ADVERTISEMENT

ಯಾದಗಿರಿ ಜಿಲ್ಲೆಯಲ್ಲಿ 104 ಬಸ್‌ಗಳ ಕಾರ್ಯಾಚರಣೆ

ಅನ್‌ಲಾಕ್‌ 2: ಬೇಕಾಬಿಟ್ಟಿ ತಿರುಗಾಟ, ಮಾರುಕಟ್ಟೆಗಳಲ್ಲಿ ಅಂತರವಿಲ್ಲ, ಮಾಸ್ಕ್‌ ಇಲ್ಲ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 15:05 IST
Last Updated 21 ಜೂನ್ 2021, 15:05 IST
ಯಾದಗಿರಿ ಕೇಂದ್ರ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೆ ಕುರ್ಚಿಗಳು ಖಾಲಿಯಾಗಿದ್ದವು
ಯಾದಗಿರಿ ಕೇಂದ್ರ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೆ ಕುರ್ಚಿಗಳು ಖಾಲಿಯಾಗಿದ್ದವು   

ಯಾದಗಿರಿ: ಒಂದೂವರೆ ತಿಂಗಳ ನಂತರ ಜಿಲ್ಲೆಯಲ್ಲಿ ಬಸ್‌ಗಳ ಕಾರ್ಯಾಚರಣೆ ಆರಂಭವಾಗಿದ್ದು, ಸೋಮವಾರ 104 ಬಸ್‌ಗಳು ಸಂಚಾರ ಮಾಡಿವೆ.ಇದಕ್ಕೂ ಮುನ್ನ ಬಸ್‌ ನಿಲ್ದಾಣವನ್ನು ನೀರಿನಿಂದ ತೊಳೆದು ಸ್ಯಾನಿಟೈಸ್‌ ಮಾಡಲಾಯಿತು.

ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ, ವಡಗೇರಾ, ಗುರುಮಠಕಲ್‌ ಸೇರಿದಂತೆ ವಿವಿಧ ಮುಖ್ಯ ಪಟ್ಟಣಗಳಿಗೆ ಬಸ್‌ ಸಂಚಾರ ಆರಂಭವಾಗಿದೆ. ಅಲ್ಲದೇ ಜಿಲ್ಲೆ, ಅಂತರ ರಾಜ್ಯಕ್ಕೂ ಬಸ್‌ ಕಾರ್ಯಾಚರಣೆ ಮಾಡಲಾಗಿದೆ.

ಬೇರೆ ಜಿಲ್ಲೆ, ಅಂತರ ರಾಜ್ಯಕ್ಕೆ ಬಸ್‌:

ADVERTISEMENT

ಜಿಲ್ಲೆಯಾದ್ಯಂತ ಬಸ್‌ಗಳ ಕಾರ್ಯಾಚರಣೆ ಮಾಡಿರುವುದು ಒಂದೇ ಕಡೆಯಾದರೆ ಬೇರೆ ಜಿಲ್ಲೆ, ರಾಜ್ಯಕ್ಕೂ ಬಸ್‌ಗಳು ಕಾರ್ಯಾಚರಣೆ ಮಾಡಿವೆ.

ಬೆಂಗಳೂರು, ಹುಬ್ಬಳ್ಳಿ, ರಾಯಚೂರು, ಕಲಬುರ್ಗಿ, ಧಾರವಾಡ, ನಾರಾಯಣಪೇಟ್‌, ಹೈದರಾಬಾದ್‌, ವಿಜಯಪುರ ಜಿಲ್ಲೆಗಳಿಗೆ ಬಸ್‌ ಸಂಚಾರ ಮಾಡಿವೆ.

ಸಾಧರಣ ಬೇಡಿಕೆ:

ಬಸ್‌ಗಳ ಸಂಚಾರ ಆರಂಭವಾಗಿದ್ದರೂ ಪ್ರಯಾಣಿಕರಿಂದ ಬಸ್‌ಗಳಿಗೆ ಹೆಚ್ಚಿನ ಬೇಡಿಕೆ ಬಂದಿಲ್ಲ. ಇದರಿಂದ ಮೊದಲ ದಿನ ಕೇವಲ 104 ಬಸ್‌ಗಳನ್ನು ಮಾತ್ರ ಕಾರ್ಯಾಚರಣೆ ಮಾಡಲಾಗಿದೆ. ಉಳಿದಂತೆ ಬೇಡಿಕೆ ನೋಡಿಕೊಂಡು ಮಾರ್ಗದಲ್ಲಿ ಬಸ್‌ಗಳನ್ನು ಓಡಿಸಲಾಗಿದೆ.ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರು ಇರಲಿಲ್ಲ. ಕುರ್ಚಿಗಳು ಖಾಲಿಯಾಗಿದ್ದವು.ಬಸ್‌ ನಿಲ್ದಾಣಗಳಲ್ಲಿರುವ ಅಂಗಡಿಗಳನ್ನು ತೆಗೆದಿರಲಿಲ್ಲ.

ತಪಾಸಣೆ, ಲಸಿಕೆ:

ವಿವಿಧ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ದೇಹದ ಉಷ್ಣಾಂಶ ತಪಾಸಣೆ ಮಾಡಿ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಶೇ 50ರಷ್ಟು ಸೀಟುಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳಲಾಗಿದೆ. ಎರಡು ಡೋಸ್‌ ಪಡೆದವರನ್ನು ಪ್ರಯಾಣಕ್ಕೆ ಆದ್ಯತೆ ನೀಡಲಾಗಿದೆ. ಕೆಲವರು ಮಾಸ್ಕ್‌ ಧರಿಸದೆ ಬಂದಿದ್ದರು. ಮಾಸ್ಕ್‌ ಧರಿಸಿ ಬಂದವರನ್ನು ಬಸ್‌ಗೆ ಹತ್ತಿಸಿಕೊಳ್ಳಲಾಗಿದೆ.

ಬೇಕಾಬಿಟ್ಟಿ ಓಡಾಟ:

ಕೋವಿಡ್‌ ಪಾಸಿಟಿವಿಟಿ ದರ ಇಳಿಕೆಯಾಗಿದ್ದರಿಂದ ಜಿಲ್ಲೆಯಲ್ಲಿ ಎಲ್ಲ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದ್ದು, ಸಾರ್ವಜನಿಕರು ಬೇಕಾಬಿಟ್ಟಿ ಓಡಾಟ ನಡೆಸುತ್ತಿದ್ದಾರೆ.

ಮುಖ್ಯವಾಗಿ ಮಾರುಕಟ್ಟೆ ಪ್ರದೇಶಗಳಲ್ಲಿ ಸಾರ್ವಜನಿಕರು ಬೇಕಾಬಿಟ್ಟಿ ಓಡಾಟ ನಡೆಸುತ್ತಿದ್ದಾರೆ.

ಸೋಮವಾರ ಹೆಚ್ಚಿನ ಸಂಚಾರ ಕಂಡು ಬಂತು. ಬಸ್‌ ಸಂಚಾರ ಆರಂಭಗೊಂಡಿದ್ದರಿಂದ ವಿವಿಧ ಪ್ರದೇಶಗಳಿಗೆ ತೆರಳಲು ಜನರ ಓಡಾಟ ಹೆಚ್ಚಾಗಿತ್ತು.

ಆಟೊ, ಟಂಟಂ ಓಡಾಟ ಸಾಮಾನ್ಯವಾಗಿತ್ತು. ಪ್ರಮುಖ ವೃತ್ತದಲ್ಲಿ ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ ಅನ್ನು ತೆರವುಗೊಳಿಸಲಾಗಿದೆ.

ಮಾಸ್ಕ್‌ ಇಲ್ಲ, ಅಂತರವಿಲ್ಲ:

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಾರ್ವಜನಿಕರು ಮಾಸ್ಕ್‌ ಧರಿಸದೇ ಓಡಾಟ ನಡೆಸಿದ್ದು ಸಾಮಾನ್ಯವಾಗಿತ್ತು. ಪರಸ್ಪರ ಅಂತರ ಮರೆತು ತಿರುಗಾಡುತ್ತಿದ್ದರು. ಗೃಹ ಪ್ರವೇಶ ಕಾರ್ಯಕ್ರಮಗಳು ಸಾಂಗವಾಗಿ ನಡೆದವು.

ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆವರೆಗೆ ಅಂಗಡಿ ಮುಂಗಟ್ಟು ತೆಗೆಯಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದ್ದರೂ ಕೆಲ ಅಂಗಡಿಗಳು ಸಮಯ ಮೀರಿ ತೆಗೆದಿದ್ದವು.

***

ಜಿಲ್ಲೆಯಲ್ಲಿ ಸಂಚರಿದ ಬಸ್‌ಗಳ ವಿವರ

ತಾಲ್ಲೂಕು;ಬಸ್‌ಗಳು

ಯಾದಗಿರಿ;30
ಶಹಾಪುರ;32
ಸುರಪುರ;30
ಗುರುಮಠಕಲ್‌;12
ಒಟ್ಟು;104

***

ಸೋಮವಾರದಿಂದ ಬಸ್‌ಗಳ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಕೋವಿಡ್ ನಿಯಮಗಳನ್ನು ಪಾಲಿಸಲಾಗುತ್ತಿದೆ. ಆರೋಗ್ಯ ಇಲಾಖೆ ಜೊತೆಗೂಡಿ ಪ್ರಯಾಣಿಕರ ತಪಾಸಣೆ ಮಾಡಲಾಗುತ್ತಿದೆ
ರಮೇಶ ಪಾಟೀಲ, ಎನ್‌ಈಕೆಆರ್‌ಟಿಸಿ ವಿಭಾಗೀಯ ಸಂಚಲನಾಧಿಕಾರಿ

***

ಸರ್ಕಾರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅನ್‌ಲಾಕ್‌ ಮಾಡಿದೆ. ಆದರೆ, ನಾವು ಮೈಮರೆತರೆ ಅಪಾಯ ತಪ್ಪಿದ್ದಲ್ಲ. ಕೋವಿಡ್‌ ನಿಯಮಗಳನ್ನು ಯಾವಾಗಲೂ ಪಾಲಿಸಬೇಕು
ಬಸವರಾಜ ರಾಜಪ್ಪ, ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.