
ಸೈದಾಪುರ ಸಮೀಪದ ಆನೂರು.ಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದ್ವಿತೀಯ ಪೋಷಕ ಶಿಕ್ಷಕರ ಮಹಾಸಭೆ ನಡೆಯಿತು.
ಆನೂರು.ಕೆ (ಸೈದಾಪುರ): ‘ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೋಷಕರ ಬೆಂಬಲ ಹಾಗೂ ಸಹಕಾರ ಸದಾ ಅಗತ್ಯ’ ಎಂದು ಸೈದಾಪುರ ಕ್ಲಸ್ಟರ್ ಸಿಆರ್‌ಪಿ ಲಿಂಗಾರೆಡ್ಡಿ ಗಬ್ಬೂರು ಅಭಿಪ್ರಾಯಪಟ್ಟರು.
ಸಮೀಪದ ಆನೂರು.ಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆದೇಶದಂತೆ ದ್ವಿತೀಯ ಪೋಷಕ ಶಿಕ್ಷಕರ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು .
‘ಮಕ್ಕಳ ಕಲಿಕಾ ಮಟ್ಟ ಸುಧಾರಿಸುವುದು, ಹಾಜರಾತಿ ಹೆಚ್ಚಿಸುವುದು, ಮತ್ತು ಪೋಷಕ-ಶಿಕ್ಷಕರ ನಡುವೆ ಉತ್ತಮ ಸಂವಹನ ಹಾಗೂ ಸಹಯೋಗವನ್ನು ಬೆಳೆಸುವುದು ಪೋಷಕರ ಮಾಹಸಭೆಯ ಮೂಲ ಉದ್ದೇಶವಾಗಿದೆ’ ಎಂದರು.
‘ನಿಮ್ಮ ಮಕ್ಕಳ ಯಶಸ್ಸಿಗೆ ಮತ್ತು ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಪೋಷಕರು ಮತ್ತು ಶಿಕ್ಷಕರು ಒಟ್ಟಾಗಿ ಕಾರ್ಯತಂತ್ರಗಳನ್ನು ರೂಪಿಸಿ ಮಕ್ಕಳಿಗೆ ಅರ್ಥೈಸುವುದು. ಆದ್ದರಿಂದ ಪಾಲಕರು ಮಕ್ಕಳಿಗೆ ಮನೆಯಲ್ಲಿ ಸೂಕ್ತ ಕಲಿಕಾ ವಾತಾವರಣ ನಿರ್ಮಿಸಬೇಕು. ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಕುರಿತು ಚರ್ಚಿಸುವುದು ಕೂಡ ಪೋಷಕರ ಮತ್ತು ಶಿಕ್ಷಕರ ಜವಾಬ್ದಾರಿಯಾಗಿದೆ’ ಎಂದು ತಿಳಿಸಿದರು.
‘ನಿಮ್ಮ ಮಗು ಶೈಕ್ಷಣಿಕವಾಗಿ ಏನು ಸಾಧನೆ ಮಾಡುತ್ತಿದೆ ಎಂಬುದನ್ನು ತಿಳಿಯಲು ಆಗಾಗ ಶಾಲೆಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಚರ್ಚಿಸಬೇಕು. ಶಾಲೆಯ ಬಾಗಿಲು ನಿಮಗಾಗಿ ಸದಾ ತೆರೆದಿರುತ್ತದೆ. ನೀವು ಶಾಲೆಗೆ ಭೇಟಿ ನೀಡಿ ಮುಖ್ಯೋಪಾಧ್ಯಾಯರೊಂದಿಗೆ ಮತ್ತು ಶಿಕ್ಷಕರೊಂದಿಗೆ ಶೈಕ್ಷಣಿಕ ಅಭಿವೃದ್ಧಿಗೆ ಶಾಲೆಯ ಪ್ರಗತಿಗೆ ಚರ್ಚಿಸಿ ಸಹಕಾರ ನೀಡಬೇಕು’ ಎಂದರು.
ಇದಕ್ಕೂ ಮೊದಲು ಗ್ರಾಮದ ಶಿಕ್ಷಣ ಪ್ರೇಮಿಯೊಬ್ಬರು ನೀಡಿದ್ದ ದೇಣಿಗೆ ಹಣದಲ್ಲಿ ಶಾಲೆಯ 150 ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಲೇಖನಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಗುರುಗಳು, ಎಸ್‌ಡಿಎಂಸಿ ಸದಸ್ಯರು, ಶಾಲೆಯ ಶಿಕ್ಷಕರು, ಪಾಲಕ ಪೋಷಕರು ಹಾಗೂ ಶಿಕ್ಷಣ ಪ್ರೇಮಿಗಳು ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.