
ಗುರುಮಠಕಲ್/ಸೇಡಂ: ‘ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ಅಮ್ಮನವರ ಆಶ್ರಮಕ್ಕೆ ಸಂಬಂಧಿಸಿದ ಟ್ರಸ್ಟ್‌ನಲ್ಲಿ ಕಾರ್ಯದರ್ಶಿಯಾಗಿ ನನ್ನ ಪುತ್ರ ಸುಮನ್ ಅವರನ್ನು ಸೇರ್ಪಡೆ ಮಾಡಿದ್ದು, ಆತನನ್ನು ಟ್ರಸ್ಟ್‌ನಿಂದ ಕೈಬಿಟ್ಟು ಶೀಘ್ರ ಪುನರರಚನೆ ಮಾಡುತ್ತೇವೆ’ ಎಂದು ಟ್ರಸ್ಟ್ ಅಧ್ಯಕ್ಷ ಶಿವಯ್ಯಸ್ವಾಮಿ ಹೇಳಿದರು.
ಬುಧವಾರ ಹತ್ತಿರದ ಯಾನಾಗುಂದಿ ಗ್ರಾಮದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ನನಗೆ ವಯಸ್ಸಾದ ಹಿನ್ನಲೆ ನನ್ನ ಸಹಾಯಕ್ಕೆಂದು ನನ್ನ ಪುತ್ರ ಸುಮನ್‌ರನ್ನು ನನ್ನೊಡನೆ ಇರಿಸಿಕೊಂಡಿರುವೆ. ಮಾಣಿಕೇಶ್ವರಿ ಅಮ್ಮನವರ ಅಧ್ಯಕ್ಷತೆ, ನಾನು ಕಾರ್ಯದರ್ಶಿಯಾಗಿ ಮುಂದುವರೆಯುವೆ’ ಎಂದು ಸ್ಪಷ್ಟನೆ ನೀಡಿದರು.
‘ಯಾನಗುಂದಿಯ ಸ.ನಂ41ರಲ್ಲಿ 55.04 ಎಕರೆ ಭೂಮಿಯನ್ನು ಎಕರೆಗೆ ₹ 20ರ ಬೆಲೆಗೆ 1967ರಲ್ಲಿ ಮೈಸೂರು ರಾಜ್ಯ ಸರ್ಕಾರವು ದೇವಸ್ಥಾನ, ಆಶ್ರಮ, ವೇದಪಾಠ ಶಾಲೆ ನಿರ್ಮಾಣಕ್ಕೆಂದು ನಮ್ಮ ಆಶ್ರಮಕ್ಕೆ ಪರಾಬಾರೆ ಮಾಡಿದೆ. ಬಿ.ಡಿ.ಜತ್ತಿಯವರ ಅವಧಿಯಲ್ಲಿ ನೆರೆಯ ನಾರಾಯಣಪೇಟ್‌ದ ಬನ್ನಪ್ಪ ಅವರ ಪ್ರಯತ್ನ, ತಾಂಡೂರಿನ ಮಾಣೆಪ್ಪ ಅವರ ಧನಸಹಾಯದಿಂದ ಈ ಜಮೀನನ್ನು ಪಡೆದದ್ದು. ಸ್ಥಳೀಯರಿಂದ ಭೂದಾನ ಪಡೆದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ತೆಲಂಗಾಣ, ಕರ್ನಾಟಕದ ಭಕ್ತರೆಂಬ ತಾರತಮ್ಯವಿಲ್ಲ. ಮುಂದಿನ ದಿನಗಳಲ್ಲಿ ಯಾವ ಸಮಸ್ಯೆಯೂ ಇಲ್ಲದೆ ಎಲ್ಲರಿಗೂ ಸುಲಭ ದರ್ಶನಕ್ಕೆ ವ್ಯವಸ್ಥೆ ಮಾಡುತ್ತೇವೆ. ಟ್ರಸ್ಟ್‌ನಲ್ಲಿ ಸ್ಥಳೀಯರಿಗೂ ಸದಸ್ಯತ್ವ ನೀಡುತ್ತೇವೆ. ಕೆಲವೊಮ್ಮೆ ಆಶ್ರಮದ ಸಿಬ್ಬಂದಿಯಿಂದಾದ ಸಮಸ್ಯೆಗಳು ಸರಿಪಡಿಸಲಾಗುತ್ತದೆ’ ಎಂದು ಭರವಸೆ ನೀಡಿದರು.
‘ಮೋತಕಪಲ್ಲಿ ಜಾತ್ರೆ ಕುರಿತು ನೀಡಿದ ಹೇಳಿಕೆಯಿಂದ ಜನರ ಭಕ್ತಿ ಮತ್ತು ನಂಬಿಕೆಗೆ ನೋವಾಗಿದ್ದು, ನಾನು ಕ್ಷಮೆಯಾಚಿಸುವೆ. ಜಾತ್ರೆಗಳ ವೇಳೆ ಧರ್ಮ ಪ್ರಚಾರ, ಪ್ರಾಣಿಬಲಿ ನಿಷೇಧದ ಕುರಿತು ಹೇಳಲಿ. ಅದಿಲ್ಲವಾದರೆ ಜಾತ್ರೆಗಳು ಯಾಕೆ? ಎನ್ನುವ ಭಾವದಲ್ಲಿ ಮಾತನಾಡಿದ್ದೆ’ ಎಂದು ಸ್ಪಷ್ಟನೆ ನೀಡಿದರು.
ಟ್ರಸ್ಟ್ ಕಾರ್ಯದರ್ಶಿ ಸುಮನ್, ಸದಸ್ಯರಾದ ಸಿದ್ರಾಮಪ್ಪ ಸಣ್ಣೂರ, ಹಣಮಂತು ಮಡ್ಡಿ, ಕಿಷ್ಟಪ್ಪ ಪುರುಷೋತ್ತಮ, ನಾಗವೇಣಿ ವಸ್ತ‍್ರದ್, ಭಕ್ತರಾದ ಅನಂತಪ್ಪ ಯದ್ಲಾಪುರ, ತಿಪ್ಪಣ್ಣ, ನರಸಿಂಹಲು ನಿರೇಟಿ, ನಾರಾಯಣ ದಂತಾಪುರ, ಸಾಯಲು ನಿರೇಟಿ, ಬ್ರಹ್ಮನಂದರೆಡ್ಡಿ ಕೇಶ್ವಾರ, ಬಸಣ್ಣ ಅರೆಬಿಂಜರ, ಶಶಿಕಲಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.