ADVERTISEMENT

‘ನೇತಾಜಿ ಬದುಕು ಆದರ್ಶನೀಯ’

ನೇತಾಜಿ ಸುಭಾಷ ಚಂದ್ರ ಬೋಸ್ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 6:07 IST
Last Updated 24 ಜನವರಿ 2026, 6:07 IST
ಯಾದಗಿರಿ ನಗರದ ನೇತಾಜಿ ವೃತ್ತದಲ್ಲಿ ಶುಕ್ರವಾರ ನೇತಾಜಿ ಸುಭಾಷ ಚಂದ್ರ ಬೋಸ್ ಅವರ ಜಯಂತಿ ಕಾರ್ಯಕ್ರಮ ಆಚರಣೆ ಮಾಡಲಾಯಿತು
ಯಾದಗಿರಿ ನಗರದ ನೇತಾಜಿ ವೃತ್ತದಲ್ಲಿ ಶುಕ್ರವಾರ ನೇತಾಜಿ ಸುಭಾಷ ಚಂದ್ರ ಬೋಸ್ ಅವರ ಜಯಂತಿ ಕಾರ್ಯಕ್ರಮ ಆಚರಣೆ ಮಾಡಲಾಯಿತು   

ಯಾದಗಿರಿ: ‘ನೇತಾಜಿ ಸುಭಾಷ ಚಂದ್ರ ಬೋಸ್ ಅವರ ದೇಶಕ್ಕಾಗಿ ಹೋರಾಟ ನಡೆಸಿದ ಬದುಕು, ತಮ್ಮ ಜೀವನದಲ್ಲಿ ಪಾಲಿಸಿದ ಆದರ್ಶಗಳು ಇಂದಿನ ಯುವಕರಿಗೆ ಆದರ್ಶನೀಯ’ ಎಂದು ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದ್ನಾಳ ಹೇಳಿದರು.

ನಗರದ ಹಳೇ ಬಸ್ ನಿಲ್ದಾಣ ಸಮೀಪದಲ್ಲಿ ಶುಕ್ರವಾರ ನೇತಾಜಿ ಸುಭಾಷಚಂದ್ರ ಬೋಸ್ ಅವರ ಜಯಂತಿ ಅಂಗವಾಗಿ ಬೋಸ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

‘ಕ್ರಾಂತಿಕಾರಿಯಾಗಿದ್ದ ಬೋಸ್ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಬಲಿಷ್ಠವಾದ ಸಂಘಟನೆಯನ್ನು ಕಟ್ಟಿದರು. ಸಾವಿರಾರು ವೀರಯೋಧರೊಂದಿಗೆ ಬ್ರಿಟಿಷರ ವಿರುದ್ಧ ದಿಟ್ಟತನದಿಂದ ಹೋರಾಟ ಮಾಡಿದ್ದರು’ ಎಂದರು.

ADVERTISEMENT

‘ಬೋಸ್‌ ಅವರ ಹೋರಾಟದ ಹಾದಿ, ದೇಶದ ಸ್ವಾತಂತ್ರ್ಯಕ್ಕಾಗಿ ಪಟ್ಟ ಶ್ರಮವನ್ನು ಯುವಕರು ಅರಿತುಕೊಳ್ಳಬೇಕು. ಶಾಲಾ– ಕಾಲೇಜುಗಳ ಪಠ್ಯ ಪುಸ್ತಕಗಳಲ್ಲಿ ಅವರ ಜೀವನದ ಒಂದೆರಡು ಪ್ರಸಂಗಗಳ ಸಣ್ಣ ಪಾಠವನ್ನು ಅಳವಡಿಸುವ ಬದಲು, ಅವರ ಸಮಗ್ರ ಜೀವನ ಚರಿತ್ರೆಯ ಕುರಿತು ಒಂದು ಪುಸ್ತಕವನ್ನು ಪಠ್ಯವನ್ನಾಗಿ ಮಾಡಬೇಕು. ಪಿಯು ಅಥವಾ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಬೋಧಿಸಬೇಕಿದೆ’ ಎಂದು ಹೇಳಿದರು.

‘ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ವಿಶ್ವನಾಥರೆಡ್ಡಿ ಮುದ್ನಾಳ ಅವರು ನೇತಾಜಿ ಅವರ ಹೋರಾಟದ ಬದುಕಿನಿಂದ ಸಾಕಷ್ಟು ಪ್ರಭಾವಿತರಾಗಿದ್ದರು. ಹೀಗಾಗಿ, ನಗರದಲ್ಲಿ ಅವರ ಮೂರ್ತಿ ಸ್ಥಾಪಿಸುವ ಮೂಲಕ ಬೋಸ್ ಅವರ ನೆನಪು ಮತ್ತು ಆದರ್ಶಗಳು ಜಿಲ್ಲೆಯಲ್ಲಿ ಜೀವಂತವಾಗಿ ಇರಿಸಿದ್ದಾರೆ’ ಎಂದು ಸ್ಮರಿಸಿದರು.

ಬಸವ ಸಮಿತಿ ಉಪಾಧ್ಯಕ್ಷ ಹಣಮಂತರಡ್ಡಿಗೌಡ ಮುದ್ನಾಳ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಲ್ಲಣಗೌಡ ಮಾಲಿ ಪಾಟೀಲ, ಪ್ರಮುಖರಾದ ಮಹಾದೇವಪ್ಪ ಅಬ್ಬೆ ತುಮಕೂರ, ಖಂಡಪ್ಪ ದಾಸನ್, ಸುನಿತಾ ಚವ್ಹಾಣ್, ರಮಾದೇವಿ ಕವಲಿ, ಸೋಮನಾಥ ಜೈನ್, ಮೋಹನ್ ಬಾಬು, ಬಸವರಾಜಪ್ಪ, ಎಂ.ಕೆ.ಕರೀಗೌಡ, ಶಿವರಾಜ ಪಾಟೀಲ, ಮಹೇಶ್ ವಾಲಿ, ಹನುಮಾನ್ ಸೆಟ್, ಚನ್ನಯ್ಯ ಮಾಳಕೇರಿ, ಭೀಮನಗೌಡ ಕ್ಯಾತನಳ, ರವಿ ಬಾಪೂರೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಯಾದಗಿರಿಯಲ್ಲಿ ಶುಕ್ರವಾರ ನೇತಾಜಿ ಸುಭಾಷ ಚಂದ್ರ ಬೋಸ್ ಅವರ ಭಾವಚಿತ್ರದ ಮೆರವಣಿಗೆಯಲ್ಲಿ ಕೋಲಾಟ ಪ್ರದರ್ಶಿಸಿದ ಮಕ್ಕಳು

- ಅದ್ದೂರಿ ಮೆರವಣಿಗೆ

ನಗರದ ಮೈಲಾಪುರ ಅಗಸಿಯಿಂದ ಹೊರ ಭಾವಚಿತ್ರದ ಮೆರವಣಿಗೆಯು ಚಕ್ಕರಕಟ್ಟ ಗಾಂಧಿ ವೃತ್ತ ಮಾರ್ಗವಾಗಿ ಹಳೇ ಒಬಿಸಿ ಹಾಸ್ಟೆಲ್‌ ವರೆಗೆ ಸಾಗಿತು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಅಭಿಮಾನಿಗಳು ಮುಖಂಡರು ಹೆಜ್ಜೆ ಹಾಕಿ ನೇತಾಜಿ ಪರ ಘೋಷಣೆಗಳನ್ನು ಕೂಗಿದರು. ನೇತಾಜಿ ವೇಷಧರಿಸಿದ ಮಕ್ಕಳು ಗಮನ ಸೆಳೆದರು. ಕೋಲಾಟ ಲೆಜಿಮ್ ಪ್ರದರ್ಶನವೂ ನೀಡಿದರು.