ADVERTISEMENT

ನಸಲವಾಯಿ: ಗಡಿಗ್ರಾಮದ ಸಮಸ್ಯೆಗಳಿಗಿಲ್ಲ ಮುಕ್ತಿ

ಮೂಲಸೌಲಭ್ಯಗಳ ಕೊರತೆ, ಅಧಿಕಾರಿ–ಜನಪ್ರತಿನಿಧಿಗಳ ನಿರ್ಲಕ್ಷ್ಯ, ಗ್ರಾಮಸ್ಥರ ಅಳಲು

ಮಲ್ಲಿಕಾರ್ಜುನ ಅರಿಕೇರಕರ್
Published 18 ಫೆಬ್ರುವರಿ 2025, 5:57 IST
Last Updated 18 ಫೆಬ್ರುವರಿ 2025, 5:57 IST
ಸೈದಾಪುರ ವಲಯದ ನಸಲವಾಯಿ ಗ್ರಾಮದಲ್ಲಿ ಚರಂಡಿಯ ಕೊಳಚೆ ನೀರು ಖಾಲಿ ಜಾಗದಲ್ಲಿ ಹರಿಯುತ್ತಿರುವುದು.
ಸೈದಾಪುರ ವಲಯದ ನಸಲವಾಯಿ ಗ್ರಾಮದಲ್ಲಿ ಚರಂಡಿಯ ಕೊಳಚೆ ನೀರು ಖಾಲಿ ಜಾಗದಲ್ಲಿ ಹರಿಯುತ್ತಿರುವುದು.   

ನಸಲವಾಯಿ(ಸೈದಾಪುರ): ಗಡಿಭಾಗದಲ್ಲಿರುವ ನಸಲವಾಯಿ ಗ್ರಾಮದ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಗ್ರಾಮಸ್ಥರು ಮೂಲಸೌಲಭ್ಯ, ನೈರ್ಮಲ್ಯದ ಕೊರತೆ, ಶುದ್ಧ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ತೊಂದರೆ ಅನುಭವಿಸುವಂತಾಗಿದೆ. 

ಅನಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಗಡಿಭಾಗದ ನಸಲವಾಯಿ ಗ್ರಾಮದಲ್ಲಿ ಸುಮಾರು 3 ಸಾವಿರದಿಂದ 4 ಸಾವಿರ ಜನಸಂಖ್ಯೆಯಿದೆ. ಜನಸಂಖ್ಯೆಗೆ ಅನುಗುಣವಾಗಿ ಶುದ್ಧ ಕುಡಿಯುವ ನೀರು, ಸಿಸಿ ರಸ್ತೆ ಮತ್ತು ವೈಜ್ಞಾನಿಕ ಚರಂಡಿ ಸೇರಿದಂತೆ ಹಲವು ಸೌಲಭ್ಯಗಳು ಮರೀಚಿಕೆಯಾಗಿವೆ. ಗ್ರಾಮದ ಚರಂಡಿಗಳು ಕಸಕಡ್ಡಿಗಳಿಂದ ತುಂಬಿಕೊಂಡು, ಮನೆಬಳಕೆ ಹಾಗೂ ಅನುಪಯುಕ್ತ ನೀರು ಸರಾಗವಾಗಿ ಹರಿದು ಹೋಗದೆ, ಅಲ್ಲಲ್ಲಿ ಸಂಗ್ರಹಗೊಂಡು ದುರ್ನಾತ ಬೀರುತ್ತಿದೆ. ನಿತ್ಯ ಶಾಲೆಗೆ ತೆರಳುವ ಮಕ್ಕಳು, ವೃದ್ಧರು, ರೋಗಿಗಳು, ಮಹಿಳೆಯರು, ನಿತ್ಯದ ವಹಿವಾಟಿಗೆ ಯಾದಗಿರಿ, ಸೈದಾಪುರ, ಪಕ್ಕದ ನಾರಾಯಣಪೇಠ ಪಟ್ಟಣಗಳಿಗೆ ಹೋಗಲು ಹಾಗೂ ರೈತರು ತಮ್ಮ ಹೊಲಗದ್ದೆಗಳಲ್ಲಿನ ಕೃಷಿ ಚಟುವಟಿಕೆಗಳಿಗಾಗಿ ಗ್ರಾಮದಲ್ಲಿರುವ ಆಂಜನೇಯ ದೇವಸ್ಥಾನದ ರಸ್ತೆ ಮೂಲಕವೇ ಹೋಗಬೇಕು. ಆದರೆ ಈ ರಸ್ತೆ ಪಕ್ಕದಲ್ಲಿಯೇ ಇರುವ ಚರಂಡಿಯ ಕೊಳಚೆ ನೀರು ರಸ್ತೆ ಮೇಲೆಯೇ ಹರಿಯುತ್ತಿದ್ದು, ಜನರು ಮೂಗುಮುಚ್ಚಿಕೊಂಡು ಓಡಾಡುವಂತಾಗಿದೆ.

ಚರಂಡಿ ಸ್ವಚ್ಛತೆಗೆ ಪಂಚಾಯಿತಿ ಸಿಬ್ಬಂದಿ: ಗ್ರಾಮದ ಚರಂಡಿಗಳಲ್ಲಿ ಕೊಳಚೆ ನೀರು ಹರಿದು ಹೋಗದೆ ಕಟ್ಟಿಕೊಂಡಿವೆ. ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದರೂ ಯಾರೊಬ್ಬರೂ ಕ್ರಮವಹಿಸುತ್ತಿಲ್ಲ. ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು  ಸ್ವಚ್ಛತೆಗೆ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥ ನರಸಿಂಹಲು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯ:

ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಲಕ್ಷಾಂತರ ಅನುದಾನ ನೀಡಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಗ್ರಾಮದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕ್ರಮಕೈಗೊಳ್ಳದೆ ಗ್ರಾಮವನ್ನು ಸಂಪೂರ್ಣ ನಿರ್ಲಕ್ಷ್ ವಹಿಸಿದ್ದಾರೆ ಎಂಬುದು ಗ್ರಾಮಸ್ಥರ ಅಳಲಾಗಿದೆ. 

ಸೊಳ್ಳೆಗಳ ಕಾಟ:

‘ಅವೈಜ್ಞಾನಿಕ ಚರಂಡಿ ನಿರ್ಮಾಣ ಹಾಗೂ ಕೆಸರು ಹೂಳು ತುಂಬಿರುವ ಚರಂಡಿಗಳಲ್ಲಿ ಕೊಳಚೆ ನೀರು ಸಂಗ್ರಹಗೊಂಡು ಸೊಳ್ಳೆಗಳ ಉತ್ಪತ್ತಿಯ ತಾಣವಾಗಿ ಮಾರ್ಪಟ್ಟಿವೆ. ಇದರಿಂದ ಗ್ರಾಮದಲ್ಲಿ ಜನ ಮತ್ತು ಜಾನುವಾರಗಳಿಗೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ರಾತ್ರಿ ಸಮಯದಲ್ಲಿ ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವಾಗದಂತೆ ಆಗಿದೆ. ಜತೆಗೆ ಸಾಂಕ್ರಾಮಿಕ ರೋಗಗಳ ಭೀತಿಯು ಎದುರಾಗಿದೆ’ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಜೋತು ಬಿದ್ದ ವಿದ್ಯುತ್ ತಂತಿಗಳು: ಗ್ರಾಮದ ಹಲವು ಕಡೆಗಳಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಇದರಿಂದ ಮಳೆ ಗಾಳಿಗೆ ಹರಿದು ಕೆಳಗೆ ಬಿದ್ದು ಅನಾಹುತ ಸಂಭವಿಸುವ ಭಯ ಜನರನ್ನು ಕಾಡುತ್ತಿದೆ.

ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಜನರು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಗಡಿಗ್ರಾಮಕ್ಕೆ ಶೀಘ್ರ ಜಿಲ್ಲಾಧಿಕಾರಿ ಹಾಗೂ ಸಿಇಒ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ.
ಉಮೇಶ.ಕೆ ಮುದ್ನಾಳ, ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟಾ ಕಾರ್ಯದರ್ಶಿ
ಚರಂಡಿ ಮತ್ತು ಜೋತು ಬಿದ್ದ ವಿದ್ಯುತ್ ತಂತಿ ಸಮಸ್ಯೆಗಳು ಗ್ರಾಮದ ಜನರನ್ನು ಹೈರಾಣಾಗಿಸಿವೆ. ಸಂಬಂಧಿಸಿದವರು ಆದಷ್ಟು ಬೇಗ ಸರಿಪಡಿಸಬೇಕು. ಇಲ್ಲದಿದ್ದರೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ.
ಜಗದೀಶ, ಗ್ರಾಮಸ್ಥ
ಈಗಾಗಲೇ ಗ್ರಾಮಕ್ಕೆ ಸಿಇಒ ಅವರು ಭೇಟಿ ನೀಡಿ ಪಿಡಿಒ ಅವರಿಂದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಚರಂಡಿ, ವಿದ್ಯುತ್ ತಂತಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಶೀಘ್ರದಲ್ಲಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ
ರಾಘವರೆಡ್ಡಿ ನಸಲವಾಯಿ, ಅಧ್ಯಕ್ಷ ಗ್ರಾ.ಪಂ ಅನಪುರ
ಸೈದಾಪುರ ವಲಯದ ನಸಲವಾಯಿ ಗ್ರಾಮದಲ್ಲಿ ಚರಂಡಿಯಲ್ಲಿ ಕಸ-ಕಡ್ಡಿ ತುಂಬಿಕೊಂಡಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.