ADVERTISEMENT

ಯಾದಗಿರಿ | ಲೋಕಾಯುಕ್ತ ಪೊಲೀಸರ ದಿಢೀರ್‌ ಭೇಟಿ: ಭೂ ದಾಖಲೆಗಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 5:55 IST
Last Updated 9 ಅಕ್ಟೋಬರ್ 2025, 5:55 IST
ಯಾದಗಿರಿಯ ಭೂ ದಾಖಲೆಗಳ ಕಚೇರಿಗೆ ಬುಧವಾರ ಭೇಟಿ ನೀಡಿದ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ರಾಜಶೇಖರ ಹಳಗೋಧಿ ಅವರು ಕಡತ ಪರಿಶೀಲನೆ ಮಾಡಿದರು
ಯಾದಗಿರಿಯ ಭೂ ದಾಖಲೆಗಳ ಕಚೇರಿಗೆ ಬುಧವಾರ ಭೇಟಿ ನೀಡಿದ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ರಾಜಶೇಖರ ಹಳಗೋಧಿ ಅವರು ಕಡತ ಪರಿಶೀಲನೆ ಮಾಡಿದರು   

ಯಾದಗಿರಿ: ಇಲ್ಲಿನ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಭೂ ದಾಖಲೆಗಳ ಕಚೇರಿಗೆ ಲೋಕಾಯುಕ್ತ ಪೊಲೀಸರು ಬುಧವಾರ ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು.

ಲೋಕಾಯುಕ್ತ ಇನ್‌ಸ್ಪೆಕ್ಟರ್‌ ರಾಜಶೇಖರ ಹಳಗೋಧಿ, ಹೆಡ್‌ಕಾನ್‌ಸ್ಟೆಬಲ್ ಅಮರನಾಥ್ ಅವರಿದ್ದ ತಂಡ ಭೇಟಿ ನೀಡಿ, ಮಧ್ಯಾಹ್ನ ಸುಮಾರು 2.30ರ ವರೆಗೆ ಕಡತಗಳ ಪರಿಶೀಲನೆ ನಡೆಸಿತು.  

ಕಚೇರಿಯಲ್ಲಿ ಸಕಾಲದಲ್ಲಿ ಸಾರ್ವಜನಿಕರ ಕೆಲಸ ಮಾಡದೆ ಕಚೇರಿಗೆ ಅಲೆದಾಡಿಸುವುದು, ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ, ಕರ್ತವ್ಯ ನಿರ್ವಹಣೆ ಸಂಬಂಧ ಸಿಬ್ಬಂದಿಗೆ ನೋಟಿಸ್‌ ಕೊಟ್ಟ ಬಳಿಕ ತೆಗೆದುಕೊಂಡ ಕ್ರಮ ಸೇರಿದಂತೆ ಇತರೆ ಮಾಹಿತಿಯನ್ನು ಪಡೆದರು.

ADVERTISEMENT

ನಿಯಮಿತವಾಗಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಂದ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿಯ ಪ್ರಕ್ರಿಯೆಯನ್ನು ಪರಿಶೀಲನೆ ಮಾಡಲಾಗುತ್ತಿದೆ. ಬಹುತೇಕ ಆನ್‌ಲೈನ್ ಸೇವೆ ಇರುವುದರಿಂದ ನಿಗದಿತ ಸಮಯಕ್ಕಿಂತ ಹೆಚ್ಚಿನ ದಿನಗಳವರೆಗೆ ವಿಲೇವಾರಿ ಮಾಡದೆ ಉಳಿಸಿಕೊಳ್ಳುವಂತೆ ಇಲ್ಲ. ಆದರೂ ಪರಿಶೀಲನೆ ಮಾಡಿ, ಕಲೆಹಾಕಿದ ವರದಿಯನ್ನು ರಾಜ್ಯ ಲೋಕಾಯುಕ್ತಕ್ಕೆ ಸಲ್ಲಿಕೆ ಮಾಡುತ್ತೇವೆ ಎಂದು ಲೋಕಾಯುಕ್ತ ಪೊಲೀಸರೊಬ್ಬರು ಮಾಹಿತಿ ಹಂಚಿಕೊಂಡರು.

ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ಲೋಕಾಯುಕ್ತ ಅಧಿಕಾರಿಗಳ ದೂರವಾಣಿ ಸಂಖ್ಯೆ ಇರುವ ಬಿತ್ತಿ ಪತ್ರ ಅಂಟಿಸುವುದನ್ನು ಪರಿಶೀಲನೆ ಮಾಡಲಾಗಿದೆ. ಮತ್ತೊಂದೆಡೆ ಕಡತಗಳ ವಿಲೇವಾರಿಯ ಮಾಹಿತಿಯೂ ಪಡೆಯಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.