ADVERTISEMENT

ಜಂಕ್‌ಫುಡ್‌ ಸೇವನೆಯಿಂದ ಅನಾರೋಗ್ಯ: ಶಾಸಕ ತುನ್ನೂರು

‘ಸಿರಿಧಾನ್ಯ ನಡುಗೆ’ ಕಾರ್ಯಕ್ರಮದಲ್ಲಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 7:00 IST
Last Updated 26 ಫೆಬ್ರುವರಿ 2026, 7:00 IST
ಯಾದಗಿರಿ ನಗರದಲ್ಲಿ ಬುಧವಾರ ಸಿರಿಧಾನ್ಯ ನಡಿಗೆಗೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಚಾಲನೆ ನೀಡಿದರು
ಯಾದಗಿರಿ ನಗರದಲ್ಲಿ ಬುಧವಾರ ಸಿರಿಧಾನ್ಯ ನಡಿಗೆಗೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಚಾಲನೆ ನೀಡಿದರು   

ಯಾದಗಿರಿ: ‘ಹಿಂದಿನ ದಿನಗಳಲ್ಲಿ ಜನ ಸಿರಿಧಾನ್ಯಗಳು ಸೇವಿಸಿದ್ದರಿಂದ ಗಟ್ಟಿಮುಟ್ಟಾಗಿದ್ದರು. ಆದರೆ, ಇಂದು ನಮ್ಮ ಬಾಯಿ ರುಚಿಗೆಂದು ಜಂಕ್‌ ಫುಡ್‌ ಸೇವನೆ ಹೆಚ್ಚಿದ್ದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.

ನಗರದ ಹೊಸ ಬಸ್‌ ನಿಲ್ದಾಣದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಮತ್ತು ಜಿಲ್ಲಾ ಕೃಷಿಕ ಸಮಾಜ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಸಿರಿಧಾನ್ಯ ನಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಿಳಿ ಜೋಳ, ಸಜ್ಜೆ, ನವಣಿ, ಕಣವಿ ಸೇರಿದಂತೆ ಸಿರಿಧಾನ್ಯಗಳು ಆರೋಗ್ಯಕ್ಕೆ ಉತ್ತಮ ಮತ್ತು ಔಷಧದ ಅಂಶಗಳನ್ನು ಹೊಂದಿವೆ. ಅವುಗಳ ಕುರಿತು ವ್ಯಾಪಕ ಪ್ರಚಾರ ಮಾಡುವ ಮೂಲಕ ಜಾಗೃತಿ ಮೂಡಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

‘ಅಧಿಕಾರಿಗಳು ಆದ್ಯತೆ ನೀಡಿದ ಕಾರಣ 25 ಸಾವಿರ ಎಕರೆ ಪ್ರದೇಶದಲ್ಲಿ ಸಿರಿ ಧಾನ್ಯ ಬೆಳೆಯಲಾಗುತ್ತಿದೆ. ಸಿರಿಧಾನ್ಯಗಳಿಗೆ ದರವೂ ಹೆಚ್ಚಿಗೆ ಇರುವುದರಿಂದ ರೈತರಿಗೂ ಲಾಭ. ಹೀಗಾಗಿ ಪ್ರತಿ ಶಾಲೆ-ಕಾಲೇಜುಗಳಲ್ಲಿ ಮತ್ತು ಮನೆ ಮನೆಗೂ ಸಿರಿಧಾನ್ಯಗಳನ್ನು ಬೆಳೆಸಬೇಕು’ ಎಂದರು.

‘ಆಂಧ್ರದಿಂದ ಬಂದವರು ನಮ್ಮ ಜಿಲ್ಲೆಯಲ್ಲಿ ಭೂಮಿಯನ್ನು ಲೀಸ್‌ ಪಡೆದು ಹೆಚ್ಚಿನ ರಾಸಾಯನಿಕ ಬಳಸಿ ಭತ್ತದ ಬೆಳೆ ಬೆಳೆಯುತ್ತಿದ್ದಾರೆ. ಅದರಿಂದ ಭೂಮಿ ಬರುಡಾಗಲಿದ್ದು, ಮುಂದಿನ ದಿನಗಳಲ್ಲಿ ನಮ್ಮ ರೈತರಿಗೆ ಸಾಂಪ್ರದಾಯಿಕ ಬೆಳೆ ಬೆಳೆಯಲಾಗದು’ ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಹರ್ಷಲ್‌ ಬೋಯರ್ ಮಾತನಾಡಿ, ‘ಹಿಂದೆ ನಮ್ಮಲ್ಲಿ ಸಿರಿಧಾನ್ಯ ಬೆಳೆಸುವ ಮತ್ತು ಬಳಸುವುದೇ ಹೆಚ್ಚಿತ್ತು. ಆದರೆ, ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯದ ಬಯಕೆ ಹೆಚ್ಚಿದೆ. ಎಲ್ಲರೂ ವಿಷಯುಕ್ತ ಆಹಾರದ ಬದಲು ಸಿರಿಧಾನ್ಯ ಬಳಸಿ. ಸರ್ಕಾರವೂ ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹಿಸುತ್ತಿದೆ’ ಎಂದು ಹೇಳಿದರು.

ಎಸ್‌ಪಿ ಪೃಥ್ವಿಕ್‌ ಶಂಕರ್ ಮಾತನಾಡಿ, ‘ಹಿಂದೆ ಜನನ ಮರಣಗಳೆರಡೂ ಮನೆಯಲ್ಲೇ ಜರುಗುತ್ತಿದ್ದವು. ಬದಲಾದ ಜೀವನ ಶೈಲಿಯಂತೆ ಅವೆರಡೂ ಈಗ ಆಸ್ಪತ್ರೆಗಳಲ್ಲಿ ಜರುಗುತ್ತಿವೆ’ ಎಂದರು.

ಮುಖಂಡ ರಾಚಣ್ಣಗೌಡ ಮುದ್ನಾಳ ಮಾತನಾಡಿ, ‘ಸಿರಿಧಾನ್ಯ ಬೆಳೆಸಿದ ರೈತರಿಗೆ ನಿರೀಕ್ಷಿತ ಆದಾಯ ಸಿಗದ ಕಾರಣ ರೈತರಿಗೆ ಸರ್ಕಾರ ಹೆಚ್ಚಿನ ಅನುಕೂಲ ಮಾಡಕೊಡಬೇಕಿದೆ’ ಎಂದು ಕೋರಿದರು.

ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗುರ ಮಾತನಾಡಿದರು.

ಹೆಚ್ಚುವರಿ ಎಸ್‌ಪಿ ಧರಣೇಶ, ಡಿವೈಎಸ್‌ಪಿ ಭರತಕುಮಾರ ತಳವಾರ, ಉಪ ಕೃಷಿ ನಿರ್ದೇಶಕ ಹಂಪಣ್ಣ ವೈಎಲ್., ಕೃಷಿ ಅಧಿಕಾರಿಗಳಾದ ರಾಜಕುಮಾರ, ಸುರೇಶ ಬಿ., ರಾಮಣ್ಣಗೌಡ, ಸುನೀಲಕುಮಾರ, ರವಿಕುಮಾರ, ವಿಶ್ವಾರಾಧ್ಯ, ಎನ್ಎಬಿಎಆರ್‌ಡಿ ಅಧಿಕಾರಿ ಯಮುನಾ, ಡಿಎಚ್‌ಒ ಡಾ.ಮಹೇಶ ಬಿರಾದಾರ, ಕೃಷಿ ಇಲಾಖೆಯ ಯಾಮರೆಡ್ಡಿ, ವೆಂಕಟೇಶ ‌ಹಿರೆನೂರ, ಮುಖಂಡರಾದ ಶರಣಗೌಡ ಮಾಲಿಪಾಟೀಲ , ಬಸವರಾಜ ಮೊಟ‌ನಳ್ಳಿ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ವೆಂಕಟರೆಡ್ಡಿ ತಂಗಡಗಿ, ಶರಣಗೌಡ ಬಲಕಲ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.