ಸುರಪುರ: ‘ನಾಯಕತ್ವದ ಗುಣ ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ಸಹಕಾರಿಯಾಗಿದೆ’ ಎಂದು ಪ್ರಭು ಕಾಲೇಜಿನ ಉಪನ್ಯಾಸಕ ಉಪೇಂದ್ರನಾಯಕ ಸುಬೇದಾರ ಹೇಳಿದರು.
ತಾಲ್ಲೂಕಿನ ರತ್ತಾಳ ಗ್ರಾಮದಲ್ಲಿ ರಂಗಂಪೇಟೆಯ ಜ್ಞಾನಬಿಂದು ಶಿಕ್ಷಣ ಸಂಸ್ಥೆ ಗುರುವಾರ ಹಮ್ಮಿಕೊಂಡಿದ್ದ ಎನ್‍ಎಸ್‍ಎಸ್ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಶಿಬಿರ ಸಾಮಾಜಿಕ ಅರಿವು ಮೂಡಿಸಿಕೊಳ್ಳಲು ನೆರವಾಗುತ್ತದೆ. ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯೊಂದಿಗೆ ಗ್ರಾಮೀಣ ಭಾಗದ ಜನರ ಜೀವನ ಮಟ್ಟ ಮತ್ತು ಅಭಿವೃದ್ದಿ ಬಗ್ಗೆ ಅರಿತುಕೊಳ್ಳಬೇಕು. ಅವರ ಜೀವನ ಕಲಿಕೆ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಸಲಹೆ ನೀಡಿದರು.
ಉಪನ್ಯಾಸಕ ಧರ್ಮರಾಜ ಪಿಳಿಬಂಟ ಮಾತನಾಡಿ, ‘ಯುವ ಜನತೆಯೇ ದೇಶದ ನಿಜವಾದ ಸಂಪತ್ತು. ಯುವಕರು ಮಾನಸಿಕವಾಗಿ, ಬೌದ್ಧಿಕವಾಗಿ ಸದೃಢತೆ ಹೊಂದಬೇಕು. ಸದೃಢ ಭಾರತಕ್ಕೆ ಯುವ ಜನತೆಯೇ ಶಕ್ತಿಯಾಗಿದ್ದಾರೆ’ ಎಂದರು.
‘ವಿದ್ಯಾರ್ಥಿಗಳು ಭವಿಷ್ಯದ ಜೀವನಕ್ಕಾಗಿ ಚಿಂತನೆ ಹೊಂದಿರಬೇಕು. ಉತ್ತಮವಾದ ಮಾರ್ಗದರ್ಶನ ಪಡೆದು ವೃತ್ತಿಯ ಅವಕಾಶ ಪಡೆಯುವಂತವರಾಗಬೇಕು. ಆರೋಗ್ಯ ಮತ್ತು ಜೀವನ ಶೈಲಿ ಯುವಕರ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ ದೈಹಿಕ ಚಟುವಟಿಕೆಗಳಗೆ ಹೆಚ್ಚಿನ ಗಮನ ಕೊಡಬೇಕು’ ಎಂದರು.
ಯೋಜನಾಧಿಕಾರಿ ವೆಂಕಟೇಶ ಆಲದರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ತಿಮ್ಮಣ್ಣ ಪೂಜಾರಿ, ಉಪನ್ಯಾಸಕ ವಿಜಯಕುಮಾರ ಬಣಗಾರ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮಯ್ಯ ದೊಡ್ಮನಿ, ಯಲ್ಲಪ್ಪ ಗಡದರ, ನಾಗರೆಡ್ಡಿ ಯಾದಗಿರಿಕರ್, ವೆಂಕಣ್ಣ ಪೂಜಾರಿ ವೇದಿಕೆಯಲ್ಲಿದ್ದರು. ಶಶಿಕಲಾ ಸ್ವಾಗತಿಸಿದರು. ನಾಗರಾಜ ಆಲದರ್ತಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.