
ಯಾದಗಿರಿ ನಗರದ ಲುಂಬಿನಿ ಉದ್ಯಾನದ ಕೆರೆಯ ಬಳಿ 2025ನೇ ವರ್ಷದ ಕೊನೆಯ ಸೂರ್ಯಾಸ್ತ ಕಂಡು ಬಂದಿದ್ದು ಹೀಗೆ
ಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ
ಯಾದಗಿರಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಹೊಸ ವರ್ಷ 2026 ಅನ್ನು ಸ್ವಾಗತಿಸಲು ಬುಧವಾರ ಸಂಜೆಯಿಂದಲೇ ಭರ್ಜರಿ ಸಿದ್ಧತೆಗಳು ನಡೆದವು. ಗಡಿಯಾರದ ಮುಳ್ಳು ಮಧ್ಯರಾತ್ರಿ 12 ಗಂಟೆ ಹಾದು ಹೋಗುತ್ತಿದ್ದಂತೆ ಕೇಕ್ ಕತ್ತರಿಸಿದ ಯುವ ಸಮೂಹ ಸಂಭ್ರಮಿಸಿತು.
ನಗರದ ನೇತಾಜಿ ಸುಭಾಷ್ ವೃತ್ತ, ಹೊಸಳ್ಳಿ ಕ್ರಾಸ್, ರೈಲ್ವೆ ನಿಲ್ದಾಣ ರಸ್ತೆ, ಹೊಸ ಬಸ್ ನಿಲ್ದಾಣ, ಗಂಜ್ ವೃತ್ತ, ಸೇಡಂ ರಸ್ತೆ, ಚಿತ್ತಾಪುರ ರಸ್ತೆಯ ವಿವಿಧ ಬೇಕರಿ, ರೆಸ್ಟೋರೆಂಟ್, ಹೋಟೆಲ್‌ಗಳನ್ನು ವಿದ್ಯುತ್‌ದೀಪಗಳಿಂದ ಸಿಂಗಾರ ಮಾಡಲಾಗಿತ್ತು.
ಬೇಕರಿ, ತಿನಿಸುಗಳ ಅಂಗಡಿಗಳ ಮುಂದೆ ಶಾಮಿಯಾನ ಹಾಕಿ, ಬಣ್ಣ–ಬಣ್ಣದ ಬಲೂನ್‌ಗಳನ್ನು ಕಟ್ಟಿ ಕೇಕ್, ಬಗೆಬಗೆಯ ಸಿಹಿ ತಿನಿಸುಗಳನ್ನು ಮಾರಾಟ ಮಾಡಲಾಯಿತು. ಮೈಕೊರೆಯುವ ಚಳಿಯಲ್ಲಿಯೂ ವಿದ್ಯಾರ್ಥಿಗಳು, ಯುವತಿಯರು, ಯುವಕರು, ಕುಟುಂಬದ ಸದಸ್ಯರು ಸೇರಿದಂತೆ ಬಹುತೇಕರು ತಮಗಿಷ್ಟದ ಕೇಕ್ ಆರ್ಡರ್ ಮಾಡುವಲ್ಲಿ ಮಗ್ನರಾಗಿದ್ದರು.
ಪೈನಾಪಲ್, ಚಾಕೊಲೆಟ್, ಬ್ಲೂಬೆರ್ರಿ, ಬಟರ್ ಸ್ಕಾಚ್, ವೆನಿಲಾ, ಸ್ಟ್ರಾಬೆರಿ, ಮ್ಯಾಂಗೋ, ರೆಡ್ ವ್ಯಾಲ್ವೆಟ್, ಬ್ಲಾಕ್ ಫಾರೆಸ್ಟ್, ಪಿಸ್ತಾನಂತಹ ಕೇಕ್ ಹಾಗೂ ಪೇಸ್ಟ್ರಿಗಳನ್ನು ಆಕರ್ಷಿಸುವ ರೀತಿಯಲ್ಲಿ ತಯಾರಿಸಲಾಗಿತ್ತು. ಅರ್ಧ ಕೆ.ಜಿ.ಯಿಂದ ನಾಲ್ಕೈದು ಕೆ.ಜಿ. ವರೆಗೆ ಕೇಕ್‌ಗಳು ಮಾರಾಟವಾದವು.
‘ವೆಲ್‌ಕಮ್ 2026’ ಹ್ಯಾಪಿ ನ್ಯೂ ಇಯರ್, ಹೊಸ ವರ್ಷದ ಶುಭಾಷಯಗಳು ಎಂದು ಬರೆದಿದ್ದ ತರಹೇವಾರಿ ಕೇಕ್‌ಗಳು ಗಮನ ಸೆಳೆದವು. ಅರ್ಧ ಕೆ.ಜಿ. ಕೇಕ್‌ಗೆ ₹ 150, ಒಂದು ಕೆ.ಜಿ.ಗೆ ₹ 300, ಮುಂಚಿತವಾಗಿ ಆರ್ಡರ್ ಕೊಟ್ಟು ತಮ್ಮಷ್ಟದಂತೆ ಮಾಡಿದ ವಿಶೇಷ ಕೇಕ್‌ಗಳ ಮಾರಾಟವೂ ಭರ್ಜರಿಯಾಗಿತ್ತು.
ಬಟರ್ ಸ್ಕಾಚ್, ಬ್ಲ್ಯಾಕ್ ಫಾರೆಸ್ಟ್, ಪಿಸ್ತಾ, ಚಾಕೋಲೆಟ್, ಮಾಂಗೊ, ಸ್ಟ್ರಾಬರಿ, ಬಾದಾಮ್, ಪೈನಾಪಲ್, ಗ್ರೀನ್ ಆ್ಯಪಲ್ ಸೇರಿದಂತೆ ನಾನಾ ಬಗೆಯ ಪೇಸ್ಟ್ರಿಗಳು ಕೆ.ಜಿ.ಗೆ ₹ 600ಯಂತೆ ಖರೀದಿಯಾದವು.
ಕಾಲೇಜು ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು, ಕೆಲವು ಯುವಕರು ಮತ್ತು ಕುಟುಂಬ ಸದಸ್ಯರು ಮನೆಯ ತಾರಸಿ, ಹೋಟೆಲ್, ಧಾಬಾ, ರೆಸ್ಟೋರೆಂಟ್, ತೋಟಗಳಲ್ಲಿ ಕೇಕ್ ಕತ್ತರಿಸಿ, ಪರಸ್ಪರ ಸಿಹಿ ತಿನಿಸಿ ಶುಭಾಶಯಗಳ ವಿನಿಮಯದೊಂದಿಗೆ ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಂಡರು.
ಇನ್ನು ಮದ್ಯ ಪ್ರಿಯರು ರಾತ್ರಿಯಿಡೀ ಜಾಗರಣೆ ಮಾಡಿ ಹೊಸ ವರ್ಷವನ್ನು ಸ್ವಾಗತಿಸಲು ಅಗತ್ಯಕ್ಕೆ ತಕ್ಕಂತೆ ಮದ್ಯ ಖರೀದಿಸಲು ಬಾರ್‌ಗಳತ್ತ ಮುಖ ಮಾಡಿದ್ದರು. ಅಲ್ಲಲ್ಲಿ ಸ್ನೇಹಿತರ ರೂಮ್, ತೋಟದ ಮನೆಗಳಲ್ಲಿ ಮದ್ಯ ಕುಡಿದು ಅಮಲಿನಲ್ಲಿ ತೇಲಾಡಿದರು.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕೇಕ್‌ಗಳ ಮಾರಾಟ ಸಾಧಾರಣವಾಗಿತ್ತು. ಈ ಹಿಂದೆ ಒಂದು ಕೆ.ಜಿ. ಖರೀದಿಸುತ್ತಿದ್ದವರು ಅರ್ಧ ಕೆ.ಜಿ ಖರೀದಿಸಿದ್ದಾರೆ– ರವಿ ಬಾಲಾಜಿ, ಬೇಕರಿ ಮಾಲೀಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.