ADVERTISEMENT

ಆಮ್ಲಜನಕ ಘಟಕ ಶೀಘ್ರ ಆರಂಭಕ್ಕೆ ಸೂಚನೆ

ಸುರಪುರ ತಾಲ್ಲೂಕು ಆಸ್ಪತ್ರೆಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 14 ಮೇ 2021, 16:09 IST
Last Updated 14 ಮೇ 2021, 16:09 IST
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕು ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆಮ್ಲಜನಕ ಘಟಕ ವೀಕ್ಷಿಸಿದರು
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕು ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆಮ್ಲಜನಕ ಘಟಕ ವೀಕ್ಷಿಸಿದರು   

ಯಾದಗಿರಿ: ಕೋವಿಡ್ ಸೋಂಕಿತರಿಗಾಗಿ ಸುರಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಆಮ್ಲಜನಕ (ಆಕ್ಸಿಜನ್ ಪ್ಲಾಂಟ್) ಘಟಕ ಶೀಘ್ರ ಸ್ಥಾಪನೆ ಮಾಡುವಂತೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಸುರಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಶುಕ್ರವಾರ ಆಮ್ಲಜನಕ ಘಟಕ ವೀಕ್ಷಿಸಿ ಮಾತನಾಡಿದ ಅವರು, ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಿ ಒಂದು ನಿಮಿಷಕ್ಕೆ 110 ಲೀಟರ್ ಉತ್ಪಾದನೆ ಸಾಮಾರ್ಥ್ಯದ ಈ ಆಮ್ಲಜನಕ ಪ್ಲಾಂಟ್‌ ಅನ್ನು ಕೋವಿಡ್ ಸೋಂಕಿತರ ಸೇವೆಗೆ ಅಣಿಗೊಳಿಸಬೇಕು ಎಂದು ತಾಂತ್ರಿಕ ವರ್ಗದವರಿಗೆ ನಿರ್ದೇಶನ ನೀಡಿದರು.

ಇದೇವೇಳೆಆಸ್ಪತ್ರೆ ವೀಕ್ಷಿಸಿದ ಜಿಲ್ಲಾಧಿಕಾರಿ, ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಆಸ್ಪತ್ರೆ ಸಿಬ್ಬಂದಿಗೆ ಸೂಚಿಸಿದರು.

ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ಆಸ್ಪತ್ರೆಗೆ ಬೇಕಾದ ವೈದ್ಯಕೀಯ ಪರಿಕರಗಳನ್ನು ಖರೀದಿಸುವಂತೆ ಅವರು ವೈದ್ಯರಿಗೆ ತಿಳಿಸಿದರು.

ADVERTISEMENT

ಈ ವೇಳೆ ಹಾಜರಿದ್ದ ವೈದ್ಯಾಧಿಕಾರಿ ಡಾ.ಹರ್ಷವರ್ಧನ್ ರಫಗಾರ ಅವರು ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಆಸ್ಪತ್ರೆಗೆ ನುರಿತ ಸ್ಟಾಫ್‌ ನರ್ಸ್‌ಗಳ ಅವಶ್ಯಕತೆಯಿದೆ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ವೈದ್ಯರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ತಾಲ್ಲೂಕು ಆಸ್ಪತ್ರೆಗೆ ಶೀಘ್ರದಲ್ಲಿಯೇ ಸ್ಟಾಫ್‌ ನರ್ಸ್‌ಗಳ ನಿಯೋಜನೆ ಮಾಡುವುದಾಗಿ ಭರವಸೆ ನೀಡಿದರು.

ಈ ವೇಳೆ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಸುರಪುರ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಕಂದಾಯ ನಿರೀಕ್ಷಕ ಗುರುಬಸಪ್ಪ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.