ಸುರಪುರ: ‘ರಾಜ್ಯದಲ್ಲಿ ಅನೇಕ ಪಾಳೇಗಾರರು ಉತ್ತಮ ಆಡಳಿತ ನೀಡಿದ್ದಾರೆ. ಅವುಗಳ ಪ್ರದೇಶಾಭಿವೃದ್ಧಿಗಾಗಿ ಸರ್ಕಾರ ವಿಶೇಷ ಪಾಳೆಗಾರರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ರಚಿಸಬೇಕು’ ಎಂದು ಚಿಂತಕ ಬರಗೂರು ರಾಮಚಂದ್ರಪ್ಪ ಆಗ್ರಹಿಸಿದರು.
ಗರುಡಾದ್ರಿ ಕಲಾ ಮಂದಿರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಾಲ್ಮೀಕಿ ಅಧ್ಯಯನ ಪೀಠ, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಸಂಘ, ಓಕುಳಿ ಪ್ರಕಾಶನ, ಭೀಮರಾಯನಗುಡಿಯ ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ಸಹಕಾರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಕರ್ನಾಟಕ ಶೂರ ನಾಯಕ ಸಂಸ್ಥಾನ ಸುರಪುರ’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘ಎಲ್ಲೆಲ್ಲಿ ಪಾಳೆ, ಪಟ್ಟುಗಳಿದ್ದವು ಅವುಗಳ ಅಭಿವೃದ್ಧಿ ಮಾಡಬೇಕು. ಕೋಟೆಗಳನ್ನು ಯಾವುದೇ ಧಕ್ಕೆಯಾಗದಂತೆ ಮರು ನಿರ್ಮಾಣ ಮಾಡಬೇಕು. ಅಲ್ಲಿಯ ಇತಿಹಾಸ ತಿಳಿಸುವ ಮ್ಯೂಸಿಯಂ ನಿರ್ಮಿಸಬೇಕು. ಪ್ರವಾಸಿ ಕೇಂದ್ರವನ್ನಾಗಿ ರೂಪಿಸಬೇಕು. ಸ್ಥಳೀಯ ಇತಿಹಾಸವನ್ನು ಯುವಜನತೆಗೆ ತಿಳಿ ಹೇಳುವ ಕೆಲಸವಾಗಬೇಕು. ಸುರಪುರ ಸಂಸ್ಥಾನದ ಮ್ಯೂಸಿಯಂ ಮಾಡಬೇಕು’ ಎಂದು ಒತ್ತಾಯಿಸಿದರು.
‘ಸುರಪುರ ವೀರರ, ಶೂರರ, ಸಾಮರಸ್ಯ, ಸೌಹಾರ್ದದ ಸಂಸ್ಥಾನವಾಗಿತ್ತು. ಈ ಸಂಸ್ಥಾನದ ಅರಸರು ಅನೇಕ ಜನಹಿತ ಕಾರ್ಯಗಳೊಂದಿಗೆ ಎಲ್ಲಾ ಜಾತಿ, ಧರ್ಮಗಳಿಗೆ ಪ್ರಾತಿನಿಧ್ಯ ಕೊಟ್ಟಿದ್ದರು. ಕೆಳ ಸಮುದಾಯಗಳಿಗೆ ಗೌರವ ಮತ್ತು ಪ್ರಾತಿನಿಧ್ಯ ಕೊಟ್ಟು, ಎಲ್ಲ ಧರ್ಮೀಯರನ್ನು ಸಮಾನವಾಗಿ ನೋಡುತ್ತಿದ್ದ ಮನೋಭಾವ, ಮಹಿಳೆಯರಿಗೆ ಕೊಟ್ಟ ಪ್ರಾಶಸ್ತ್ಯ ಅನನ್ಯವಾಗಿದೆ’ ಎಂದು ತಿಳಿಸಿದರು.
‘ಬ್ರಿಟಿಷರ ವಿರುದ್ಧ ಅನೇಕ ಸಂಸ್ಥಾನಗಳು ಬಂಡಾಯ ಎದಿದ್ದವು. ವಸಾಹತುಶಾಹಿಗಳಿಗೆ ತಿರುಗಿ ಬೀಳುವುದು ಇಂತಹ ಸಣ್ಣ ಸಂಸ್ಥಾನಗಳಿಗೆ ಸುಲಭದ ಮಾತಾಗಿರಲಿಲ್ಲ. ಆ ದಿಟ್ಟತನವನ್ನು ತೋರಿಸಿದ್ದು ಇಲ್ಲಿಯ ವೀರ ಸೇನಾನಿ ನಾಲ್ವಡಿ ರಾಜಾ ವೆಂಕಟಪ್ಪನಾಯಕ. ಅದು ನಿಜವಾದ ಹೋರಾಟ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಕ್ಕೆ ಮುಖ್ಯದಾರಿ ತೋರಿಸಿದ್ದು ಈ ಸಂಸ್ಥಾನ’ ಎಂದು ಬಣ್ಣಿಸಿದರು.
ಶಾಸಕ ರಾಜಾ ವೇಣುಗೋಪಾಲ ನಾಯಕ, ಕಲಬುರಗಿಯ ವಿಭಾಗೀಯ ಪತ್ರಾಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ವೀರಶೆಟ್ಟಿ, ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಿ.ವಿ.ಪರಮಶಿವಮೂರ್ತಿ ಮಾತನಾಡಿದರು.
ಪ್ರಮುಖರಾದ ಬಸವರಾಜ ಜಮದ್ರಖಾನಿ, ಚನ್ನನರಸಿಂಹಪ್ಪ, ಜೆ.ಅಗಸ್ಟಿನ್, ಶಾಂತಲಾ ಭಾಸ್ಕರರಾವ್ ಮುಡಬೂಳ, ಕೃಷ್ಣಾ ಸುಬೇದಾರ್, ರಾಜಗೋಪಾಲ ವಿಭೂತಿ, ಆಕಾಂಕ್ಷ ಮೈತ್ರಿ ಬರಗೂರು ವೇದಿಕೆಯಲ್ಲಿದ್ದರು.
ವಾಲ್ಮೀಕಿ ಅಧ್ಯಯನ ಪೀಠದ ಸಂಚಾಲಕ ಅಮರೇಶ ಯತಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಹರಿರಾವ ಅದೋನಿ ಪ್ರಾರ್ಥಿಸಿದರು. ಉಪನ್ಯಾಸಕಿ ಜ್ಯೋತಿಲತಾ ತಡಿಬಿಡಿಮಠ ನಿರೂಪಿಸಿದರು. ಶಿಕ್ಷಕ ಶ್ರೀನಿವಾಸ ಕುಲಕರ್ಣಿ ವಂದಿಸಿದರು.
ಸ್ಥಳೀಯ ಚರಿತ್ರೆಯ ಅಭಿಮಾನವಿರಲಿ
‘ಸ್ಥಳೀಯರಿಗೆ ತಮ್ಮ ಸಂಸ್ಥಾನದ ಬಗ್ಗೆ ಅಭಿಮಾನ ತಿಳಿವಳಿಕೆ ಇರುವುದಿಲ್ಲ. ಇದು ಚರಿತ್ರೆ ಮರೆಯುವುದಕ್ಕೆ ಕಾರಣವಾಗುತ್ತದೆ. ಆದರೆ ಸುರಪುರ ಮತ್ತು ಚಿತ್ರದುರ್ಗ ಸಂಸ್ಥಾನದ ಬಗ್ಗೆ ಸ್ಥಳೀಯರಿಗೆ ಇರುವ ಪ್ರೀತಿ ಅಭಿಮಾನ ಕಾಳಜಿ ಶ್ಲಾಘನೀಯ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಿ.ವಿ.ಪರಮಶಿವಮೂರ್ತಿ ಹರ್ಷ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.