ADVERTISEMENT

ಯಾದಗಿರಿ: ಹೊಸ ತಾಲ್ಲೂಕುಗಳಿಗಿಲ್ಲ ಅಗ್ನಿಶಾಮಕ ಠಾಣೆ

ಹಳೆ ತಾಲ್ಲೂಕು ಕೇಂದ್ರದಿಂದ ವಾಹನ ತೆರಳುವಷ್ಟರಲ್ಲಿ ಎಲ್ಲಾ ಬೂದಿ

ಬಿ.ಜಿ.ಪ್ರವೀಣಕುಮಾರ
Published 3 ಮಾರ್ಚ್ 2025, 6:06 IST
Last Updated 3 ಮಾರ್ಚ್ 2025, 6:06 IST
15 ವರ್ಷ ಮೇಲ್ಪಟ್ಟ ವಾಹನಗಳು ಯಾದಗಿರಿ ನಗರದ ಅಗ್ನಿ ಶಾಮಕ ಠಾಣೆಯಲ್ಲಿ ನಿಂತಿವೆ
ಪ್ರಜಾವಾಣಿ ಚಿತ್ರಗಳು: ರಾಜಕುಮಾರ ನಳ್ಳಿಕರ್‌
15 ವರ್ಷ ಮೇಲ್ಪಟ್ಟ ವಾಹನಗಳು ಯಾದಗಿರಿ ನಗರದ ಅಗ್ನಿ ಶಾಮಕ ಠಾಣೆಯಲ್ಲಿ ನಿಂತಿವೆ ಪ್ರಜಾವಾಣಿ ಚಿತ್ರಗಳು: ರಾಜಕುಮಾರ ನಳ್ಳಿಕರ್‌   

ಯಾದಗಿರಿ: ಯಾದಗಿರಿಯಿಂದ ಗುರುಮಠಕಲ್‌, ಶಹಾಪುರದಿಂದ ವಡಗೇರಾ, ಸುರಪುರದಿಂದ ಹುಣಸಗಿ ತಾಲ್ಲೂಕು ಬೇರ್ಪಟ್ಟು ಹೊಸ ತಾಲ್ಲೂಕು ನಿರ್ಮಾಣ ಮಾಡಲಾಗಿದೆ. ಎಲ್ಲ ತಾಲ್ಲೂಕುಗಳು ಘೋಷಣೆಯಾಗಿ 7 ರಿಂದ 8 ವರ್ಷಗಳಾಗಿವೆ. ಜಿಲ್ಲೆಯಲ್ಲಿ ಮೂರು ಹಳೆ, ಮೂರು ಹೊಸ ತಾಲ್ಲೂಕುಗಳಿದ್ದು, ಹಳೆ ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರ ಅಗ್ನಿಶಾಮಕ ಠಾಣೆಗಳಿವೆ. ಉಳಿದ ಹೊಸ ತಾಲ್ಲೂಕುಗಳ ಕೊನೆ ಗ್ರಾಮಗಳಲ್ಲಿ ಅಗ್ನಿ ಅನಾಹುತ ಸಂಭವಿಸಿದರೆ ಅಲ್ಲಿಗೆ ವಾಹನ ತಲು‍ಪವಷ್ಟರಲ್ಲೇ ಬೆಂಕಿ ನಂದಿಹೋಗಿರುತ್ತದೆ. ಬೂದಿ ಮಾತ್ರ ಉಳಿದಿರುತ್ತದೆ.

ಶಹಾಪುರದಿಂದ ವಡಗೇರಾ 33 ಕಿ.ಮೀ ಇದೆ. ಯಾದಗಿರಿಯಿಂದ ಗುರುಮಠಕಲ್‌ 40 ಕಿ.ಮೀ, ಸುರಪುರದಿಂದ ಹುಣಸಗಿ 35 ಕಿ.ಮೀ ಅಂತರದಲ್ಲಿವೆ. ಪ್ರತಿ 40 ಕಿ.ಮೀ ಅಂತರದಲ್ಲಿ ಅಗ್ನಿಶಾಮಕ ಠಾಣೆ ಇರಬೇಕು ಎನ್ನುವ ನಿಯಮವಿದೆ. ಗುರುಮಠಕಲ್‌, ವಡಗೇರಾ, ಹುಣಸಗಿ ಕೊನೆ ಗ್ರಾಮಕ್ಕೆ ಅಗ್ನಿಶಾಮಕ ಠಾಣೆ ವಾಹನ ತಲುಪವಷ್ಟರಲ್ಲೇ ಎಲ್ಲವೂ ಭಸ್ಮವಾಗಿರುತ್ತದೆ.

ಸುರಪುರ, ಹುಣಸಗಿ ತಾಲ್ಲೂಕಿಗೆ ಒಂದೇ ಠಾಣೆ, ಒಂದೇ ವಾಹನವಿದ್ದು, ನಾರಾಯಣಪುರದಂತಹ ಕೊನೆಯ ಗ್ರಾಮಗಳಿಗೆ ತೆರಳಲು 70 ಕಿ.ಮೀ ಸಂಚರಿಸಬೇಕು. ಇದರಿಂದ ಅಗ್ನಿ ನಂದಿಸಲು ತೊಂದರೆಯಾಗುತ್ತಿದೆ. ತಾಲ್ಲೂಕು ಕೇಂದ್ರದಿಂದ ತಾಲ್ಲೂಕಿಗೆ ಅಂತರ ಕಡಿಮೆ ಇದ್ದರೂ ಹೊಸ ತಾಲ್ಲೂಕಿನ ಕೊನೆಯ ಗ್ರಾಮಕ್ಕೆ ಹಳೇ ತಾಲ್ಲೂಕು ಕೇಂದ್ರದಿಂದ ವಾಹನ ತೆರಳುವಷ್ಟರಲ್ಲಿ ಬೆಂಕಿ ನಂದಿ ಹೋಗಿ ಬೂದಿಯಾಗಿರುತ್ತದೆ. ಹೀಗಾಗಿ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ADVERTISEMENT

ಗುರುಮಠಕಲ್‌ ಪಟ್ಟಣದಲ್ಲಿ ಸರ್ಕಾರಿ ಜಾಗ ಗುರುತಿಸಲಾಗಿದೆ. ಈ ಹಿಂದೆ ನಾರಾಯಣಪೇಟೆಗೆ ತೆರಳುವ ಮಾರ್ಗದಲ್ಲಿ ಜಾಗ ತೋರಿಸಲಾಗಿದೆ. ಆದರೆ, ಠಾಣೆಗೆ ಅನುಕೂಲ ಇಲ್ಲ ಎನ್ನುವ ಕಾರಣಕ್ಕೆ ಕಚೇರಿ ಸ್ಥಾಪನೆಗೆ ಮುಂದಾಗಿಲ್ಲ.

ಯಾದಗಿರಿಯಿಂದ ವಾಹನ ಬರಬೇಕಿದೆ. ಮಧ್ಯದಲ್ಲೊಂದು ಬೆಟ್ಟದ ತಿರುವಿನಲ್ಲಿ ವಾಹನ ಓಡಿಸಿಕೊಂಡು ಅವಘಡ ಸಂಭವಿಸಿದಲ್ಲಿಗೆ ತಲುಪುವಷ್ಟರಲ್ಲಿ ಬಹುತೇಕ ಹಾನಿಯಾಗಿರುತ್ತದೆ. ಅಲ್ಲದೇ ಹುಣಸಗಿಯಲ್ಲೂ ಸರ್ಕಾರಿ ಜಾಗದ ಕೊರತೆ ಇದೆ. ಕೆಬಿಜೆಎನ್‌ಎಲ್‌ ಜಾಗವಿದ್ದರೂ ಗುಡ್ಡದ ಬಳಿ ಜಾಗ ತೋರಿಸಲಾಗಿದೆ. ಇದರಿಂದ ವಿಳಂಬವಾಗಿದೆ.

ಹುಣಸಗಿ ತಾಲೂಕಿನಲ್ಲಿ ಸುಮಾರು 80 ಸಾವಿರ ಹೆಕ್ಟೇರ್ ಕೃಷಿ ಭೂಮಿ ಹಾಗೂ ಭೂ ಪ್ರದೇಶದಲ್ಲಿ ಬೇಸಿಗೆ ಹಂಗಾಮಿನಲ್ಲಿ ರೈತರು ಭತ್ತದ ಹುಲ್ಲು ಸುಡುತ್ತಾರೆ. ಅಲ್ಲದೇ ಆಕಸ್ಮಿಕ ಬೆಂಕಿಯಿಂದಾಗಿ ಸಾಕಷ್ಟು ಬಾರಿ ಅಲ್ಲಲ್ಲಿ ಗುಡಿಸಲುಗಳು ಸುಟ್ಟ ಉದಾರಣೆಗಳಿವೆ. ವಡಗೇರಾ ಪೊಲೀಸ್‌ ಠಾಣೆ ಪಕ್ಕದಲ್ಲಿ ಜಾಗವಿದ್ದರೂ ಕಚೇರಿ ಆರಂಭಕ್ಕೆ ಸರ್ಕಾರದ ಅನುಮತಿ ಇಲ್ಲ ಎನ್ನಲಾಗುತ್ತಿದೆ.

3 ಜಲ ವಾಹನಗಳು: ಜಿಲ್ಲೆಯ ಮೂರು ಠಾಣೆಗಳಲ್ಲಿ 7 ಜಲವಾಹನಗಳಿದ್ದವು. ಆದರೆ, 15 ವರ್ಷ ಮೇಲ್ಪಟ್ಟ ವಾಹನಗಳನ್ನು ಠಾಣೆಯಲ್ಲಿ ನಿಲ್ಲಿಸಲಾಗಿದೆ. ಇದರಿಂದ ಯಾದಗಿರಿ ಠಾಣೆಯಲ್ಲಿ 2 ವಾಹನಗಳು ನಿಂತಿವೆ. 1 ತ್ವರಿತ ಪ್ರತಿಕ್ರಿಯೆ ವಾಹನ, ಶಹಾಪುರ, ಸುರಪುರ ಅಗ್ನಿಶಾಮಕ ಠಾಣೆಯಲ್ಲಿ ತಲಾ ಒಂದೊಂದು ಜಲವಾಹನಗಳಿವೆ.

ಅಗ್ನಿ ಅವಘಡಗಳಿಗೆ ಕಾರಣಗಳು

‘ಜಿಲ್ಲೆಯಲ್ಲಿ ಬೇಸಿಗೆ ಸಂದರ್ಭದಲ್ಲಿ ಹೆಚ್ಚಿನ ತಾಪಮಾನ ಇರುತ್ತದೆ. ಇದರಿಂದಲೂ ಬೆಂಕಿ ಅವಘಡಗಳು ಹೆಚ್ಚಾಗಲು ಕಾರಣ’ ಎಂದು ಅಗ್ನಿಶಾಮಕ ಕಚೇರಿ ಮೂಲಗಳು ತಿಳಿಸಿವೆ.

ಕಾಲುವೆ ಜಾಲದಲ್ಲಿ ಭತ್ತ ಕಟಾವು ನಂತರ ಉಳಿದ ಹುಲ್ಲಿಗೆ ಬೆಂಕಿ ಹಚ್ಚಲಾಗುತ್ತಿದೆ. ಇದು ಬೆಂಕಿ ಅವಘಡಕ್ಕೆ ಕಾರಣವಾಗಿದ್ದು ಬಣವೆಗೆಳು ಹೊಲದಲ್ಲಿರುವ ಗುಡಿಸಲುಗಳಿಗೆ ಬೆಂಕಿ ಚಾಚುತ್ತದೆ. ಊರುಗಳ ತಿಪ್ಪೆಗುಂಡಿಗಳಲ್ಲಿ ಮನೆಯ ಒಲೆಯ ಬೂದಿ ಹಾಕುವ ಕಾರಣವೂ ಅವಘಡಕ್ಕೆ ಕಾರಣವಾಗುತ್ತಿದೆ. ಕೆಲವೊಮ್ಮೆ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಸರಿಯಾಗಿ ಬಳಕೆ ಮಾಡುವ ಬಗ್ಗೆ ಮಾಹಿತಿ ಇಲ್ಲದಿರುವ ಕಾರಣದಿಂದಲೂ ಬೆಂಕಿ ಅವಘಡಗಳು ಸಂಭವಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಬೀಡಿ ಸಿಗರೇಟ್‌ ಸೇದಿ ಎಸೆದಿರುವ ಕಿಡಿಯಿಂದ ವಿದ್ಯುತ್‌ ಮುಖ್ಯ ಲೈನ್‌ ಕೆಳಗೆ ಅನಾಹುತಗಳು ಸಂಭವಿಸುತ್ತವೆ. ಬೇಸಿಗೆಯಲ್ಲಿ ಹೆಚ್ಚು: ಜಿಲ್ಲೆಯಲ್ಲಿ ಬೇಸಿಗೆ ಸಂದರ್ಭದಲ್ಲಿ ಹೆಚ್ಚಿನ ತಾಪಾಮಾನ ಇರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಬಣವೆಗಳಿಗೆ ಸಂಬಂಧಿಸಿದಂತೆ ಹೆಚ್ಚಾಗಿ ಅಗ್ನಿ ಅನಾಹುತಗಳು ಸಂಭವಿಸುತ್ತವೆ. ಇದರ ಜೊತೆಗೆ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ಗೆ ಸಂಬಂಧಿಸಿ ಅಗ್ನಿ ಅವಘಡಗಳು ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಮನೆ ಅಂಗಡಿ ಕಾಟನ್‌ ಇಂಡಸ್ಟ್ರಿಗಳಲ್ಲಿ ಅಗ್ನಿ ಅನಾಹುತಗಳು ಸಂಭವಿಸುತ್ತವೆ.

ಸುರಪುರ: ಅಗ್ನಿಶಾಮಕ ಠಾಣೆಗೆ ಒಂದೇ ವಾಹನ

ಸುರಪುರ ತಾಲ್ಲೂಕಿನ ಅಗ್ನಿಶಾಮಕ ಠಾಣೆಯಲ್ಲಿ ಕಳೆದ ವರ್ಷದಿಂದ ಒಂದೇ ವಾಹನ ಕಾರ್ಯನಿರ್ವಹಿಸುತ್ತಿದೆ. ಮಂಜೂರಿಯಾದ ವಾಹನಗಳ ಸಂಖ್ಯೆ ಎರಡು. ಒಂದು ವಾಹನದ ಮಾನ್ಯತೆ (ವ್ಯಾಲಿಡಿಟಿ) ಮುಗಿದಿದೆ. ‘ಕಾರ್ಯನಿರ್ವಹಿಸುತ್ತಿರುವ ಇನ್ನೊಂದು ವಾಹನದ ಮಾನ್ಯತೆಯೂ ಮಾರ್ಚ್ 2 ಕ್ಕೆ ಮುಗಿಯುತ್ತದೆ. ಅಷ್ಟರೊಳಗೆ ಹೊಸ ವಾಹನ ಬರುತ್ತದೆ’ ಎಂದು ಸಹಾಯಕ ಠಾಣಾಧಿಕಾರಿ ಸಣ್ಣಮಲ್ಲಯ್ಯ ತಿಳಿಸಿದ್ದಾರೆ. ಫೆಬ್ರುವರಿ ತಿಂಗಳಲ್ಲಿ ನದಿಯಲ್ಲಿ ಬಿದ್ದ ಎರಡು ಶವಗಳನ್ನು ಹೊರ ತೆಗೆಯಲಾಗಿದೆ. 16 ಬೆಂಕಿ ಹತ್ತಿದ ಪ್ರಕರಣಗಳು ನಡೆದಿವೆ. ನಗರದಲ್ಲಿ ನಿರಂತರ ನೀರಿನ ಯೋಜನೆಯಿದ್ದು ವಾಹನಕ್ಕೆ ನೀರು ತುಂಬಲು ಯಾವುದೇ ಸಮಸ್ಯೆ ಇಲ್ಲ. ಎಲ್ಲ ಸಿಬ್ಬಂದಿಗೂ ಕ್ವಾರ್ಟರ್ಸ್ ವ್ಯವಸ್ಥೆ ಇದೆ. ಕಳೆದ 9 ತಿಂಗಳಿಂದ ಠಾಣಾಧಿಕಾರಿ ಹುದ್ದೆ ಖಾಲಿ ಇದೆ. ಸಹಾಯಕ ಠಾಣಾಧಿಕಾರಿ ಸಣ್ಣಮಲ್ಲಯ್ಯ ಪ್ರಭಾರ ಹೊಂದಿದ್ದಾರೆ. ಉಳಿದಂತೆ ಮಂಜೂರಿ ಇರುವ 4 ಜಮಾದಾರ 4 ಚಾಲಕರು ಒಬ್ಬ ಮೆಕ್ಯಾನಿಕ್ 16 ಅಗ್ನಿಶಾಮಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವಡಗೇರಾಕ್ಕಿಲ್ಲ ಅಗ್ನಿಶಾಮಕ ಠಾಣೆ ಭಾಗ್ಯ

ವಡಗೇರಾ ತಾಲ್ಲೂಕು ಕೇಂದ್ರವಾಗಿ 8 ವರ್ಷಗಳು ಕಳೆಯುತ್ತಾ ಬಂದರೂ ಇಲ್ಲಿಯವರೆಗೂ ಅಗ್ನಿಶಾಮಕ ಠಾಣೆ ಇಲ್ಲದೆ ಇರುವುದರಿಂದ ಸಾಕಷ್ಟು ಸಮಸ್ಯೆಯನ್ನು ತಾಲ್ಲೂಕು ವ್ಯಾಪ್ತಿಯ ಜನರು ಅನುಭವಿಸುತ್ತಿದ್ದಾರೆ. ತಾಲ್ಲೂಕು ವ್ಯಾಪ್ತಿಯಲ್ಲಿ ಸುಮಾರು 64 ಹಳ್ಳಿಗಳು 17 ಪಂಚಾಯಿತಿಗಳು ಬರುತ್ತವೆ. ಬೇಸಿಗೆ ಕಾಲದಲ್ಲಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಅಗ್ನಿ ಅವಘಡ ಸಂಭವಿಸಿದರೆ ದೂರದ ಯಾದಗಿರಿ ಇಲ್ಲವೇ ಶಹಾಪುರದಿಂದ ಅಗ್ನಶಾಮಕ ದಳದವರು ಬರಬೇಕು. ವಡಗೇರಾ ತಾಲ್ಲೂಕಿನ ಕೊನೆ ಅಂಚಿನ ಗ್ರಾಮಗಳಾದ ಅಗ್ನಿಹಾಳ ಕೊಂಗಂಡಿ ಸೂಗುರು ಶಿವಪುರ ಗ್ರಾಮಗಳು ತಾಲ್ಲೂಕಾ ಕೇಂದ್ರದಿಂದ ಸುಮಾರು 40 ಕಿ.ಮೀ. ಅಂತರದಲ್ಲಿ ಇವೆ. ಒಂದು ವೇಳೆ ಈ ಗ್ರಾಮಗಳಲ್ಲಿ ಬೇಸಿಗೆ ಕಾಲದಲ್ಲಿ ಅಗ್ನಿ ಅವಘಡ ಸಂಭವಿಸಿದರೆ ಶಹಾಪುರ ಹಾಗೂ ಯಾದಗಿರಿ ಸುಮಾರು 60 ಕಿ.ಮೀ. ಅಂತರದಲ್ಲಿವೆ. ಈ ಎರಡು ಪಟ್ಟಣಗಳಿಂದ ಅಗ್ನಿಶಾಮಕ ದಳದವರು ಬರಬೇಕು. ಇವರು ಬರುವುದರೊಳಗಡೆ ಜಮೀನುಗಳು ಹುಲ್ಲಿನ ಬಣವೆಗಳು ಹಾಗೂ ಮನೆಯಲ್ಲಿ ವಿದ್ಯುತ್‌ನಿಂದ ಅವಘಡ ಸಂಭವಿಸಿದರೆ ಸಂಪೂರ್ಣವಾಗಿ ವಸ್ತುಗಳು ಧಾನ್ಯಗಳು ಹಣ ಇತ್ಯಾದಿ ಅಗ್ನಿ ಜ್ವಾಲೆಗೆ ಧಗಧಗಿಸಿ ಸುಟ್ಟು ಕರಕಲಾಗುತ್ತವೆ ಎಂದು ಈ ಭಾಗದ ಗ್ರಾಮಸ್ಥರು ಹೇಳುತ್ತಾರೆ. ಬೇಸಿಗೆ ಕಾಲದಲ್ಲಿ ಬೆಂಕಿ ಅನಾಹುತಗಳು ಆಕಸ್ಮಿಕವಾಗಿ ಘಟಿಸುತ್ತವೆ. ತಾಲ್ಲೂಕು ಕೇಂದ್ರದಲ್ಲಿ ಅಗ್ನಿಶಾಮಕ ದಳವಿಲ್ಲದಿರುವುದರಿಂದ ಸಾರ್ವಜನಿಕರು ರೈತರು ಹಾಗೂ ಗ್ರಾಮಸ್ಥರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಜಿಲ್ಲೆಯಲ್ಲಿ 15 ವರ್ಷ ಮೇಲ್ಪಟ್ಟ ವಾಹನಗಳನ್ನು ಕೇಂದ್ರ ಸರ್ಕಾರ ಬಳಕೆ ಮಾಡಬಾರದು ಎಂದು ಆದೇಶಿಸಿದ್ದು ಸದ್ಯ ಮೂರು ತಾಲ್ಲೂಕುಗಳಲ್ಲಿ ತಲಾ ಒಂದೊಂದು ವಾಹನ ಕಾರ್ಯಾಚರಣೆ ಮಾಡುತ್ತಿದೆ
ವೀರೇಶ ಉಕ್ಕಡಕ, ಜಿಲ್ಲಾ ಅಗ್ನಿ ಶಾಮಕದಳ ಠಾಣಾಧಿಕಾರಿ
ವಡಗೇರಾ ತಾಲ್ಲೂಕು ಕೇಂದ್ರವಾಗಿ ಅನೇಕ ವರ್ಷಗಳೇ ಗತಿಸಿದರೂ ಇಲ್ಲಿಯವರೆಗೂ ಅಗ್ನಿಶಾಮಕ ದಳ ಮಂಜೂರು ಆಗಿಲ್ಲ. ಇದರಿಂದ ಬೇಸಿಗೆ ಕಾಲದಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ಭಾಗದಲ್ಲಿ ಅಗ್ನಿ ಶಾಮಕದಳದ ಅವಶ್ಯಕತೆ ಇದೆ.
ಮೈಲಾರಪ್ಪ, ಹಯ್ಯಾಳ(ಬಿ) ಗ್ರಾಮಸ್ಥ
ವಡಗೇರಾ ತಾಲ್ಲೂಕು ಕೇಂದ್ರದಲ್ಲಿ ಅಗ್ನಿಶಾಮಕ ದಳವಿಲ್ಲದಿರುವುದು ಜನಪ್ರತಿನಿಧಿಗಳ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಕೂಡಲೇ ತಾಲ್ಲೂಕು ಕೇಂದ್ರದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಶಾಸಕರು ಕ್ರಮ ಕೈಗೊಳ್ಳಬೇಕು.
ಶರಣು ಇಟಗಿ, ಕರವೇ ಸಂಚಾಲಕ ವಡಗೇರಾ
ಅಗ್ನಿಶಾಮಕ ವಾಹನ ತಲುಪುವ ವೇಳೆಗೆ ತಾನಾಗಿಯೇ ಬೆಂಕಿ ನಂದಿದ ಹಲವು ಘಟನೆಗಳಿವೆ. ಆಗುವ ನಷ್ಟ ಹಾನಿಗಳನ್ನು ತಪ್ಪಿಸುವುದಕ್ಕೆ ನಮ್ಮಲ್ಲೇ ಅಗ್ನಿಶಾಮಕ ಠಾಣೆ ಸ್ಥಾಪಿಸಬೇಕು.
ಸಂಜು ಅಳೆಗಾರ, ಸಾಮಾಜಿಕ ಕಾರ್ಯಕರ್ತ ಗುರುಮಠಕಲ್‌
ಅಗ್ನಿಶಾಮಕ ಠಾಣೆಗೆ ಈಗಾಗಲೇ ಸ್ಥಳ ಗುರುತಿಸಲಾಗಿದೆ. ಸರ್ಕಾರದ ಹಂತದಲ್ಲಿ ಅನುದಾನ ಸಿಗುತ್ತಲೇ ಅವಶ್ಯಕ ಕೆಲಸಗಳು ನಡೆಯಲಿವೆ.
ಶಾಂತಗೌಡ ಬಿರಾದರ್‌, ತಹಶೀಲ್ದಾರ್ ಗುರುಮಠಕಲ್

ಪೂರಕ ವರದಿ: ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ಟಿ.ನಾಗೇಂದ್ರ, ಎಂ.ಪಿ.ಚಪೆಟ್ಲಾ, ವಾಟ್ಕರ್‌ ನಾಮದೇವ

ಯಾದಗಿರಿ ನಗರದ ಅಗ್ನಿ ಶಾಮಕ ಠಾಣೆಯಲ್ಲಿ ಕಾರ್ಯಾಚಣೆಯಲ್ಲಿರುವ ವಾಹನ ಪ್ರಜಾವಾಣಿ ಚಿತ್ರಗಳು: ರಾಜಕುಮಾರ ನಳ್ಳಿಕರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.