ADVERTISEMENT

ಶಹಾಪುರ: ಸೂರು ವಂಚಿತ ಕುಟುಂಬಗಳಿಗೆ ನಿವೇಶನ

ಶಹಾಪುರ ನಗರಸಭೆಯಲ್ಲಿ ಆಶ್ರಯ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 0:51 IST
Last Updated 9 ಫೆಬ್ರುವರಿ 2021, 0:51 IST
ಶಹಾಪುರ ನಗರಸಭೆಯ ಕಚೇರಿಯಲ್ಲಿ ಸೋಮವಾರ ಆಶ್ರಯ ಸಮಿತಿ ಸಭೆಯಲ್ಲಿ ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿದರು
ಶಹಾಪುರ ನಗರಸಭೆಯ ಕಚೇರಿಯಲ್ಲಿ ಸೋಮವಾರ ಆಶ್ರಯ ಸಮಿತಿ ಸಭೆಯಲ್ಲಿ ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿದರು   

ಶಹಾಪುರ: ನಗರದಲ್ಲಿ ಸೂರು ವಂಚಿತ ಬಡ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡುವ ಕಾರ್ಯ ಭರದಿಂದ ಸಾಗಿದೆ. 20 ಎಕರೆ ಜಮೀನಿನಲ್ಲಿ ವಿವಿಧ ವಸತಿ ಯೋಜನೆ ಅಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವುದರ ಜೊತೆಯಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ಇಲ್ಲಿನ ನಗರಸಭೆಯಲ್ಲಿ ಸೋಮವಾರ ನಡೆದ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾಡಳಿತದಿಂದ ಈಗಾಗಲೇ 20 ಎಕರೆ ಜಮೀನು ವಸತಿ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲು ಮಂಜೂರಾತಿ ದೊರಕಿದೆ. ಸರ್ವೇ ನಂಬರ 299ರಲ್ಲಿ ನಾಲ್ಕು ಎಕರೆಯಲ್ಲಿ ಜಿ ಮಾದರಿ ಮನೆ ಕಟ್ಟಡ ಕಾಮಗಾರಿ ಮುಕ್ತಾಯದ ಹಂತದಲ್ಲಿವೆ. ಇನ್ನೂ 2 ಎಕರೆ ಜಮೀನು ವಾಜಪೇಯಿ ನಗರ ನಿವೇಶನಕ್ಕಾಗಿ ವಿನ್ಯಾಸ ಅನುಮೋದನೆ ಪಡೆದು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು. ಸರ್ವೇ ನಂಬರ 120ರಲ್ಲಿ 2 ಎಕರೆ ಜಮೀನಿನಲ್ಲಿ ಅಲೆಮಾರಿ ಸಮುದಾಯಕ್ಕೆ ಮಂಜೂರಾಗಿರುವ ಮನೆ ವಿತರಿಸಲಾಗುವುದು ಎಂದರು.

ADVERTISEMENT

ನಗರಸಭೆಯಿಂದ ಈಗಾಗಲೇ 75.23 ಎಕರೆ ಜಮೀನು ಖರೀದಿಸಿ 2815 ನಿವೇಶನಗಳನ್ನು ಸೂಕ್ತ ಫಲಾನಭವಿಗಳಿಗೆ ನೀಡಿದೆ. 1366 ನಿವೇಶನಗಳ ಫಲಾನುಭವಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಆದರೆ ಇನ್ನೂ 1449 ನಿವೇಶನಗಳ ಫಲಾನುಭವಿಗಳ ನೋಂದಣಿಯಾಗಿರುವುದಿಲ್ಲ. 15 ದಿನದಲ್ಲಿ ಸೂಕ್ತ ದಾಖಲೆಗಳೊಂದಿಗೆ ನೋಂದಣಿ ಮಾಡಿಸಿಕೊಳ್ಳಬೇಕು. ಅಲ್ಲದೆ ಗಿಸಾಡಿ ಮತ್ತು ಕುಂಬಾರ ಸಮುದಾಯಗಳಿಗೆ ನಿವೇಶನ ಸಿದ್ದಪಡಿಸಲಾಗಿದೆ. ಫಲಾನುಭವಿಗಳು ಅರ್ಜಿ ಸಲ್ಲಿಸಿದಾಗ ಸರಿಯಾಗಿ ಪರಿಶೀಲಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದು ಶಾಸಕರು ತಾಕೀತು ಮಾಡಿದರು.

ವಾಜಪೇಯಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಯೋಜನೆ ಅಡಿಯಲ್ಲಿ ಆಯ್ಕೆಯಾದ 400 ಫಲಾನುಭವಿಗಳಲ್ಲಿ 256 ಫಲಾನುಭವಿಗಳಿಗೆ ಅನುದಾನ ಬಿಡುಗಡೆಯಾಗಿದೆ. ಇನ್ನೂ 134 ಫಲಾನುಭವಿಗಳಿಗೆ ಅನುದಾನ ಬಂದಿಲ್ಲ. ಸರ್ಕಾರ ತ್ವರಿತವಾಗಿ ಅನುದಾನ ಬಿಡುಗಡೆ ಗೊಳಿಸಬೇಕು ಎಂದು ಮನವಿ ಮಾಡಿದರು.

ಪೌರಾಯುಕ್ತ ರಮೇಶ ಪಟ್ಟೆದಾರ, ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್, ನಗರಸಭೆಯ ಅಧ್ಯಕ್ಷೆ ಶೈನಾಜವೇಗಂ ದರ್ಬಾನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.