ಹುಣಸಗಿ: ‘ಮಕ್ಕಳಲ್ಲಿ ಅಪೌಷ್ಟಕತೆ ದೂರವಾಗಲು ಮುಂಜಾಗ್ರತೆಯಾಗಿ ಗರ್ಭಿಣಿ ಹಾಗೂ ಬಾಣಂತಿಯರು ನಿತ್ಯ ತರಕಾರಿ, ಹಣ್ಣುಗಳು ಸೇರಿದಂತೆ ಪೌಷ್ಟಿಕ ಆಹಾರ ಸೇವನೆಗೆ ಆದ್ಯತೆ ನೀಡಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ತಿಪ್ಪಣ್ಣ ಶಿರಸಗಿ ಹೇಳಿದರು.
ತಾಲ್ಲೂಕಿನ ರಾಜನಕೊಳೂರು ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಪೋಷಣ ಅಭಿಯಾನದಲ್ಲಿ ಅವರು ಮಾತನಾಡಿದರು.
‘ಮೊಟ್ಟೆ, ಹಾಲು, ಮೊಸರು ಸೇರಿದಂತೆ ಸಮತೋಲನ ಆಹಾರ ಸೇವಿಸುವುದರಿಂದಾಗಿ ತಾಯಿ ಹಾಲು ಕುಡಿದ ಮಕ್ಕಳು ಸಶಕ್ತರಾಗಿ ಬೆಳೆಸಲು ಸಹಕಾರಿಯಾಗುತ್ತದೆ. ಮಕ್ಕಳಿಗೆ ಯಾವುದೇ ಕಾರಣಕ್ಕೂ ಬೇಕರಿ ತಿನಿಸು ಹಾಗೂ ಕರಿದ ಪದಾರ್ಥಗಳನ್ನು ನೀಡಬೇಡಿ’ ಎಂದು ಸಲಹೆ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಾಲಸಾಬ್ ಪೀರಾಪುರ ಮಾತನಾಡಿ, ‘ತಾಲ್ಲೂಕಿನಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಬಾಣಂತಿಯರಿಗೆ ಗುಣಮಟ್ಟದ ಹಾಗೂ ಬೇಯಿಸಿದ ಆಹಾರ ನೀಡಲಾಗುತ್ತಿದ್ದು, ಈ ಯೋಜನೆ ಸೌಲಭ್ಯ ಬಳಸಿಕೊಳ್ಳುವಂತೆ’ ಹೇಳಿದರು.
ಈ ಸಂದರ್ಭದಲ್ಲಿ ಕೆಲ ಮಕ್ಕಳಿಗೆ ಅಕ್ಷರಾಭ್ಯಾಸ, ಅನ್ನ ಪ್ರಾಶನ, ಹುಟ್ಟುಹಬ್ಬ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.
ಮುಖಂಡ ಲಕ್ಷ್ಮಣ ನಾಯಕ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಎಚ್.ಸಿ. ಪಾಟೀಲ ಮಾತನಾಡಿದರು. ಎಂ.ಬಿ. ಕೋರಿ, ಮಂಜುನಾಥ ಚಂದಾ, ಕೊಡೆಕಲ್ಲ ವಲಯ ಮೇಲ್ವಿಚಾರಕಿ ಗುರುದೇವಿ ಹಿರೇಮಠ, ಸೀಮಾ ಕೋರಿ, ಶಿವರಾಜ ಬಿರಾದಾರ, ಬಸನಗೌಡ ವಠಾರ, ರಾಮನಗೌಡ ವಠಾರ, ಗುರುನಾಥ ಹುಲಕಲ್ಲ, ಗ್ರಾಪಂ ಪಿಡಿಒ ಹನುಮಂತ ಹೆಗ್ಗೂರ, ಆಶಾಬೇಗಂ, ಬಸಲಿಂಗಮ್ಮ, ಸರೋಜಿನಿ,ಸುನಂದಾ, ಲಕ್ಷ್ಮಿ ಚವ್ಹಾಣ, ಶೋಭಾ ಸಜ್ಜನ ಇದ್ದರು.
ಸಂಗಮ್ಮ ಸ್ವಾಗತಿಸಿದರು. ಜಯಶ್ರೀ ಬಿರಾದಾರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.