ADVERTISEMENT

ಯಾದಗಿರಿ | ವಿದ್ಯುತ್ ಮಸೂದೆ ವಿರೋಧಿಸಿ ಕಿಸಾನ್ ಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಮೇ 2020, 16:00 IST
Last Updated 26 ಮೇ 2020, 16:00 IST
ಕೇಂದ್ರ ಸರ್ಕಾರ ಹೊಸ ವಿದ್ಯುತ್ ಮಸೂದೆ ವಿರೋಧೀಸಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು
ಕೇಂದ್ರ ಸರ್ಕಾರ ಹೊಸ ವಿದ್ಯುತ್ ಮಸೂದೆ ವಿರೋಧೀಸಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು   

ಯಾದಗಿರಿ: ಕೊರೊನಾ ಬಿಕ್ಕಟ್ಟಿನ ಮಧ್ಯೆ ಕೇಂದ್ರ ಸರ್ಕಾರ ಹೊಸ ವಿದ್ಯುತ್ ಮಸೂದೆಯನ್ನು ಮಂಡಿಸಿ ರೈತರಿಗೆ ಅನ್ಯಾಯ ಮಾಡಲು ಹೊರಟಿದ್ದು, ಇದನ್ನು ಕೂಡಲೇ ಕೈಬಿಡುವಂತೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಆಗ್ರಹಿಸಿದೆ.

ರಾಜ್ಯ ಸಮಿತಿ ಕರೆಯ ಮೇರೆಗೆ ನಗರದಲ್ಲಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ನಿಲುವಿಗೆ ಕಟು ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಕಿಸಾನ್ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಮಾಣಿಕರೆಡ್ಡಿ ಕುರಕುಂದಿ, ರೈತರಿಗೆ ಸಮಸ್ಯೆ ಸೃಷ್ಟಿಸಲು ಕೇಂದ್ರವು ಯತ್ನಿಸುತ್ತಿದೆ. ಪ್ರಧಾನಿ ಮೋದಿ ಸ್ನೇಹಿತರಾದ ಉದ್ಯಮಿ ಗೌತಮ ಅದಾನಿ ಹಾಗೂ ಇತರರಿಗೆ ಲಾಭ ಮಾಡಿಕೊಡಲು ಹುನ್ನಾರ ನಡೆಸುತ್ತಿದ್ದಾರೆ. ಕೃಷಿ ಕ್ಷೇತ್ರಕ್ಕೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಇಂಥ ಗಂಭೀರ ವಿಚಾರದಲ್ಲಿ ಕೇಂದ್ರ ರೈತರ ಜೊತೆ ಚೆಲ್ಲಾಟವಾಡುತ್ತಿದೆ. ರಾಜ್ಯ ಸರ್ಕಾರಕ್ಕೆ ಈ ವಿಚಾರವಾಗಿ ಕೇಂದ್ರ ಅಭಿಪ್ರಾಯ ತಿಳಿಸಲು 21 ದಿನಗಳ ಗಡುವು ಇದ್ದು, ಇದು ಮುಗಿಯುವ ಹಂತದಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಯಾವುದೇ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಕೇಂದ್ರದ ಈ ತಿದ್ದುಪಡಿಗೆ ಒಪ್ಪಿಗೆ ಸೂಚಿಸಬಾರದು. ತಕ್ಷಣ ಈ ಕ್ರಮ ಕೈಬಿಡಬೇಕು. ಇಲ್ಲವಾದಲ್ಲಿ ರೈತರೊಂದಿಗೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ರಾಮು ಮುಂಡರಗಿ, ಸಂಜಯ ಕುಮಾರ ಕವಲಿ, ರಾಜು ಕಲಾಲ್, ಸೋಮಶೇಖರ ಮಸ್ಕನಳ್ಳಿ, ನಾಗರಾಜ ಅವಂಟಿ, ರಮೇಶ ಹೊರಪೇಟಿ, ಹುಲೆಪ್ಪ ಏಕನಾಥ, ಮಲ್ಲಪ್ಪ, ಮಲ್ಲಪ್ಪ ಸಂದ್ಲೆಪ್ಪನೋರ್, ರಾಜು ಬಾಗ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.