯವಿದೆ. ಅದರಂತೆ ಕಾರ್ಮಿಕರು ಪ್ರಧಾನಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆಯ ಕಡಿಮೆ ವಾರ್ಷಿಕ ವಂತಿಕೆ ಜೀವ ವಿಮಾ ಪಾಲಿಸಿ ಮಾಡಿಸಿಕೊಳ್ಳಿ’ ಎಂದು ಕೂಲಿ ಕಾರ್ಮಿಕರಿಗೆ ತಾ.ಪಂ. ಇಒ ಬಸವರಾಜ ಶರಬೈ ತಿಳಿಸಿದರು.
ತಾಲ್ಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಅಬ್ದುಲ ಬಾಷಾ ಕೂಲಿ ಕಾರ್ಮಿಕರ ಸಂಘದ ಆಶ್ರಯದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಬುಧವಾರ ನರೇಗಾ ಕೂಲಿ ಕಾರ್ಮಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
‘ಜೀವನ ಜ್ಯೋತಿ ಭಿಮಾ ಯೋಜನೆ ವಾರ್ಷಿಕ ₹429 ಪಾವತಿಸಿದರೆ ಅಪಘಾತದಲ್ಲಿ ಸಾವು ಸಂಭವಿಸಿದರೆ ₹2ಲಕ್ಷ ಪರಿಹಾರ ಮೃತ ಕುಟುಂಬಕ್ಕೆ ದೊರಕುತ್ತದೆ. ನಿತ್ಯ ಶ್ರಮವಹಿಸಿ ದುಡಿಯುವ ಕಾರ್ಮಿಕರಿಗೆ ಆರೋಗ್ಯದ ಬಗ್ಗೆ ಕಾಳಜಿ ಮುಖ್ಯ. ಕೂಲಿ ಕಾರ್ಮಿಕರು ರಕ್ತದೊತ್ತಡ, ಸಕ್ಕರೆ ಕಾಯಿಲೆ, ಅಪೌಷ್ಟಿಕತೆ, ಅಸ್ತಮಾ ಕಾಯಿಲೆಗಳ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ತಪಾಸಣೆ ಮಾಡಿಕೊಳ್ಳಬೇಕು’ ಎಂದರು. ಇದೇ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು.
ಗ್ರಾ.ಪಂ. ಪಿಡಿಒ ಯಮನೂರಪ್ಪ ನಾಯಕ, ಗ್ರಾ.ಪಂ. ಅಧ್ಯಕ್ಷೆ ರಜಿಯಾ ಬೇಗಂ, ನಾಗರಡ್ಡಿ ಪಾಟೀಲ, ಮಲ್ಲರಡ್ಡೆಪ್ಪ ತಂಗಡಗಿ, ಸಾಬಯ್ಯ ತಂಗಡಗಿ, ಮಲ್ಲಿಕಾರ್ಜುನ ಮೇಟಿ, ತಾಂತ್ರಿಕ ಸಹಾಯಕ ಸಂಪತಕುಮಾರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.