ADVERTISEMENT

ನರೇಗಾ: ಕಾಮಗಾರಿ ಗುಣಮಟ್ಟ ಕಾಪಾಡಲು ಜಿ.ಪಂ ಸಿಇಒ ಸೂಚನೆ

ಮನರೇಗಾ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಜಿ.ಪಂ. ಸಿಇಒ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 1:14 IST
Last Updated 11 ಜೂನ್ 2021, 1:14 IST
ಯಾದಗಿರಿ ತಾಲ್ಲೂಕಿನ ಬಳಿಚಕ್ರ, ಕಡೇಚೂರು, ಕಿಲ್ಲನಕೇರಾ ಸೇರಿದಂತೆ ಇತರೆ ಗ್ರಾಪಂಗಳಲ್ಲಿ ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಜಿ.ಪಂ ಸಿಇಒ ಶಿಲ್ಪಾಶರ್ಮಾ ವೀಕ್ಷಿಸಿದರು
ಯಾದಗಿರಿ ತಾಲ್ಲೂಕಿನ ಬಳಿಚಕ್ರ, ಕಡೇಚೂರು, ಕಿಲ್ಲನಕೇರಾ ಸೇರಿದಂತೆ ಇತರೆ ಗ್ರಾಪಂಗಳಲ್ಲಿ ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಜಿ.ಪಂ ಸಿಇಒ ಶಿಲ್ಪಾಶರ್ಮಾ ವೀಕ್ಷಿಸಿದರು   

ಯಾದಗಿರಿ: ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ಅಭಿವೃದ್ಧಿ ಕಾಮಗಾರಿಗಳ ನಿರ್ವಹಣೆಯಲ್ಲಿ ಗುಣಮಟ್ಟ ಕಾಪಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಬಳಿಚಕ್ರ, ಕಡೇಚೂರು, ಕಿಲ್ಲನಕೇರಾ ಸೇರಿದಂತೆ ಇತರೆ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ವೀಕ್ಷಿಸಿ, ಪ್ರಸ್ತುತ ಮಳೆಗಾಲ ಆರಂಭವಾಗಿದ್ದು, ಅರಣ್ಯ, ತೋಟಗಾರಿಕೆ, ಕೃಷಿ ಸಂಬಂಧಿತ ಕಾಮಗಾರಿಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ನರೇಗಾ ಯೋಜನೆಯಡಿ ಶಾಲಾ ಆವರಣ ಗೋಡೆ, ಅಂಗನವಾಡಿ ಶಾಲೆ, ಕಟ್ಟಡ ನಿರ್ಮಾಣ, ಶೌಚಾಲಯ, ಬಹುಕಮಾನು ತಡೆಗೋಡೆ (ಮಲ್ಟಿ ಆರ್ಚ್ ಚೆಕ್ ಡ್ಯಾಂ), ಸಮಗ್ರ ಕೃಷಿ ಪದ್ಧತಿ ಕಾಮಗಾರಿಗಳಾದ ಕೃಷಿ ಹೊಂಡ, ಬದು ನಿರ್ಮಾಣ, ದನದ ಕೊಟ್ಟಿಗೆ, ನೀರಿನ ತೋಟ್ಟಿ, ಜಲಾಮೃತ ಘಟಕ, ಬದು ಮೇಲೆ ಸಸಿ ನೆಡುವುದು ಸೇರಿದಂತೆ ಇತರೆ ಕಾಮಗಾರಿಗಳನ್ನು ನರೇಗಾ ಯೋಜನೆಯಲ್ಲಿ ಆರಂಭಿಸಬೇಕು ಎಂದು ಹೇಳಿದರು.

ADVERTISEMENT

ಮಳೆ ನೀರು ತಡೆದು ಭೂಮಿಯ ಅಂತರ್ಜಲ ಹೆಚ್ಚಿಸುವಂತ ಇಂಗು ಗುಂಡಿ, ಕೊಳವೆಬಾವಿ ರೀರ್ಚಾಜ್ ಪಿಟ್, ಮಳೆ ನೀರು ಕೋಯ್ಲು ಘಟಕ ಸೇರಿದಂತೆ ಇತರೆ ಕಾಮಗಾರಿಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.

ಸ್ವಚ್ಛ ಭಾರತ್ ಮಿಷನ್‍ನ ನರೇಗಾ ಯೋಜನೆಯಡಿ ಒಗ್ಗೂಡುವಿಕೆ ಕಾಮಗಾರಿ, ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಗಳನ್ನು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಆರಂಭಿಸಿ, ಶೀಘ್ರದಲ್ಲೇ ಪೂರ್ಣಗೊಳಿಸಬೇಕು ಎಂದರು.

ಯೋಜನೆಯಡಿ ಸಾಮಾಜಿಕ ಅರಣ್ಯ, ಪ್ರಾದೇಶಿಕ ಅರಣ್ಯ ಇಲಾಖೆಗಳ ಸಹಾಯದೊಂದಿಗೆ ಅರಣ್ಯ ಪ್ರದೇಶ, ರಸ್ತೆ ಬದಿ ನೆಡುತೋಪು, ಕಾಲುವೆ ದಂಡೆಗಳು, ಕೆರೆ ಅಂಚು, ಶಾಲೆ, ಅಂಗನವಾಡಿ ಹಾಗೂ ಸ್ಮಶಾನಗಳಲ್ಲಿ ಸಸಿ ನಾಟಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಈ ವೇಳೆ ಯಾದಗಿರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸ್ವಚ್ಛ ಭಾರತ್ ಮಿಷನ್ ಸಂಯೋಜಕರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.