ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೃಷಿಗೆ ಬಳಸುವ ಎತ್ತುಗಳನ್ನು ಬಸವಣ್ಣನ ರೂಪ ಎಂದೇ ಪೂಜಿಸುತ್ತಿದ್ದಾರೆ. ಮಳೆ, ಬೆಳೆ ಸಮೃದ್ಧಿಯಾಗಲಿ, ಉತ್ತು ಬಿತ್ತನೆಗೆ ಎತ್ತುಗಳಿಗೆ ಶಕ್ತಿ ನೀಡಲಿ ಎಂದು ಮಣ್ಣೆತ್ತಿನ ಅಮಾವಾಸ್ಯೆಯಂದು (ಬುಧವಾರ) ಪೂಜಿಸಲಾಗುತ್ತಿದೆ. ಆದರೆ, ಕಾಲ ಬದಲಾದಂತೆ ಮಣ್ಣಿನ ಬದಲಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಆಲಂಕಾರಿಕ ಮೂರ್ತಿಗಳು ಮಾರುಕಟ್ಟೆಯಲ್ಲಿ ಬಂದಿವೆ.
ನಗರದ ವಿವಿಧೆಡೆ ಪಿಒಪಿ ಎತ್ತುಗಳು ಮಣ್ಣಿತ್ತಿನ ಜಾಗದಲ್ಲಿ ಸ್ಥಾನ ಪಡೆದಿವೆ. ದೂರದ ಮಹಾರಾಷ್ಟ್ರದ ಸೊಲ್ಲಾಪುರ, ಅಕ್ಕಲಕೋಟದಿಂದ ಪಿಒಪಿ ಎತ್ತುಗಳನ್ನು ನಗರದಲ್ಲಿ ತಂದು ಮಾರಾಟ ಮಾಡಲಾಗುತ್ತಿದೆ.
ಮುಂಗಾರು ಆರಂಭದಲ್ಲಿ ರೈತರ ಹಬ್ಬವಾದ ಕಾರಹುಣ್ಣಿಮೆಯಲ್ಲಿ ಜೀವಂತ ಎತ್ತುಗಳಿಗೆ ಸ್ನಾನ ಮಾಡಿಸಿ ಬಣ್ಣಬಣ್ಣದಿಂದ ಅಲಂಕಾರ ಮಾಡಲಾಗಿತ್ತು. ಸಂಜೆ ವೇಳೆ ಮೆರವಣಿಗೆ ಮಾಡುವ ಮೂಲಕ ರೈತರು ಸಂಭ್ರಮಿಸಿದ್ದರು. ಈಗ ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ಮಣ್ಣಿನಿಂದ ಕೂಡಿದ ಎತ್ತುಗಳನ್ನು ಪೂಜಿಸಲಾಗುತ್ತದೆ.
ನಗರದ ಮೆಥೋಡಿಸ್ಟ್ ಚರ್ಚ್, ಮಹಾತ್ಮ ಗಾಂಧಿ ವೃತ್ತ, ನೇತಾಜಿ ಸುಭಾಶ್ಚಂದ್ರ ಬೋಸ್ ವೃತ್ತ ಸೇರಿದಂತೆ ವಿವಿಧೆಡೆ ಬಣ್ಣಬಣ್ಣದ ಪಿಒಪಿ, ಮಣ್ಣೆತ್ತುಗಳನ್ನು ಮಾರಾಟಕ್ಕೆ ಇಡಲಾಗಿದೆ.
ದುಬಾರಿ ಬೆಲೆಯ ಕೆರೆಮಣ್ಣಿಗೆ ಬದಲಿಗೆ ಆರಾಮವಾಗಿ ಸಿಗುವ ಪಿಇಒ ಎತ್ತುಗಳು ಜನರನ್ನು ಆಕರ್ಷಿಸುವುದರಿಂದ ಗ್ರಾಹಕರು ಅವುಗಳನ್ನೇ ಬಯಸುವುದರಿಂದ ಕುಂಬಾರರು ಪಿಒಪಿ ಎತ್ತುಗಳ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.
ನಗರದ ಚರ್ಚ್ ಮುಂಭಾಗದ ರಸ್ತೆ ಬಳಿ ಮಣ್ಣೆತ್ತಿನ ಅಮಾವಾಸ್ಯೆಗಾಗಿ ಬೆರಳೆಣಿಕೆ ಮಣ್ಣಿನ ಎತ್ತುಗಳು, ಹಲವು ಪಿಒಪಿ ಎತ್ತುಗಳು ಮಾರಾಟಕ್ಕೆ ಇಡಲಾಗಿದೆ. ಇದರಲ್ಲಿ ಸಿಂಹಪಾಲು ಪಿಒಪಿ ಎತ್ತುಗಳೇ ಅಕ್ರಮಿಸಿಕೊಂಡಿವೆ. ಈಗ ಮಣ್ಣೆತ್ತು ತಯಾರು ಮಾಡುವ ವ್ಯವಧಾನವೂ ಕುಂಬಾರರಿಗೆ ಇಲ್ಲದಂತೆ ಆಗಿದೆ. ಸುಲಭವಾಗಿ ಮತ್ತು ಯಾವುದೇ ದೈಹಿಕ ಶ್ರಮವಿಲ್ಲದೆ ಪಿಒಪಿ ಎತ್ತುಗಳು ಸಿಗುವುದರಿಂದ ಯಾರೂ ಮಣ್ಣೆತ್ತಿನ ಕಡೆ ಗಮನಹರಿಸುತ್ತಿಲ್ಲ.
‘ಮಣ್ಣಿನ ಎತ್ತುಗಳ ತಯಾರಿಸಲು ಅದಕ್ಕೆ ತುಂಬಾ ಶ್ರದ್ಧೆ ಮತ್ತು ದೈಹಿಕ ಶ್ರಮ ಬೇಡುತ್ತದೆ. ಈಗ ಎಲ್ಲವೂ ವೇಗವಾಗಿರುವುದರಿಂದ ಕುಂಬಾರರು ಬದಲಾವಣೆ ಬಯಸಿದ್ದಾರೆ. ಮಣ್ಣಿಗಾಗಿ ಕನಿಷ್ಠ ಒಂದು ತಿಂಗಳು ಸಂಚರಿಸಿ ಸರಿಯಾದ ಮಣ್ಣನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಅದನ್ನು ಹದ ಮಾಡಿ ಎತ್ತುಗಳನ್ನು ಮಾಡಿ ನೆರಳಿಗೆ ಸಂರಕ್ಷಿಸಬೇಕು. ಇದು ತುಂಬಾ ತ್ರಾಸದಾಯಕ ಕೆಲಸವಾಗಿದ್ದರಿಂದ ಸುಲಭವಾಗಿ ಸಿಗುವ ಪಿಒಪಿ ಎತ್ತುಗಳನ್ನೇ ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ಕುಂಬಾರರು.
ಖರೀದಿಗೆ ಚೌಕಾಸಿ: ಮಣ್ಣಿನ ಮೂರ್ತಿಗಳನ್ನು ಖರೀದಿ ಮಾಡಲು ಬರುವ ಗ್ರಾಹಕರು ಚೌಕಾಸಿ ಮಾಡುತ್ತಿರುವುದು ಸಾಮಾನ್ಯವಾಗಿ ಕಂಡು ಬಂತು. ಮಣ್ಣೆತ್ತುಗಳು ಒಂದು ಜೋಡಿಗೆ ₹40ರಿಂದ ₹100 ಒಳಗೆ ಇದ್ದರೆ, ಪಿಒಪಿ ಎತ್ತುಗಳು ₹1 ಸಾವಿರ ತನಕ ಮೌಲ್ಯ ಹೊಂದಿವೆ. ಪಿಒಪಿ ಎತ್ತುಗಳು ₹40, ₹100, ₹250, ₹350, ₹550ರಿಂದ ₹1,000ರ ತನಕ ದರ ಇದೆ.
15 ದಿನಗಳಿಂದ ತಯಾರಿ
‘ಕಾರಹುಣ್ಣಿಮೆ ಮುಗಿದ ನಂತರ ಮಣ್ಣೆತ್ತು ತಯಾರಿಸಲು ಆರಂಭಿಸಲಾಗುತ್ತಿದೆ. ಕೆರೆಯಿಂದ ಮಣ್ಣು ತಂದು ಅದನ್ನು ಹದಗೊಳಿಸಿ ಮಣ್ಣಿನ ಎತ್ತುಗಳನ್ನು ತಯಾರಿಸಲಾಗಿದೆ. ಈಗ ಮಹಾರಾಷ್ಟ್ರದ ಸೊಲ್ಲಾಪುರದಿಂದ ಪಿಒಪಿ ಮಣ್ಣಿನ ಮೂರ್ತಿಗಳು ಬಂದಿವೆ. ಗ್ರಾಹಕರು ಅವುಗಳನ್ನೇ ಹೆಚ್ಚಾಗಿ ಕೇಳುತ್ತಾರೆ. ದೊಡ್ಡ ಎತ್ತುಗಳಿಗಿಂತ ಸಣ್ಣ ಎತ್ತುಗಳಿಗೆ ಬೇಡಿಕೆ ಇದೆ. ಎತ್ತುಗಳನ್ನು ಖರೀದಿಸಿದವರು ಮಳೆ ಬೆಳೆ ಚೆನ್ನಾಗಿ ಬರಲಿ ಎಂದು ಮಳೆರಾಯನ ಬಳಿ ಬೇಡುತ್ತಾರೆ. ಎತ್ತುಗಳು ರೈತನ ಸ್ನೇಹಿತರಾಗಿದ್ದು ಅವುಗಳಿಗೆ ಪೂಜಿಸುವ ಮೂಲಕ ಗೌರವಿಸಲಾಗುತ್ತಿದೆ’ ಎನ್ನುತ್ತಾರೆ ಕುಂಬಾರರು. ‘ಹುಟ್ಟಿನಿಂದ ಚಟ್ಟದವರೆಗೂ ಮಣ್ಣಿನ ಜೊತೆಗೆ ಆರಂಭವಾಗುವ ಮಣ್ಣೆತ್ತು ಅಮಾವಾಸ್ಯೆ. ಹೀಗಾಗಿ ಮಣ್ಣಿನಿಂದಲೇ ನಮ್ಮ ಜೀವನ ರೂಪಿಸಿಕೊಂಡಿದ್ದೇವೆ’ ಎನ್ನುತ್ತಾರೆ ನಾಗಪ್ಪ ಕುಂಬಾರ. ‘ಮನೆಯಲ್ಲಿ ಮಣ್ಣೆತ್ತುಗಳನ್ನು ಪೂಜೆ ಮಾಡಲಾಗುತ್ತಿತ್ತು. ಯುವಕರು ಸೇರಿಕೊಂಡು ದೊಡ್ಡ ಮಣ್ಣೆತ್ತು ಮಾಡಿ ಊರೆಲ್ಲ ಮೆರವಣಿಗೆ ಮಾಡಲಾಗಿತ್ತು. ಆ ನಂತರ ದೇವಸ್ಥಾನ ಮೇಲೆ ಅದನ್ನು ಇಡಲಾಗುತ್ತಿತ್ತು. ಮಳೆ ಭರಪೂರ ಆಗಿ ಕರಗಿಹೋಗುತ್ತಿತ್ತು’ ಎಂದು ತಮ್ಮ ಅನುಭವ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.