ADVERTISEMENT

ಪತ್ರಿಕಾ ವಿತರಕರ ದಿನಾಚರಣೆ: ಪತ್ರಿಕೆ ಹಿಡಿದು ಹಂಚುವರು ಜ್ಞಾನ ದೀವಿಗೆ

ಮಲ್ಲಿಕಾರ್ಜುನ ನಾಲವಾರ
Published 4 ಸೆಪ್ಟೆಂಬರ್ 2025, 6:57 IST
Last Updated 4 ಸೆಪ್ಟೆಂಬರ್ 2025, 6:57 IST
ಯಾದಗಿರಿ ನಗರದ ಹಳೇ ಬಸ್‌ ನಿಲ್ದಾಣದಲ್ಲಿ ಪತ್ರಿಕೆಗಳನ್ನು ಜೋಡಿಸುವಲ್ಲಿ ನಿರತವಾದ ವಿತರಕ
ಯಾದಗಿರಿ ನಗರದ ಹಳೇ ಬಸ್‌ ನಿಲ್ದಾಣದಲ್ಲಿ ಪತ್ರಿಕೆಗಳನ್ನು ಜೋಡಿಸುವಲ್ಲಿ ನಿರತವಾದ ವಿತರಕ   

ಯಾದಗಿರಿ: ಸೂರ್ಯನ ರಶ್ಮಿ ಭುವಿಗೆ ಬೀಳುವ ಮುನ್ನ ಪತ್ರಿಕಾ ವಿತರಕರ ಕಾಯಕ ಶುರುವಾಗುತ್ತದೆ. ಕೊರೆಯುವ ಚಳಿಯಿರಲಿ, ಸುರಿಯುವ ಮಳೆ ಇರಲಿ ಪತ್ರಿಕೆ ಹಿಡಿದು ಮನೆ–ಮನೆಗೆ ಸುದ್ದಿ ಜತೆಗೆ ಜ್ಞಾನ ದೀವಿಗೆ ಹಂಚುತ್ತಾರೆ. ಮುಂಜಾನೆಯ ಚಳಿಯಲ್ಲೂ ಬೆವರು ಹರಿಸಿ ಸುದ್ದಿಮನೆ–ಓದುಗರಿಗೆ ಸಂಪರ್ಕ ಸೇತುವೆಯೂ ಆಗಿದ್ದಾರೆ.

ಬೆಳಕು ಹರಿದು ಎಲ್ಲರೂ ಹಾಸಿಗೆ ಬಿಟ್ಟು ಏಳುವ ಹೊತ್ತಿಗೆ ನಿತ್ಯದ ನೈಜ ಸಂಗತಿಗಳನ್ನು ಹೊತ್ತು ತಂದು ಓದುಗರ ಮನೆ ಮುಂದಿಡುತ್ತಾರೆ. ವರ್ಷದಲ್ಲಿ ನಾಲ್ಕು ದಿನಗಳು ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲೂ ಲೋಕಜ್ಞಾನದ ಪ್ರಸರಣ ಮಾಡುತ್ತಲೇ ಇರುತ್ತಾರೆ.

ಪತ್ರಿಕಾ ವಿತರಕರ ಕಾಯಕ ಸೇವೆಯನ್ನು ಗೌರವಿಸುವುದಕ್ಕಾಗಿಯೇ ಸೆಪ್ಟೆಂಬರ್ 4ರಂದು ‘ಪತ್ರಿಕಾ ವಿತರಕರ ದಿನ’ ಆಚರಿಸಲಾಗುತ್ತಿದೆ. ಸುದ್ದಿ ಸ್ವಾರಸ್ಯದ ಸೇನಾನಿಗಳಂತೆ ಶ್ರಮಿಸುವ ಇವರನ್ನು ದಿನಾಚರಣೆಯ ನೆಪದಲ್ಲಿ ಸ್ಮರಿಸುವ ಪ್ರಯತ್ನವಿದು.

ADVERTISEMENT

ಮಧ್ಯರಾತ್ರಿ ಕಚೇರಿಯಲ್ಲಿ ಪುಟಗಳು ಸಿದ್ಧಗೊಂಡು ಮುದ್ರಣಾಲಯದಿಂದ ವಾಹನವೇರಿ ಹೊರಟ ಪತ್ರಿಕೆಗಳು ನಸುಕಿನ ಜಾವ ನಗರ, ಪಟ್ಟಣಗಳ ಬಸ್ ನಿಲ್ದಾಣ, ಮಾರುಕಟ್ಟೆ, ರೈಲು ನಿಲ್ದಾಣ, ಪ್ರಮುಖ ವೃತ್ತಗಳನ್ನು ತಲುಪುತ್ತವೆ. ಹಳ್ಳಿಗಳಲ್ಲಿ ಬಸ್ ನಿಲ್ದಾಣ, ಊರ ಮುಂದಿನ ಅಗಸಿಗೆ ಹೋಗುತ್ತವೆ.  

ಬಂದಂತಹ ಪತ್ರಿಕೆಗಳನ್ನು ಪತ್ರಿಕಾ ವಿತರಕರು ವಿತರಣೆ ಮಾಡುವ ಮನೆಗಳು, ಕಚೇರಿ, ಅಂಗಡಿ– ಮಳಿಗೆಗಳು, ಸಂಸ್ಥೆಗಳ ವಿಳಾಸಗಳ ಅನುಸಾರವಾಗಿ ಒಪ್ಪವಾಗಿ ಜೋಡಿಸಿಕೊಂಡು ಸೈಕಲ್, ಬೈಕ್‌ಗಳ ಮೇಲೆ ಇರಿಸಿಕೊಳ್ಳುತ್ತಾರೆ. ವಿತರಣೆಗೆ ತೆರಳುವಾಗ ಕೆಲವೆಡೆ ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದರೂ ಅದರಿಂದ ಧೃತಿಗೆಡದೆ ತಮ್ಮ ಕಾಯಕವನ್ನು ಮುಂದುವರಿಸುತ್ತಾರೆ. 

ಮುಂಜಾನೆ ಎದ್ದು ಪತ್ರಿಕೆಗಳನ್ನು ಓದುಗರಿಗೆ ಮುಟ್ಟಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಬಹುತೇಕ ಹುಡುಗರು ಬಡ, ಶ್ರಮಿಕ ವರ್ಗಕ್ಕೆ ಸೇರಿದವರು. ಕೆಲವರು ಶಿಕ್ಷಣ ಪಡೆಯುತ್ತಲೇ ನಗರದ ನಿತ್ಯದ ಖರ್ಚುಗಳನ್ನು ನಿಭಾಯಿಸಲು ವಿತರಣೆಯಲ್ಲಿ ತೊಡಗಿದ್ದಾರೆ. ಜ್ಞಾನದ ಜತೆಯಲ್ಲಿ ಸರ್ಕಾರದ ಯೋಜನೆಗಳು, ನೀತಿ–ನಿರೂಪಣೆಗಳನ್ನೂ ಓದುಗರಿಗೆ ತಲುಪಿಸುತ್ತಿದ್ದಾರೆ. ಸರ್ಕಾರ ಅಂತಹವರನ್ನು ಗುರುತಿಸಿ ವಿಶೇಷ ಪ್ಯಾಕೇಜ್ ಕೊಟ್ಟು ಶೈಕ್ಷಣಿಕ ಬದುಕಿಗೆ ಆಸರೆಯೂ ಆಗಬೇಕು ಎಂಬುದು ಪತ್ರಿಕಾ ವಿತರಕರು– ಏಜೆಂಟರ್‌ಗಳ ಮನವಿ.

ಯಾದಗಿರಿ ಗಾಂಧಿ ವೃತ್ತದಲ್ಲಿ ಪತ್ರಿಕೆಗಳನ್ನು ಮಾರುತ್ತಿರುವ ವಿತರಕ
ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಆರೋಗ್ಯ ವಿಮೆಯೂ ಕಲ್ಪಿಸಬೇಕು. ಗಿಗ್‌ ಕಾರ್ಮಿಕರ ಸಾಮಾಜಿಕ ಭದ್ರತೆ ವ್ಯಾಪ್ತಿಗೆ ನಮ್ಮನ್ನೂ ಸೇರಿಸಬೇಕು
ನಾಗಪ್ಪ ನಾಯ್ಕಲ್‌ ವಿತರಕ
ಇಂದಿನ ದುಬಾರಿಯ ದುನಿಯಾದಲ್ಲಿ ಪತ್ರಿಕೆ ವಿತರಣೆ ಮಾಡುತ್ತಾ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಕಷ್ಟ. ಸರ್ಕಾರ ವಿತರಕರ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಬೇಕು
ಭೀಮರಾಯ ಕುಲಕರ್ಣಿ ವಿತರಕ
20 ವರ್ಷಗಳಿಂದ ಪತ್ರಿಕಾ ವಿತರಣೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಸರ್ಕಾರದ ಯಾವುದೇ ಸವಲತ್ತು ಸಿಕ್ಕಿಲ್ಲ. ನಗರಸಭೆಯು ಪತ್ರಿಕಾ ವಿತರಿಕರಿಗೆ ನಿವೇಶನಗಳನ್ನು ಕೊಡಬೇಕು
‌ಅಮರಯ್ಯ ಸ್ವಾಮಿ ವಿತರಕ
ನಾನು 6ನೇ ತರಗತಿಯಿಂದ ಪತ್ರಿಕೆಗಳ ವಿತರಣೆ ಮಾಡುತ್ತಿದ್ದೇನೆ. ಇದೇ ಕಾಯಕದಲ್ಲಿ ಇದ್ದಕೊಂಡು ಇಬ್ಬರು ಮಕ್ಕಳಿಗೆ ಎಂಜಿನಿಯರ್ ಓದಿಸಿದ್ದೇನೆ. ಒಬ್ಬರು ಡಾಕ್ಟರ್ ಮತ್ತೊಬ್ಬರು ಬಿ.ಇಡಿ ಮುಗಿಸಿದ್ದಾರೆ. ಮೂವರ ಮದುವೆಯೂ ಮಾಡಿದ್ದೇನೆ
ಸಾಧಿಕ್ ಸುರಪುರ‌ ವಿತರಕ

‘ಬಸ್‌ಗಳಲ್ಲಿ ಪತ್ರಿಕೆ ಕಳುಹಿಸಲು ವಿನಾಯಿತಿ ಕೊಡಿ’ ‌

‘ಗ್ರಾಮೀಣ ಭಾಗದ ಎಲ್ಲ ಹಳ್ಳಿಗಳಿಗೆ ತೆರಳಿ ಪತ್ರಿಕೆ ಕೊಡುವುದು ಶ್ರಮದಾಯಕ ಮತ್ತು ಆರ್ಥಿಕ ಹೊರೆಯೂ ಆಗುತ್ತದೆ. ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪತ್ರಿಕೆಗಳನ್ನು ಸಾಗಿಸಲು ಸರ್ಕಾರವು ಅನುಕೂಲ ಮಾಡಿಕೊಡಬೇಕು’ ಎನ್ನುತ್ತಾರೆ ವಿತರಕ ಶರಣಗೌಡ ಹುಣಸಗಿ. ‘ಮುದ್ರಣಾ ಕಚೇರಿಗಳಿಂದ ಪಟ್ಟಣಕ್ಕೆ ಬಂದ ಪತ್ರಿಕೆಗಳನ್ನು ಒಂದೊಂದು ಹಳ್ಳಿಯಲ್ಲಿ ಐದಾರು ಮನೆಗಳಿಗೆ ಕಳುಹಿಸಬೇಕು. ಐದಾರು ಪತ್ರಿಕೆಗಳಿಗಾಗಿ ಅಲ್ಲಿಗೆ ಹೊಗುವುದು ಕಷ್ಟವಾಗುತ್ತದೆ. ಬಸ್‌ನಲ್ಲಿ ಇರಿಸಿ ಕಳುಹಿಸಿದರೆ ಚಾಲಕರು ನಿರ್ವಾಹಕರು ಹಣ ಕೇಳುತ್ತಾರೆ. ಹೀಗಾಗಿ ಪತ್ರಿಕೆಗಳನ್ನು ಬಸ್‌ಗಳಲ್ಲಿ ಉಚಿತವಾಗಿ ಕಳುಹಿಸುವ ವ್ಯವಸ್ಥೆ ಮಾಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.