ADVERTISEMENT

ಲಾಕ್‌ಡೌನ್ ಸಂಕಷ್ಟದಲ್ಲಿ ಛಾಯಾಗ್ರಾಹಕರು: ಸರ್ಕಾರದಿಂದ ವಿಶೇಷ ಅನುದಾನದ ನಿರೀಕ್ಷೆ‌

ಲಾಕ್‌ಡೌನ್‌

ಮಲ್ಲಿಕಾರ್ಜುನ ಅರಿಕೇರಕರ್
Published 24 ಮೇ 2021, 7:01 IST
Last Updated 24 ಮೇ 2021, 7:01 IST
ಸೈದಾಪುರ ಪಟ್ಟಣದಲ್ಲಿರುವ ಫೋಟೋ ಸ್ಟುಡಿಯೊ ಮುಚ್ಚಿರುವುದು
ಸೈದಾಪುರ ಪಟ್ಟಣದಲ್ಲಿರುವ ಫೋಟೋ ಸ್ಟುಡಿಯೊ ಮುಚ್ಚಿರುವುದು   

ಸೈದಾಪುರ: ಕೊರೊನಾ ನಿಯಂತ್ರಿಸುವುದಕ್ಕಾಗಿ ಸರ್ಕಾರ ಜಾರಿಗೆ ತಂದ ಲಾಕ್‍ಡೌನ್ ಅಸ್ತ್ರದಿಂದಾಗಿ ಛಾಯಾಗ್ರಾಹಕರು ವ್ಯಾಪಾರವಿಲ್ಲದೇ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಇಲ್ಲದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೊರೊನಾ 2ನೇ ಅಲೆಯ ಸಂಕಷ್ಟದಿಂದಾಗಿ ತತ್ತರಿಸಿರುವ ಛಾಯಾಗ್ರಾಹಕರಿಗೆ ಸರ್ಕಾರ ಸಹಾಯಹಸ್ತ ಚಾಚುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಸರ್ಕಾರದ ₹1250 ಕೋಟಿ ವಿಶೇಷ ಪ್ಯಾಕೇಜ್‍ನಲ್ಲಿ ಛಾಯಾಗ್ರಾಹಕರಿಗೆ ನಯಾ ಪೈಸೆಯೂ ಕೂಡ ಘೋಷಣೆ ಮಾಡದೆ ನಿರಾಸೆ ಮೂಡಿಸಿದೆ. ಕಳೆದ ಬಾರಿಯು ಛಾಯಾಗ್ರಾಹಕರನ್ನು ಹೊರತುಪಡಿಸಿ ವಿವಿಧ ಅಸಂಘಟಿತ ವಲಯಗಳ ಕಾರ್ಮಿಕರು ಒಳಗೊಂಡಂತೆ ಇತರೆ ಸಮುದಾಯದಗಳಿಗೆ ವಿಶೇಷ ಪ್ಯಾಕೇಜ್‍ನ ಸಹಾಯ ದೊರಕಿತ್ತು. ಆದರೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ವಲಯ 42ನೇ ವರ್ಗಕ್ಕೆ ಸೇರಿರುವ ಛಾಯಾಗ್ರಾಹಕರಿಗೆ ಈ ಲಾಕ್‍ಡೌನ್ ಸಂಕಷ್ಟದಲ್ಲಿ ಯಾವುದೇ ಸಹಾಯ ಧನ ಘೋಷಣೆಯಾಗದೇ ಇರುವುದು ಛಾಯಾಚಿತ್ರಗ್ರಾಹಕರಿಗೆ ತೀವ್ರ ಬೇಸರವನ್ನುಂಟು ಮಾಡಿದೆ.

ಛಾಯಾಚಿತ್ರಗ್ರಾಹಕರು ವರ್ಷದಲ್ಲಿ ಕೇವಲ ಮೂರು ತಿಂಗಳು ಬಿಡುವಿಲ್ಲದೆ ದುಡಿದು ಸಂಪಾದನೆ ಮಾಡುತ್ತಿದ್ದರು. ಲಾಕ್‍ಡೌನ್ ಆದ ಪರಿಣಾಮ ಮದುವೆಗಳು, ಶುಭ ಸಮಾರಂಭಗಳು ರದ್ದಾಗಿವೆ. ಚಿತ್ರೀಕರಣ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಕೊರೊನಾ ಸೋಂಕು ಆವರಿಸಿ ಕಳೆದ ಒಂದು ವರ್ಷದಿಂದ ಪೂರ್ಣ ಪ್ರಮಾಣದ ಉದ್ಯೋಗವಿಲ್ಲದೆಪರಿತಪಿಸುತ್ತಿದ್ದಾರೆ.

ADVERTISEMENT

ನಿಯಮಿತ ಆದಾಯವಿಲ್ಲದೆ ಅಂಗಡಿಯ ಬಾಡಿಗೆ, ಮನೆ ಬಾಡಿಗೆ, ವಿದ್ಯುತ್ ಬಿಲ್ ಕಟ್ಟಲಾಗುತ್ತಿಲ್ಲ. ಎರಡು ವರ್ಷ ಕಳೆದರೂ ಒಂದೇ ಒಂದು ಕಾರ್ಯಕ್ರಮದ ಆಮಂತ್ರಣವಿಲ್ಲದೆ ಸ್ಟುಡಿಯೋಗಳು ಸಂಪೂರ್ಣವಾಗಿ ಮುಚ್ಚಿ ಹೋಗಿವೆ. ಇದರಿಂದ ಸ್ಟುಡಿಯೋಗಳಲ್ಲಿ ಕಾರ್ಯ ನಿರ್ವಹಿಸುವ ಅರೆಕಾಲಿಕ ಕೆಲಸಗಾರರಿಗೆ, ಕ್ಯಾಮರಾ ನಿರ್ವಹಣೆ ಮಾಡುವವರಿಗೆ ತಿಂಗಳ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರ ರಾಜ್ಯದ ಅಸಂಘಟಿತ ಸಮುದಾಯಗಳಿಗೆ, ಕಾರ್ಮಿಕರಿಗೆ, ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಆಸರೆಯಾಗಿದ್ದಾರೆ. ಆದರೆ ‌ನಮಗೆ ಮಾತ್ರ ಕಳೆದ ಬಾರಿಯಾಗಲಿ, ಈ ಬಾರಿಯಾಗಲಿ ವಿಶೇಷ ಪ್ಯಾಕೇಜ್‍ನಡಿಯಲ್ಲಿ ಸಹಾಯಧನ ಘೋಷಣೆ ಮಾಡದಿರುವುದರಿಂದ ಬದುಕು ದುಸ್ತರ ಆಗಿದೆ ಎಂದು ಛಾಯಾಗ್ರಾಹಕರು ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.