
ಯಾದಗಿರಿ: ಹುಣಸಗಿ ತಾಲ್ಲೂಕಿನ ರೈತರಿಂದ ₹ 1.93 ಕೋಟಿ ಮೌಲ್ಯದ ಭತ್ತ ಖರೀದಿಸಿ ಅದರ ಹಣ ಕೊಡದೆ ಪರಾರಿಯಾದ ಆರೋಪದಡಿ ಆಂಧ್ರಪ್ರದೇಶ ಮೂಲದ ಏಳು ಮಂದಿಯ ವಿರುದ್ಧ ರೈತರು ಕೆಂಭಾವಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.
ಕ್ರಿಮಿನಲ್ ಆರ್ಥಿಕ ಅಪರಾಧ ಪ್ರಕರಣ ದಾಖಲಿಸಿಕೊಂಡು ನ್ಯಾಯ ಒದಗಿಸುವಂತೆ ರೈತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಶ್ರೀನಿವಾಸ, ಪ್ರೇಮ್ ರೆಡ್ಡಿ, ಪ್ರಸಾದರೆಡ್ಡಿ, ಕೊಂಡಯ್ಯರೆಡ್ಡಿ, ಮುರುಳಿ, ವೆಂಕಿ ಹಾಗೂ ತ್ರಿಮೂರ್ತಿ ರೆಡ್ಡಿ ವಿರುದ್ಧ ಬೈಚಬಾಳ, ಕೂಡಲಗಿ, ಕರಡಕಲ್ ಸೇರಿ ಇತರೆ ಗ್ರಾಮಗಳ ರೈತರು ಆರೋಪ ಮಾಡಿದ್ದಾರೆ.
ಆಂಧ್ರ ಮೂಲದ ಏಳು ಮಂದಿ ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿದ್ದೇವೆ ಎಂದು ನಂಬಿಸಿ 40ಕ್ಕೂ ಹೆಚ್ಚು ಮಂದಿ ರೈತರಿಂದ ಸುಮಾರು ₹ 1.93 ಕೋಟಿ ಮೌಲ್ಯದ ಭತ್ತ ಖರೀದಿ ಮಾಡಿದ್ದಾರೆ. ಭತ್ತದ ಹಣವನ್ನು ನೀಡದೆ ಪರಾರಿಯಾಗಿದ್ದಾರೆ. ಈ ಬಗ್ಗೆ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಕ್ರಿಮಿನಲ್ ಆರ್ಥಿಕ ಅಪರಾಧ ಪ್ರಕರಣ ದಾಖಲಿಸಿಕೊಳ್ಳಬೇಕು. ರೈತರು ಸಂಕಷ್ಟದಲ್ಲಿ ಕೃಷಿ ಮಾಡುತ್ತಿದ್ದು, ದ್ರೋಹ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದಲ್ಲಾಳಿಯನ್ನು ಬಂಧಿಸಿ ರೈತರಿಗೆ ಬರಬೇಕಾದ ಹಣವನ್ನು ಕೊಡಿಸಬೇಕು ಎಂದು ಕೋರಿದ್ದಾರೆ.
ರೈತರಾದ ಶಾಂತಪ್ಪ ಬಾಲಪ್ಪ, ಬಂದೇನವಾಜ್, ಮೈಬೂಬ್ ಸಾಬ್, ಪರಶುರಾಮ, ಬಸವರಾಜ ದೊಡ್ಡಮನಿ, ಹೊಳ್ಳೆಪ್ಪ ಪೂಜಾರಿ, ಸಣ್ಣ ಲಿಂಗಣ್ಣ ಐಕೂರ, ಅಂಬರೇಶ ಸಗರ, ಪ್ರಕಾಶ ತತ್ತಾ, ದ್ಯಾವಪ್ಪ ಮಾಲಳ್ಳಿ, ತಿರುಪತಿ ಅಮ್ಮಾಪುರ, ಯಂಕೋಬ ಹುಜರತ್ತಿ ಸೇರಿ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.