
ಯಾದಗಿರಿ ಬಸ್ ನಿಲ್ದಾಣದಲ್ಲಿನ ಮೈಲಾಪುರ ಜಾತ್ರೆಯ ವಿಶೇಷ ಬಸ್‌ಗಳು
ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾಗಿರುವ ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆಯ ವೇಳೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ (ಕೆಕೆಆರ್‌ಟಿಸಿ) ಯಾದಗಿರಿ ವಿಭಾಗಕ್ಕೆ ವಿಶೇಷ ಬಸ್ ಕಾರ್ಯಾಚರಣೆಯಿಂದ ನಿರೀಕ್ಷಿತ ಆದಾಯ ಸಂಗ್ರಹವಾಗಲಿಲ್ಲ.
ಜಾತ್ರೆಯ ಅಂಗವಾಗಿ 11ರಿಂದ 17ರವರೆಗೆ ಮೈಲಾಪುರಕ್ಕೆ ಬರುವ ಭಕ್ತಾದಿಗಳ ಪ್ರಯಾಣಿಕರ ಅನುಕೂಲಕ್ಕಾಗಿ ಯಾದಗಿರಿ ವಿಭಾಗದಿಂದ 87 ವಿಶೇಷ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ಕಡಿಮೆ ಭಕ್ತರು ಬಂದಿದ್ದರಿಂದ ಟಿಕೆಟ್‌ಗಳ ಆದಾಯ ಸಂಗ್ರಹದಲ್ಲಿ ಇಳಿಕೆ ಮುಖವಾಗಿದೆ.
ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್, ವಾಡಿ, ಸೇಡಂ, ಕೊಡಂಗಲ್, ನಾರಾಯಣಪೇಟ, ತಾಳಿಕೋಟೆ, ಹುಣಸಗಿ, ಕೆಂಭಾವಿ, ಸಿಂದಗಿ, ಹುಬ್ಬಳ್ಳಿ, ಗದಗ, ರಾಯಚೂರು, ಕಲಬುರಗಿ ಸೇರಿದಂತೆ ಮುಂತಾದ ಸ್ಥಳಗಳಿಗೆ ಕಾರ್ಯಾಚರಣೆ ಮಾಡಲಾಗಿತ್ತು. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚುವರಿಯಾಗಿ ಬಸ್‌ಗಳನ್ನು ರಸ್ತೆಗೆ ಇಳಿಸಿದ್ದರೂ ನಿರೀಕ್ಷೆ ಹುಸಿಯಾಗಿದೆ.
ಜಾತ್ರೆಗಾಗಿ 80ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿಯನ್ನು ನಿಯೋಜನೆ ಮಾಡಿ, ಯಾದಗಿರಿ ಕೇಂದ್ರ, ರಾಮಸಮುದ್ರ, ಶಹಾಪುರ, ಸುರಪುರ, ಕೆಂಭಾವಿ ಸೇರಿದಂತೆ ಹಲವೆಡೆ ಪಾಯಿಂಟ್‌ಗಳನ್ನು ಮಾಡಿಕೊಂಡು 87 ವಿಶೇಷ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿತ್ತು. ಯಾದಗಿರಿ ವಿಭಾಗ ಸೇರಿ ನೆರೆಯ ಕಲಬುರಗಿ, ಬೀದರ್, ರಾಯಚೂರು, ಬಳ್ಳಾರಿ ಹಾಗೂ ವಿಜಯಪುರ ವಿಭಾಗಗಳಿಂದ ಬಸ್‌ಗಳನ್ನು ಪಡೆಯಲಾಗಿತ್ತು. ನಿತ್ಯ 350ಕ್ಕೂ ಹೆಚ್ಚು ಮಂದಿಗೆ ಊಟದ ವ್ಯವಸ್ಥೆ ಮಾಡಿಕೊಂಡಿದ್ದರೂ ಕಳೆದ ವರ್ಷದ ಆದಾಯ ಸಂಗ್ರಹವನ್ನು ಮೀರಲು ಆಗಲಿಲ್ಲ.
ಈ ಹಿಂದಿನ ವರ್ಷದಲ್ಲಿ 70 ಬಸ್‌ಗಳನ್ನು ವಿಶೇಷ ಕಾರ್ಯಾಚರಣೆಗೆ ಇಳಿಸಿ, ಸುಮಾರು ₹ 75 ಲಕ್ಷ ಆದಾಯ ಸಂಗ್ರಹಿಸಲಾಗಿತ್ತು. ನಿರೀಕ್ಷೆಗೆ ಮೀರಿ ಭಕ್ತರು ಬಂದಿದ್ದರಿಂದ ನಿಭಾಯಿಸುವುದು ಕಷ್ಟವಾಗಿತ್ತು. ಹೀಗಾಗಿ, ಈ ಬಾರಿ ಆದಾಯದ ಗುರಿಯನ್ನು ₹ 1 ಕೋಟಿಗೆ ಹಾಕಿಕೊಂಡು, ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿಕೊಂಡಿತ್ತು. ಆದರೆ, ಸಂಗ್ರಹವಾಗಿದ್ದು ಸುಮಾರು ₹ 45 ಲಕ್ಷ.
ಜಾತ್ರೆಯ ಮೇಲೆ ಅತಿವೃಷ್ಟಿಯ ಪ್ರಭಾವ: ‘ಹಳ್ಳಿಯ ರೈತರು ಸಮೃದ್ಧಿಯಾಗಿ ಇದ್ದರೆ ಮಾತ್ರ ಜಾತ್ರೆಗಳು, ಪುಣ್ಯ ಕ್ಷೇತ್ರಗಳು, ಸಮಾರಂಭಗಳು ಜನರಿಂದ ತುಂಬಿ ತುಳುಕುತ್ತವೆ. ಆದರೆ, ಈ ಬಾರಿ ಅತಿವೃಷ್ಟಿ ಹಾಗೂ ನದಿ ಪ್ರವಾಹದಿಂದಾಗಿ ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ರೈತರ ಕೈಯಲ್ಲಿ ಹಣವೂ ಇಲ್ಲ, ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಹುಮ್ಮಸ್ಸು ಇಲ್ಲದಂತೆ ಆಗಿದೆ. ಸಹಜವಾಗಿ ಜಾತ್ರೆಗೆ ಜನರು ಕಡಿಮೆಯಾಗಿ, ಬಸ್‌ಗಳ ಆದಾಯದ ಮೇಲೆ ಪ್ರಭಾವ ಬೀರಿದೆ’ ಎನ್ನುತ್ತಾರೆ ಕೆಕೆಆರ್‌ಟಿಸಿಯ ಅಧಿಕಾರಿ.
‘ಶಕ್ತಿ ಯೋಜನೆ ಬಂದ ಬಳಿಕ ಮಹಿಳೆಯರು ಜಾತ್ರೆಯ ದಿನಗಳ ಗದ್ದಲಲ್ಲಿ ಹೋಗುವುದಕ್ಕಿಂತ ಸಾಮಾನ್ಯ ದಿನಗಳ ಭಾನುವಾರದಂದು ಕ್ಷೇತ್ರಕ್ಕೆ ಬಂದು ಹೋಗಿರಬಹುದು. ಇದರಿಂದಲೂ ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿಮೆ ಆಗಿರಬಹುದು’ ಎನ್ನುತ್ತಾರೆ.
‘ಗಂಗಾಸ್ನಾನದ ಹಿಂದಿನ ದಿನದಿಂದಲೂ ಟ್ರಿಪ್ ಇಳಿಕೆ’
‘ಮೈಲಾರಲಿಂಗೇಶ್ವರರ ಗಂಗಾಸ್ನಾನದ ಹಿಂದಿನ (ಜನವರಿ 14) ದಿನದಿಂದಲೇ ಭಕ್ತರ ದಂಡು ಮೈಲಾಪುರದತ್ತ ಹೆಜ್ಜೆ ಹಾಕುತ್ತಾರೆ. ಕಳೆದ ವರ್ಷ ಜ.13ರಂದು 120ಕ್ಕೂ ಹೆಚ್ಚು ಟ್ರಿಪ್‌ಗಳು ಆಗಿದ್ದವು. ಆದರೆ ಈ ವರ್ಷ ಸುಮಾರು 100 ಟ್ರಿಪ್‌ಗಳಾದವು’ ಎಂದು ಕೆಕೆಆರ್‌ಟಿಸಿ ಯಾದಗಿರಿ ವಿಭಾಗದ ನಿಯಂತ್ರಣಾಧಿಕಾರಿ ಜಿ.ಬಿ.ಮಂಜುನಾಥ ‘ಪ್ರಜಾವಾಣಿ’ಗೆ ತಿಳಿಸಿದರು. ‘ಗಂಗಾಸ್ನಾನವಾದ ಬಳಿಕ ರಾತ್ರಿ 8ರಿಂದ 9 ಗಂಟೆಯವರೆಗೆ 10ರಿಂದ 15 ನಿಮಷಕ್ಕೆ ಒಂದೊಂದು ಬಸ್ ಭರ್ತಿ ಆಗುತ್ತಿದ್ದವು. ಈ ಬಾರಿ ಸಂಜೆ 5ರ ವೇಳೆಗೆ ಮಾತ್ರವೇ 10ರಿಂದ 15 ನಿಮಿಷಗಳಿಗೆ ಒಂದೊಂದು ಬಸ್ ಭರ್ತಿಯಾಗಿ ಹೊರಟವು. ಆ ಬಳಿಕ ಕಾರ್ಯಾಚಾರಣೆ ಮಂದವಾಗಿತ್ತು’ ಎಂದು ಮಾಹಿತಿ ನೀಡಿದರು. ‘ಕಳೆದ ವರ್ಷದ ಭಕ್ತರ ದಟ್ಟಣೆಯಿಂದಾಗಿ ಕಾರ್ಯಾಚರಣೆ ನಿಭಾಯಿಸುವುದು ಕಷ್ಟವಾಗಿತ್ತು. ಈ ಬಾರಿ ಮುಂಚಿತವಾಗಿ ಮೈಲಾಪುರಕ್ಕೆ ಭೇಟಿ ನೀಡಿ ಪೂರ್ವತಯಾರಿ ಮಾಡಿಕೊಂಡು ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಿರೀಕ್ಷಿಸಿದಷ್ಟು ಆದಾಯ ಸಂಗ್ರಹವಾಗದೆ ₹ 45 ಲಕ್ಷದಷ್ಟು ಬಂದಿದೆ. ಸಂಸ್ಥೆಯಿಂದ ಜಾತ್ರೆಗಾಗಿ ಭಕ್ತರಿಗೆ ಪ್ರಯಾಣಿಕ ಸೇವೆ ನೀಡಿದ್ದರ ಸಂತೋಷವಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.