ADVERTISEMENT

ಪ್ರಕೃತಿ ವಿರುದ್ಧವಾಗಿ ಕೃಷಿ ಸಲ್ಲದು

ರಾಷ್ಟ್ರೀಯ ರೈತರ ದಿನಾಚರಣೆ; ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗೂರು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 5:57 IST
Last Updated 24 ಡಿಸೆಂಬರ್ 2025, 5:57 IST
ಯಾದಗಿರಿಯಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮದಲ್ಲಿ ಐವರು ಅತ್ಯುತ್ತಮ ರೈತರನ್ನು ಸನ್ಮಾನಿಸಲಾಯಿತು 
ಯಾದಗಿರಿಯಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮದಲ್ಲಿ ಐವರು ಅತ್ಯುತ್ತಮ ರೈತರನ್ನು ಸನ್ಮಾನಿಸಲಾಯಿತು    

ಯಾದಗಿರಿ: ‘ಪ್ರಕೃತಿಯ ವಿರುದ್ಧವಾಗಿ ಬೇಸಾಯದಲ್ಲಿ ತೊಡಗಿಸಿಕೊಳ್ಳುವ ಬದಲು ಪ್ರಕೃತಿಯನ್ನು ಒಲಿಸಿಕೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗೂರು ಹೇಳಿದರು.

ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಸಭಾಂಗಣದಲ್ಲಿ ಮಂಗಳವಾರ ಕೃಷಿ ಇಲಾಖೆ ಹಾಗೂ ತಾಲ್ಲೂಕು ಕೃಷಿ ಸಮಾಜದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಕೃತಿ ಮುನಿಸಿಕೊಂಡರೆ ಅದರ ವಿರುದ್ಧ ನಮ್ಮ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ. ಪ್ರಕೃತಿಯ ವಿರುದ್ಧವಾಗಿ ನಡೆಯದೆ ಅದರೊಂದಿಗೆ ಸಾಗಬೇಕಿದೆ. ‘ನೆರೆ ಪ್ರವಾಹದಂತಹ ಪ್ರಕೃತಿ ವಿಕೋಪವಾದರೂ ಕೃಷಿಕರು ಅದರಿಂದ ಎದೆಗುಂದದೆ ತಮ್ಮ ಬೇಸಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಪ್ರಕೃತಿ ಮುನಿಸಿಕೊಂಡಿದೆ ಎಂದು ಕೃಷಿಯಿಂದ ಹಿಮ್ಮುರಾಗುತ್ತಿಲ್ಲ’ ಎಂದರು. 

ADVERTISEMENT

‘ನಿಸ್ವಾರ್ಥ ಭಾವದಿಂದ ಹೊಲಗಳಲ್ಲಿ ಹಗಲು– ರಾತ್ರಿ ದುಡಿಯುತ್ತಿರುವ ರೈತಾಪಿ ವರ್ಗ ದೇಶಕ್ಕೆ ಬೆನ್ನೆಲುಬು ಆಗಿದ್ದಾರೆ. ಸೈನಿಕರ ನಂತರದ ಉನ್ನತವಾದ ಸ್ಥಾನವನ್ನು ರೈತರಿಗೆ ಕೊಡಲಾಗಿದೆ’ ಎಂದು ಹೇಳಿದರು.

ಉಪ ಕೃಷಿ ನಿರ್ದೇಶಕ ಹಂಪಣ್ಣ ವೈ.ಎಲ್. ಮಾತನಾಡಿ, ‘ರೈತರ ಕೃಷಿ ಉತ್ಪನ್ನಗಳ ಉತ್ಪಾದಕತೆ ಹೆಚ್ಚಾಗಿ, ಸಂಕಷ್ಟದಲ್ಲಿ ಇರುವವರಿಗೆ ಸರ್ಕಾರ ಹಾಗೂ ಅಧಿಕಾರಿಗಳು ಸ್ಪಂದಿಸಲಿ ಎಂಬ ದೃಷ್ಟಿಯಿಂದ ರೈತರ ದಿನ ಆಚರಣೆ ಮಾಡಲಾಗುತ್ತಿದೆ’ ಎಂದರು.

‘ಕೃಷಿಕರು ಹೊಸ ಬಗೆಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಸಮಗ್ರ ಬೇಸಾಯದ ಮೊರೆ ಹೋಗಿ ಕುರಿ, ಕೋಳಿ, ಜೇನು ಸಾಕಾಣಿಕೆಯಂತಹ ಉಪ ಕಸುಬುಗಳನ್ನು ಮಾಡಬೇಕು’ ಎಂದು ಸಲಹೆ ನೀಡಿದರು.

‘ಹಸಿರು ಕ್ರಾಂತಿಯ ಬಳಿಕ ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕಿಟ ನಾಶಕಗಳನ್ನು ಯಥೇಚ್ಛ ಪ್ರಮಾಣದಲ್ಲಿ ಬಳಸಿಕೊಳ್ಳಲಾಯಿತು. ಇದರಿಂದಾಗಿ ಭೂಮಿ ತನ್ನ ಸತ್ವವನ್ನು ಕಳೆದುಕೊಂಡು ವಿಷವಾಗಿದೆ. ಅದನ್ನು ವಿಷಮುಕ್ತ ಮಾಡಲು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಬೇಕಿದೆ’ ಎಂದು ಹೇಳಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಸುರೇಶ, ‘ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ಗೌರವಾರ್ಥವಾಗಿ ರಾಷ್ಟ್ರೀಯ ರೈತ ದಿನ ಆಚರಣೆ ಮಾಡಲಾಗುತ್ತಿದೆ. ಕೃಷಿಕರ ಬಗ್ಗೆ ಅಪಾರವಾದ ಕಾಳಜಿ ಹೊಂದಿದ ಚರಣ್ ಸಿಂಗ್ ಅವರು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ, ಭೂಸುಧಾರಣಾ ಕಾಯ್ದೆಗಳಂತಹ ಮಹತ್ವ ಕೆಲಸ ಮಾಡಿದ್ದಾರೆ’ ಎಂದರು.

ಪ್ರಗತಿಪರ ರೈತ ರಮೇಶ ಪೂಜಾರ ಮಾತನಾಡಿ, ‘ರಾಸಾಯನಿಕ ಗೊಬ್ಬರ ಬಳಿಕೆಯನ್ನು ಕ್ರಮೇಣ ಕಡಿಮೆ ಮಾಡಿ,  ಸಾವಯವ ಗೊಬ್ಬರ ಬಳಸಬೇಕು. ಖರ್ಚು ತಗ್ಗಿಸಲು ದನಗಳನ್ನು ಸಾಕಿ ಸಗಣಿ ಜೀವಾಮೃತ ಬಳಕೆ ಮಾಡಬೇಕಿದೆ’ ಎಂದು ಹೇಳಿದರು.

ಐವರಿಗೆ ಅತ್ಯುತ್ತಮ ರೈತ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಕೃಷಿ ಸಮಾಜದ ಅಧ್ಯಕ್ಷ ವೆಂಕಟರೆಡ್ಡಿ ತಂಗಡಗಿ, ಕಸಾಪ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ರೈತ ಸಂಘದ ಮುಖಂಡ ಚನ್ನರೆಡ್ಡಿ ಗುರುಸುಣಗಿ, ಪ್ರಮುಖರಾದ ಬಸವರಾಜು, ಶರಣಗೌಡ ಮಾಲಿ ಪಾಟೀಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.