ADVERTISEMENT

ಯಾದಗಿರಿ: ಆಸ್ತಿಗಾಗಿ ಹಾಲಿಗೆ ವಿಷ ಬೆರೆಸಿ ಐದು ತಿಂಗಳ ಹಸುಗೂಸನ್ನೇ ಕೊಂದ ಮಲತಾಯಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2023, 8:59 IST
Last Updated 1 ಸೆಪ್ಟೆಂಬರ್ 2023, 8:59 IST
   

ಯಾದಗಿರಿ: ಆಸ್ತಿಗಾಗಿ ಹಾಲಿಗೆ ವಿಷ ಬೆರೆಸಿ ಐದು ತಿಂಗಳ ಹಸುಗೂಸನ್ನೇ ಮಲತಾಯಿ ಕೊಂದ ಘಟನೆ ಜಿಲ್ಲೆಯ ವಡಗೇರಾ ತಾಲ್ಲೂಕಿನ ಬಬಲಾದ ಗ್ರಾಮದಲ್ಲಿ ಈಚೆಗೆ ಜರುಗಿದೆ.

ದೇವಮ್ಮ ಚೆಟ್ಟಿಗೇರಿ, ಹಸುಗೂಸಿಗೆ ಹಾಲಿನಲ್ಲಿ ವಿಷ ಬೆರೆಸಿ ಸಾಯಿಸಿದ ಮಲತಾಯಿಯಾಗಿದ್ದಾರೆ‌.

ಸಂಗೀತಾ ಚೆಟ್ಟಿಗೇರಿ ಸಾವನ್ನಪ್ಪಿದ ಐದು ತಿಂಗಳ ಹಸುಕೂಸು. ಆಗಸ್ಟ್ 30 ರಂದು ಬಬಲಾದ ಗ್ರಾಮದಲ್ಲಿ ಘಟನೆ ಜರುಗಿದೆ.

ADVERTISEMENT

ಮೃತ ಹಸುಗೂಸು ಸಂಗೀತಾಳ ತಾಯಿ ಶ್ರೀದೇವಿ, ಹಾಲು ಕುಡಿಸುತ್ತಿದ್ದಾಗ ಒತ್ತಾಯ ಪೂರ್ವಕವಾಗಿ ನಾನು ಹಾಲುಣಿಸುತ್ತೇನೆ ಎಂದು ಆರೋಪಿ ದೇವಮ್ಮ

ಮನೆಯ ಕೋಣೆಗೆ ಕರೆದುಕೊಂಡು ಹೋಗಿ ಬಾಗಿಲು ಮುಚ್ಚಿ ಹಾಲಿನ ಬಾಟಲ್ ನಲ್ಲಿ ವಿಷ ಬೆರೆಸಿ ಕೂಸಿಗೆ ಕುಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಬೆರೆತ ಹಾಲು ಕುಡಿದ ಮೂರು ಗಂಟೆ ನಂತರ ಬಾಯಲ್ಲಿ ನೊರೆ ಬಂದು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಹಸಗೂಸು ಸಂಗೀತಾ ಸಾವನ್ನಪ್ಪಿದ್ದಾಳೆ.

ಆರೋಪಿ ದೇವಮ್ಮಳನ್ನು ವಡಗೇರಾ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ‌.

ಎರಡು ಮದುವೆಯಾಗಿದ್ದ ಸಿದ್ದಪ್ಪ:

ಹಸಗೂಸಿನ ತಂದೆ ಬಬಲಾದ ಗ್ರಾಮದ ಸಿದ್ದಪ್ಪ ಚೆಟ್ಟಿಗೇರಿ ಎರಡು ಮದುವೆಯಾಗಿದ್ದರು.

11 ವರ್ಷಗಳ ಹಿಂದೆ ಮೊದಲು ಶ್ರೀದೇವಿಯವರನ್ನು ಮದುವೆಯಾಗಿದ್ದರು.

ಮಕ್ಕಳಾಗದ ಕಾರಣ ಕಳೆದ‌ 7 ವರ್ಷದ ಹಿಂದೆ ದೇವಮ್ಮಳನ್ನು ಮದುವೆಯಾಗಿದ್ದರು.

ದೇವಮ್ಮಳನ್ನ ಮದುವೆಯಾದ ನಂತರ ಗಂಡನ ಮನೆ ಬಿಟ್ಟು ಚಾಮನಳ್ಳಿಯ ತಮ್ಮ ತವರು ಮನೆಯಲ್ಲಿ ಶ್ರೀದೇವಿ ವಾಸವಾಗಿದ್ದರು.

ಹಿರಿಯರ ರಾಜಿ ಸಂಧಾನದ ನಂತರ ಕಳೆದ ಮೂರು ವರ್ಷಗಳ ಹಿಂದೆ ಬಬಲಾದ ಗ್ರಾಮದ ಗಂಡನ ಮನೆಯಲ್ಲಿದ್ದರು.

ಶ್ರೀದೇವಿಯವರಿಗೆ ಕಳೆದ ಐದು ತಿಂಗಳ ಹಿಂದೆ ಹೆಣ್ಣು ಮಗು ಜನಿಸಿತ್ತು.

ಆರೋಪಿ ದೇವಮ್ಮಳಿಗೆ ನಾಲ್ಕು ಜನ ಮಕ್ಕಳಿದ್ದರು. ಹೀಗಾಗಿ ಆಸ್ತಿಯಲ್ಲಿ ಸವತಿ ಶ್ರೀದೇವಿ ಐದು ತಿಂಗಳ ಮಗಳು ಸಂಗೀತಾಗೆ ಪಾಲು ಹೋಗುತ್ತದೆ ಎಂದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‌

ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.