ADVERTISEMENT

ಸುರಪುರ: ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಹಣಾಹಣಿ!

ಸುರಪುರ ವಿಧಾನಸಭೆ ಉಪ ಚುನಾವಣೆ ರಾಜೂಗೌಡಗೆ ಬಿಜೆಪಿ ಟಿಕೆಟ್

ಅಶೋಕ ಸಾಲವಾಡಗಿ
Published 27 ಮಾರ್ಚ್ 2024, 5:26 IST
Last Updated 27 ಮಾರ್ಚ್ 2024, 5:26 IST
ರಾಜೂಗೌಡ
ರಾಜೂಗೌಡ   

ಸುರಪುರ: ಸುರಪುರ ವಿಧಾನಸಭೆ ಉಪ ಚುನಾವಣೆಗೆ ಮಾಜಿ ಸಚಿವ ನರಸಿಂಹನಾಯಕ (ರಾಜೂಗೌಡ) ಅವರಿಗೆ ನಿರೀಕ್ಷೆಯಂತೆ ಬಿಜೆಪಿ ಮಂಗಳವಾರ ಟಿಕೆಟ್ ಘೋಷಣೆ ಮಾಡಿದೆ.

ಶಾಸಕ ರಾಜಾ ವೆಂಕಟಪ್ಪನಾಯಕ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಮೇ 7 ರಂದು ಉಪ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ಈಗಾಗಲೆ ರಾಜಾ ವೆಂಕಟಪ್ಪನಾಯಕ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ಅವರನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದೆ. ಹೀಗಾಗಿ ಇಬ್ಬರ ಮಧ್ಯ ನೇರ ಹಣಾಹಣಿ ನಡೆಯಲಿದೆ.

27 ಡಿಸೆಂಬರ್ 1978 ರಂದು ಜನಿಸಿದ ರಾಜೂಗೌಡ ಕಲಬುರಗಿ ವಿಜಯ ವಿದ್ಯಾಲಯದಲ್ಲಿ ಪಿಯುಸಿವರೆಗೆ ಅಭ್ಯಾಸ ಮಾಡಿದ್ದಾರೆ. ಧರ್ಮ ಪತ್ನಿ ಮೈತ್ರಾನಾಯಕ, ಏಕೈಕ ಪುತ್ರ ಮಣಿಕಂಠನಾಯಕ.

ADVERTISEMENT

1999ರಲ್ಲಿ ತಮ್ಮ 21ನೇ ವಯಸ್ಸಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಕೊಡೇಕಲ್ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದರು.

ಮೊದಲು ಅಂದಿನ ಶಾಸಕ ರಾಜಾ ವೆಂಕಟಪ್ಪನಾಯಕ ಅವರ ಜತೆಗಿದ್ದ ರಾಜೂಗೌಡ ನಂತರ ಭಿನ್ನಾಭಿಪ್ರಾಯ ಹೊಂದಿ ಅವರ ವಿರುದ್ಧವೇ 2004 ರಲ್ಲಿ ಕನ್ನಡನಾಡು ಪಕ್ಷದಿಂದ ಶಾಸಕರಾಗಿ ಆಯ್ಕೆಯಾದರು.

2008ರಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಪುನರಾಯ್ಕೆ ಹೊಂದಿದರು. 2012 ರಲ್ಲಿ ಜಗದೀಶ ಶೆಟ್ಟರ್ ಸಂಪುಟದಲ್ಲಿ ಸಣ್ಣಕೈಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿದರು.2013ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡರು. ಮತ್ತೇ ಬಿಜೆಪಿಯತ್ತ ಮುಖಮಾಡಿ ರಾಜ್ಯ ಎಸ್‍ಟಿ ಮೋರ್ಚಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

2018 ರಲ್ಲಿ ಬಿಜೆಪಿಯಿಂದ ಶಾಸಕರಾದರು. 2020 ರಲ್ಲಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2023ರಲ್ಲಿ ಪರಾಭವಗೊಂಡರು. 2024ರಿಂದ ಬಿಜೆಪಿ ರಾಜ್ಯ ಸಮಿತಿ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಪ್ರತಿ ಬಾರಿ ರಾಜಾ ವೆಂಕಟಪ್ಪನಾಯಕ ಅವರ ವಿರುದ್ಧವೇ ನೇರ ಸ್ಪರ್ಧೆ ಏರ್ಪಟ್ಟಿದೆ. ಈ ಬಾರಿ ಅವರ ಪುತ್ರನನ್ನು ಎದುರಿಸುತ್ತಿದ್ದಾರೆ. ಮೂರು ಬಾರಿ ಗೆದ್ದು ಎರಡು ಬಾರಿ ಸೋಲುಂಡಿದ್ದಾರೆ. ಈಗ 6ನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

2018ರ ಚುನಾವಣೆಯಲ್ಲಿ ರಾಜಾ ವೆಂಕಟಪ್ಪನಾಯಕ ಅವರನ್ನು 25 ಸಾವಿರ ಮತಗಳಿಂದ ಸೋಲಿಸಿದ್ದ ರಾಜೂಗೌಡ, 2023ರಲ್ಲಿ ಸರಿ ಸುಮಾರು ಅಷ್ಟೆ ಮತಗಳಿಂದ ರಾಜಾ ವೆಂಕಟಪ್ಪನಾಯಕ ಅವರಿಗೆ ಮಣಿದಿದ್ದರು.


ರಾಜಾ ವೆಂಕಟಪ್ಪನಾಯಕ ತಮ್ಮ ಕೊನೆಯ ಚುನಾವಣೆ ಎಂದು ಮತಯಾಚಿಸಿ ಮತದಾರರ ಮನ ಗೆದ್ದಿದ್ದರು. ಈಗ ಅವರ ಪುತ್ರ ರಾಜಾ ವೇಣುಗೋಪಾಲನಾಯಕ ಪ್ರಥಮ ಬಾರಿಗೆ ಚುನಾವಣೆ ಎದುರಿಸುತ್ತಿದ್ದು, ಅನುಕಂಪದ ಅಲೆ ಮತ್ತು ಆಡಳಿತ ಸರ್ಕಾರದ ಬೆಂಬಲ ಹೊಂದಿದ್ದಾರೆ. ರಾಜೂಗೌಡ ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.