ADVERTISEMENT

ಯಾದಗಿರಿ | ರಾಷ್ಟ್ರೀಯ ಮೆಗಾ ಲೋಕ ಅದಾಲತ್: 52,008 ಪ್ರಕರಣಗಳು ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 7:04 IST
Last Updated 14 ಸೆಪ್ಟೆಂಬರ್ 2025, 7:04 IST
ಯಾದಗಿರಿಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ. ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಅವರು ಪ್ರಕರಣವನ್ನು ಇತ್ಯರ್ಥಗೊಳಿಸಿದರು. ಕಕ್ಷಿದಾರರು, ಸಂಧಾನಕಾರರು, ವಕೀಲರು ಪಾಲ್ಗೊಂಡಿದ್ದರು
ಯಾದಗಿರಿಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ. ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಅವರು ಪ್ರಕರಣವನ್ನು ಇತ್ಯರ್ಥಗೊಳಿಸಿದರು. ಕಕ್ಷಿದಾರರು, ಸಂಧಾನಕಾರರು, ವಕೀಲರು ಪಾಲ್ಗೊಂಡಿದ್ದರು   

ಯಾದಗಿರಿ: ರಾಷ್ಟ್ರೀಯ ಮೆಗಾ ಲೋಕ ಅದಾಲತ್ ಅಂಗವಾಗಿ ಶನಿವಾರ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ರಾಜಿ ಸಂಧಾನದ ಮೂಲಕ 52,008 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು, ಕಕ್ಷಿದಾರರು, ಸಂಧಾನಕಾರರು ಹಾಗೂ ಸಂಬಂಧಪಟ್ಟ ವಕೀಲರು ರಾಜಿ ಸಂಧಾನದಲ್ಲಿ ಪಾಲ್ಗೊಂಡರು.‌

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ. ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಅವರು ಪ್ರಕರಣಗಳನ್ನು ಕಕ್ಷಿದಾರರು ಮತ್ತು ಅವರ ವಕೀಲರ ಸಮಕ್ಷಮ ಸಂಧಾನದ ಮೂಲಕ ವಿಲೇವಾರಿ ಮಾಡಿದರು. 

ADVERTISEMENT

ರಾಷ್ಟ್ರೀಯ ಲೋಕ್‍ ಅದಾಲತನಲ್ಲಿ 11 ಪೀಠಗಳನ್ನು ರಚಿಸಲಾಗಿತ್ತು. ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ 37 ಹಾಗೂ 366 ವ್ಯಾಜ್ಯಪೂರ್ವ ಪ್ರಕರಣಗಳು ಇತ್ಯರ್ಥವಾದವು.

1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಎರಡು, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ 11, ಹಿರಿಯ ಸಿವಿಲ್‍ ನ್ಯಾಯಾಲಯದಲ್ಲಿ 294, ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ 541, ಹೆಚ್ಚುವರಿ ಸಿವಿಲ್‍ ಮತ್ತು ಜೆಎಂಎಫ್‍ಸಿ ನ್ಯಾಯಾಲಯದಲ್ಲಿ 659 ಪ್ರಕರಣಗಳನ್ನು ಬಗೆಹರಿಸಲಾಯಿತು.

ಶಹಾಪೂರ್ ಹಿರಿಯ ಸಿವಿಲ್‍ ನ್ಯಾಯಾಲಯದಲ್ಲಿ 370, ಪ್ರಧಾನ ಸಿವಿಲ್‍ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ 859, ಹೆಚ್ಚುವರಿ ಸಿವಿಲ್‍ ಜಡ್ಜ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದಲ್ಲಿ 1,247, ಸುರಪುರ ಹಿರಿಯ ಸಿವಿಲ್‍ ನ್ಯಾಯಾಲಯದಲ್ಲಿ 670, ಪ್ರಧಾನ ಸಿವಿಲ್‍ ಜಡ್ಜ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದಲ್ಲಿ 941, ಹೆಚ್ಚುವರಿ ಸಿವಿಲ್‍ ಜಡ್ಜ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದಲ್ಲಿ 564 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.

ಅದಾಲತ್‌ನಲ್ಲಿ ಸಿವಿಲ್ ದಾವೆಗಳು, ಮೋಟಾರು ವಾಹನ, ಕಂದಾಯ, ಆಸ್ತಿ ತೆರಿಗೆ, ಬ್ಯಾಂಕ್‍ಗಳಿಗೆ ಸಂಬಂಧಿಸಿದ ವ್ಯಾಜ್ಯಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟಾರೆ 52,008 ಪ್ರಕರಣಗಳು ಇತ್ಯರ್ಥಗೊಂಡಿವೆ. ಅವುಗಳಲ್ಲಿ ವಿಚಾರಣೆಯಲ್ಲಿದ್ದ 6,195 ಹಾಗೂ ವ್ಯಾಜ್ಯಪೂರ್ವ 45,813 ಪ್ರಕರಣಗಳು ಇದ್ದವು ಎಂದು ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.