
ಶರಣಗೌಡ ಕಂದಕೂರ
ಗುರುಮಠಕಲ್: ‘ನಮ್ಮ ಮತಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಹಾಗೂ ನೀರು ಶುದ್ಧೀಕರಣ ಘಟಕಗಳ(ಆರ್‌ಒ) ಸಮಸ್ಯೆ ತಿಳಿಯಲು ಸಚಿವ ಪ್ರಿಯಾಂಕ್ ಖರ್ಗೆಯವರು ಜಿಲ್ಲೆಗೆ ಭೇಟಿ ನೀಡಿ ತಮ್ಮ ಇಲಾಖೆಯ ಸಭೆ ನಡೆಸಲಿ. ಅದರಿಂದ ಸಮಸ್ಯೆ ಬಗೆಹರಿಯಬಹುದು’ ಎಂದು ಶಾಸಕ ಶರಣಗೌಡ ಕಂದಕೂರ ಒತ್ತಾಯಿಸಿದರು.
ಸೋಮವಾರ ಅಧಿವೇಶನದಲ್ಲಿ ನೀರಿನ ಸಮಸ್ಯೆ ಕುರಿತು ವಿವರಿಸಿದ ಅವರು, ‘ಈ ಹಿಂದೆ ಆರ್‌ಒಗಳ ದುರಸ್ತಿ ಮತ್ತು ಬೋರ್ ಕೊರೆದ ₹ 1.13 ಕೋಟಿ ಬಿಲ್ ಬಾಕಿಯಿದ್ದು, ಕೆಲಸ ಮಾಡಿದವರಿಗೆ ತೀವ್ರ ತೊಂದರೆಯಾಗಿದೆ. ‘ನಮ್ಮ ಬಿಲ್ ಪಾವತಿಸಿ, ಇಲ್ಲದಿದ್ದರೆ ವಿಷ ಸೇವಿಸುತ್ತೇವೆ’ ಎಂದು ನನ್ನೊಡನೆ ಫೋನ್‌ನಲ್ಲಿ ಅಳಲು ತೋಡಿಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದರು.
‘ಮತಕ್ಷೇತ್ರದ ಆರ್‌ಒಗಳ ದುರಸ್ತಿಗೆ ₹ 9 ಕೋಟಿ ಅನುದಾನ ಅವಶ್ಯವಿದ್ದು, ಈ ಕುರಿತು ಅಧಿಕಾರಿಗಳಿಗೆ ಸುಮಾರು 25 ಬಾರಿ ಪತ್ರ ಬರೆದರೂ ಉಪಯೋಗವಾಗಿಲ್ಲ. ಬೇಸಿಗೆ ಆರಂಭಗೊಳ್ಳಲಿದೆ, ನನ್ನ ಮತಕ್ಷೇತ್ರದ ನೀರಿನ ಸಮಸ್ಯೆ ಅತಿಯಾಗಿದೆ. ಆದ್ದರಿಂದ ಸಚಿವರು ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಲಿ’ ಎಂದು ಕೋರಿದ್ದಾರೆ.
ಶಾಸಕ ಕಂದಕೂರಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಆರ್‌ಒಗಳ ದುರಸ್ತಿ ಮತ್ತು ದೇಕಬಾಲ್(ನಿರ್ವಹಣೆ) ಕುರಿತ ಪ್ರಶ್ನೆಗೆ ನಮಗಿನ್ನೂ ಪರಿಹಾರ ಸಿಗುತ್ತಿಲ್ಲವೆಂದು ಪ್ರಾಮಾಣಿಕವಾಗಿ ಒಪ್ಪುತ್ತೇವೆ. ರಾಜ್ಯದೆಲ್ಲೆಡೆ ಈ ಸಮಸ್ಯೆಯಿದೆ. ಅದನ್ನು ಪರಿಹರಿಸಲು ಶೀಘ್ರವೇ ನೀಲನಕ್ಷೆ ರೂಪಿಸಿ, ಅವಶ್ಯಕ ಅನುದಾನ ಒದಗಿಸುವ ಭರವಸೆ ನೀಡಿದರು.
ಆರ್‌ಒಗಳ ದುರಸ್ತಿಗೆ ಈಗಾಗಲೇ ಗುರುಮಠಕಲ್ ಕ್ಷೇತ್ರಕ್ಕೆ ₹ 56.54 ಲಕ್ಷ ನೀಡಿದ್ದು, ಶಾಸಕ ಕಂದಕೂರ ಅವರ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ. ಬಾಕಿಯಿರುವ ಬಿಲ್‌ನ್ನು ಶೀಘ್ರ ಬಿಡುಗಡೆ ಮಾಡುವ ಮತ್ತು ಜಲಧಾರೆ ಯೋಜನೆಯನ್ನು ಸರಿಪಡಿಸುವ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.