ADVERTISEMENT

ಸುರಪುರ | ರಂಗಕರ್ಮಿ ಮಲ್ಲೇಶ್ ಕೋನ್ಹಾಳಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ

ಅಶೋಕ ಸಾಲವಾಡಗಿ
Published 25 ಜುಲೈ 2025, 6:31 IST
Last Updated 25 ಜುಲೈ 2025, 6:31 IST
ಮಸಣ ಸೇರಿದ ಮಲ್ಲಿಗೆ ಹೂ ನಾಟಕದಲ್ಲಿ ತಂದೆ ಪಾತ್ರದಲ್ಲಿ ಮಲ್ಲೇಶ್ ಕೋನ್ಹಾಳ (ಬಲದಿಂದ ಮೊದಲನೆಯವರು)
ಮಸಣ ಸೇರಿದ ಮಲ್ಲಿಗೆ ಹೂ ನಾಟಕದಲ್ಲಿ ತಂದೆ ಪಾತ್ರದಲ್ಲಿ ಮಲ್ಲೇಶ್ ಕೋನ್ಹಾಳ (ಬಲದಿಂದ ಮೊದಲನೆಯವರು)   

ಸುರಪುರ: ತಾಲ್ಲೂಕಿನಿಂದ 15 ಕಿ.ಮೀ ಅಂತರದಲ್ಲಿರುವ ಗ್ರಾಮ ಕೋನ್ಹಾಳ. ಅಲ್ಲಿನ ಮನೆಯೊಂದರಲ್ಲಿ ನಿತ್ಯವೂ ರಂಗ ಚಟುವಟಿಕೆ. ಬರವಣಿಗೆ, ತಾಲೀಮು ಸಾಮಾನ್ಯ.

ಖ್ಯಾತ ರಂಗಕರ್ಮಿ ಪರಿಶಿಷ್ಟ ಜಾತಿಯ ಮಲ್ಲೇಶ್ ಬಸಪ್ಪ ಕೋನ್ಹಾಳ ಅವರ ಕಾರ್ಯಕ್ಷೇತ್ರ ಆ ಮನೆ. 1970ರಲ್ಲಿ ಜನಿಸಿದ ಮಲ್ಲೇಶ್ ಪದವೀಧರರು. 1990ರಲ್ಲಿ ಆಗ ಖ್ಯಾತ ನಾಟಕ ಸಾಹಿತಿಯಾಗಿದ್ದ ಯಲ್ಲೇಶ ಯಾಳಗಿ ಅವರ ಪರಿಚಯವಾಯಿತು.

ಅವರ ಜೊತೆ ಹಲವಾರು ನಾಟಕಗಳನ್ನು ವೀಕ್ಷಿಸಿದರು. ನಾಟಕ ರಂಗಕ್ಕೆ ಆಕರ್ಷಿತರಾದ ಮಲ್ಲೇಶ್ 1992ರಿಂದ ಇಲ್ಲಿಯವರೆಗೆ ರಂಗಭೂಮಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಯಲ್ಲೇಶ್ ಯಾಳಗಿ ಅವರನ್ನು ಗುರುವಾಗಿ ಸ್ವೀಕರಿಸಿ ತಮ್ಮ ಜೀವನವನ್ನು ರಂಗಕಲೆಗೆ ಮೀಸಲಿರಿಸಿದ್ದಾರೆ.

ADVERTISEMENT

ನಾಟಕ ಸಾಹಿತ್ಯ ರಚನೆ, ನಿರ್ದೇಶನ ಮತ್ತು ನಟನೆ ಅವರಿಗೆ ಕರತಲಾಮಲಕ. ಇದುವರೆಗೂ 12 ನಾಟಕಗಳನ್ನು ಬರೆದಿದ್ದಾರೆ.

ಮೂಕನಾಯಕ ಸಾಂಸ್ಕೃತಿಕ ಕಲಾ ನಾಟ್ಯ ಸಂಘ ಕಟ್ಟಿಕೊಂಡು ನಾಡಿನಾದ್ಯಂತ ನಾಟಕ ಪ್ರದರ್ಶನ, ನಿರ್ದೇಶನ, ರಂಗ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ.
ಇವರ ಸಾಹಿತ್ಯದಲ್ಲಿ ದ್ವದಾಂರ್ಥಗಳಿಲ್ಲ. ಕುಟುಂಬದೊಂದಿಗೆ ನಾಟಕ ವೀಕ್ಷಿಸಬಹುದು.

ಎಲ್ಲವೂ ಸಮಾಜಕ್ಕೆ ಅದ್ಭುತ ಸಂದೇಶ ನೀಡುತ್ತವೆ. ಮೂಢನಂಬಿಕೆ, ಸಂಸಾರದ ತಾಪತ್ರಯಗಳು, ತೊಳಲಾಟ, ತವಕ, ತಲ್ಲಣಗಳು ಅವರ ಸಾಹಿತ್ಯದಲ್ಲಿ ಹಾಸು ಹೊಕ್ಕಾಗಿವೆ.
ಮೊದ ಮೊದಲು ಸಾಮಾಜಿಕ ನಾಟಕಗಳನ್ನು ಬರೆಯುತ್ತಿದ್ದ ಮಲ್ಲೇಶ್ ಈಚಿನ ದಿನಗಳಲ್ಲಿ ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳಿಗೆ ಬರವಣಿಗೆ ವಿಸ್ತರಿಸಿಕೊಂಡಿದ್ದಾರೆ. ಅವರು ಬರೆದ ನಾಟಕಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ.

ಅವರ ‘ಮಸಣ ಸೇರಿದ ಮಲ್ಲಿಗೆ ಹೂ’ ಒಂದು ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಬಸವಣ್ಣನವರ ಬಗ್ಗೆ ಬರೆದ ‘ಕಲ್ಯಾಣದ ಕ್ರಾಂತಿ’ ಎಲ್ಲರ ಮೆಚ್ಚುಗೆಗ ಪಾತ್ರವಾಗಿದೆ.

ಸುರಪುರದ ಕ್ರಾಂತಿವೀರ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಅವರ ಬಗ್ಗೆ ಬರೆದ ಐತಿಹಾಸಿಕ ನಾಟಕ ಪ್ರದರ್ಶನಕ್ಕೆ ಸಿದ್ಧವಾಗಿದೆ.

ಅಭಿನಯದಲ್ಲೂ ಮಲ್ಲೇಶ್ ಎತ್ತಿದ ಕೈ. ನಾಯಕ ನಟ, ಹಾಸ್ಯ, ಪೋಷಕ, ಖಳನಾಯಕ ಎಲ್ಲ ಪಾತ್ರಗಳಲ್ಲೂ ಲೀಲಾಜಾಲವಾಗಿ ಅಭಿನಯಿಸುತ್ತಾರೆ. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುವ ಅವರಿಗೆ ಅಭಿಮಾನಿಗಳ ದಂಡೇ ಇದೆ.

ಸಿಜಿಕೆ, ಸಗರನಾಡು ಸೇವಾರತ್ನ, ಕುವೆಂಪು, ನಾಲ್ವಡಿ ರಾಜಾ ವೆಂಕಟಪ್ಪ ನಾಯಕ, ಸಗರನಾಡು ಕಲಾ ಬಂಧು, ಸಗರನಾಡು ಸಿರಿ, ಜಿಲ್ಲಾಡಳಿತದ ರಾಜ್ಯೋತ್ಸವ, ಭೀಮಾ ಕೋರೆಗಾಂವ್, ಅಮೋಘ ವರ್ಷ ನೃಪತುಂಗ, ದ.ರಾ.ಬೇಂದ್ರೆ, ಕನ್ನಡ ಸಾಹಿತ್ಯ ಸಂಘದ ವರ್ಷದ ವ್ಯಕ್ತಿ ಸೇರಿ ಇತರ ಹತ್ತು ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.

ಈ ಪ್ರಶಸ್ತಿಗಳಿಗೆ ಮುಕುಟಪ್ರಾಯವಾಗಿ 2025ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸಂದಿದೆ. ರಂಗಭೂಮಿ ಚಟುವಟಿಕೆಗೆ ಪ್ರೋತ್ಸಾಹವಿಲ್ಲದ ಜಿಲ್ಲೆಗೆ ಸಹಜವಾಗಿ ಈ ಪ್ರಶಸ್ತಿ ಹೊಸ ಹುಮ್ಮಸ್ಸು ನೀಡಿದೆ. ಮಲ್ಲೇಶ್ ಅವರ ಅಭಿಮಾನಿಗಳಿಗೆ ಹರ್ಷ ತಂದಿದೆ. ಪ್ರಶಸ್ತಿ ₹25 ಸಾವಿರ ನಗದು, ಫಲಕ ಹೊಂದಿದೆ. ಆಗಸ್ಟ್ ತಿಂಗಳಲ್ಲಿ ಹಂಪಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.


ಮಲ್ಲೇಶ್ ಕೋನ್ಹಾಳ
ಬಲಭೀಮ ನಾಯಕ ಭೈರಿಮರಡಿ
ಪ್ರಶಸ್ತಿಯಿಂದ ನನ್ನ ಉತ್ಸಾಹ ನೂರ್ಮಡಿಸಿದೆ. ಮೂರು ದಶಕಕ್ಕೂ ಹೆಚ್ಚಿನ ಸೇವೆ ಸಾರ್ಥಕ ಮೂಡಿಸಿದೆ. ನನ್ನ ಜೀವಮಾನ ರಂಗಭೂಮಿಗೆ ಮೀಸಲು
ಮಲ್ಲೇಶ್ ಕೋನ್ಹಾಳ ಪ್ರಶಸ್ತಿ ಪುರಸ್ಕೃತರು
ಮಲ್ಲೇಶ್ ಅವರಿಗೆ ಪ್ರಶಸ್ತಿ ಸಂದಿರುವುದು ಈ ಭಾಗದ ರಂಗಕರ್ಮಿಗಳಿಗೆ ಸಂತಸ ತಂದಿದೆ. ಸರ್ಕಾರ ನಾಟಕಗಳನ್ನು ಪ್ರೋತ್ಸಾಹಿಸಲು ಸುರಪುರದಲ್ಲಿ ರಂಗಮಂದಿರ ನಿರ್ಮಿಸಬೇಕು
ಬಲಭೀಮ ನಾಯಕ ಭೈರಿಮರಡಿ ರಂಗಭೂಮಿ ಪ್ರೋತ್ಸಾಹಕ

ಮಲ್ಲೇಶ್ ಅವರು ರಚಿಸಿದ ನಾಟಕಗಳು:

ಕರ್ತವ್ಯಕ್ಕೆ ಕರುಳಿಲ್ಲ, ಜಾತಿ ಬಿದ್ದಿತು ನೀತಿ ಗೆದ್ದಿತು, ಸಾವು ಬಂದರೂ ಸೆರಗು ಹಾಸಲಾರೆ, ನಾಡಿನ ಹುಲಿ ಕಾಡಿಗೆ ಬಲಿ, ದಾರಿ ತಪ್ಪಿದ ನಾರಿ, ಮಸಣ ಸೇರಿದ ಮಲ್ಲಿಗೆ ಹೂ, ಧನಿಕರ ದಾದಾಗಿರಿ, ಕಲ್ಯಾಣದ ಕ್ರಾಂತಿ, ಅಕ್ಕರೆ ಇಲ್ಲದ ಸೊಕ್ಕಿನ ಮಕ್ಕಳು, ವಂದೇ ಮಾತರಂ, ಮರಣ ತಂದ ಮಾಂಗಲ್ಯ, ಸುರಪುರದ ಕ್ರಾಂತಿ ಕಿಡಿ, ರಾಜಾ ವೆಂಕಟಪ್ಪ ನಾಯಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.