ADVERTISEMENT

ಶಹಾಪುರ: ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ದಾಳಿ

ಕಾಯ್ದೆ ಉಲ್ಲಂಘನೆ; ಕ್ವಾಲಿಟಿ ಡೈಗ್ನೊಸ್ಟಿಕ್ ಕೇಂದ್ರ ಸೀಜ್

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 6:15 IST
Last Updated 10 ಜನವರಿ 2026, 6:15 IST
ಶಹಾಪುರ ನಗರದ ಕ್ವಾಲಿಟಿ ಡೈಗ್ನೊಸ್ಟಿಕ್ ಕೇಂದ್ರದ ಮೇಲೆ ಶುಕ್ರವಾರ ಆರೋಗ್ಯ ಇಲಾಖೆ ಅಧಿಕಾರಿಗಳು ಸೀಜ್ ಮಾಡಿದರು
ಶಹಾಪುರ ನಗರದ ಕ್ವಾಲಿಟಿ ಡೈಗ್ನೊಸ್ಟಿಕ್ ಕೇಂದ್ರದ ಮೇಲೆ ಶುಕ್ರವಾರ ಆರೋಗ್ಯ ಇಲಾಖೆ ಅಧಿಕಾರಿಗಳು ಸೀಜ್ ಮಾಡಿದರು   

ಶಹಾಪುರ: ಕಾಯ್ದೆ ಉಲ್ಲಂಘಿಸಿ ಕೆಲಸ ನಿರ್ವಹಿಸುತ್ತಿದ್ದ ನಗರದ ಒಂದು ಸ್ಕ್ಯಾನಿಂಗ್ ಕೇಂದ್ರ ಮೇಲೆ ಶುಕ್ರವಾರ ದಾಳಿ ನಡೆಸಿದ ಬೆಂಗಳೂರಿನ ಪಿಸಿ ಅಂಡ್ ಪಿಎನ್‌ಡಿಟಿ ಉಪ ನಿರ್ದೇಶಕರ ನೇತೃತ್ವದ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಕೇಂದ್ರವನ್ನು ಸೀಜ್ ಮಾಡಿದೆ.

ಇಲ್ಲಿನ ಕ್ವಾಲಿಟಿ ಡೈಗ್ನೊಸ್ಟಿಕ್ ಕೇಂದ್ರ(ಸ್ಕ್ಯಾನಿಂಗ್)ಪಿಸಿ ಅಂಡ್ ಪಿಎನ್‌ಡಿಟಿ ಕಾಯ್ದೆಯನ್ನು ಸ್ಟಷ್ಟವಾಗಿ ಉಲ್ಲಂಘಿಸಿರುವ ಕಾರಣ ಸೀಜ್ ಮಾಡಿ, ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರಿನ ಆರೋಗ್ಯ ಇಲಾಖೆಯ ಉಪ ನಿರ್ದೇಶಕ ಡಾ.ವಿವೇಕ ದೊರೈ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕ್ವಾಲಿಟಿ ಡೈಗ್ನೊಸ್ಟಿಕ್ ಕೇಂದ್ರ ಭೇಟಿ ನೀಡಿದಾಗ, ಕಾಯ್ದೆಗೆ ಅನುಗುಣವಾಗಿ ಅಲ್ಲಿ ಏನು ಕಂಡುಬರಲಿಲ್ಲ. ಸ್ಕ್ಯಾನಿಂಗ್ ಯಂತ್ರದಲ್ಲಿ ಯಾರ ಹೆಸರೂ ಇಲ್ಲ. ಹಲವಾರು ದಾಖಲೆಯಲ್ಲಿ ನೂನ್ಯತೆಗಳು ಕಂಡುಬಂದಿವೆ. ಭ್ರೂಣ ಹತ್ಯೆ ಆಗಿದೆ ಎಂದು ಹೇಳಲು ಆಗುವುದಿಲ್ಲ. ದಾಳಿ ಮಾಡಿದಾಗ ನಿಖರವಾದ ದಾಖಲೆ ಸಿಗಲಿಲ್ಲ. ಆದರೆ ದಾಖಲೆ ಇಲ್ಲ ಅಂದರೆ ಭ್ರೂಣ ಹತ್ಯೆ ಆಗಿದೆ ಎಂಬ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ’ ಎಂದರು.

ADVERTISEMENT

ನಂತರ ತಂಡ ಜೆ.ಬಿ. ಸ್ಕ್ಯಾನಿಂಗ್ ಕೇಂದ್ರಕ್ಕೆ ಭೇಟಿ ನೀಡಿದಾಗ ಕೆಲ ದಾಖಲೆಗಳನ್ನು ಇಟ್ಟಿರಲಿಲ್ಲ. ಮತ್ತೊಮ್ಮೆ ಪರಿಶೀಲಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗೆ ಸೂಚಿಸಲಾಗಿದೆ ಎಂದರು.

ನಗರದ ಹಳೆ ಬಸ್ ನಿಲ್ದಾಣದ ಎದುರುಗಡೆ ಕ್ವಾಲಿಟಿ ಸ್ಕ್ಯಾನಿಂಗ್ ಕೇಂದ್ರವಿದೆ. ಕೇಂದ್ರದಲ್ಲಿ ಮೂರು ಯಂತ್ರಗಳಿವೆ. ಎರಡು ನಿರ್ವಹಣೆ ಮಾಡುತ್ತಿಲ್ಲ. ಕೇಂದ್ರಕ್ಕೆ ತೆರಳಲು ಸರಿಯಾದ ದಾರಿಯಿಲ್ಲ. ಕಳೆದ ಹಲವು ವರ್ಷದಿಂದ ಕೇಂದ್ರ ಕೆಲಸ ನಿರ್ವಹಿಸುತ್ತಿದೆ. ಕೇಂದ್ರವನ್ನು ಸೀಜ್ ಮಾಡಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ತಂಡದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಕ್ರಮ ಅಧಿಕಾರಿ ಡಾ. ಬನ್ನಮ್ಮ ಸಜ್ಜನ್, ಡಾ.ಶಾಂತಲಾ ಡಾ, ಮಂಜುನಾಥ. ಎನ್‌ಜಿಒ ಸದಸ್ಯ ಡಾ.ವಸಂತ, ವಕೀಲೆ ಮಂಜುಳಾ ಡಿ.ಎಂ., ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಬಿರೆದಾರ. ಡಾ. ಜ್ಯೋತಿ, ಟಿಎಚ್‌ಒ ಡಾ.ರಮೇಶ ಗುತ್ತೆದಾರ, ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಸಂಗಣ್ಣ ನುಚ್ಚಿನ ಭಾಗವಹಿಸಿದ್ದರು.

‘ನನ್ನ ಮೊಬೈಲ್ ತೆಗೆದುಕೊಂಡಿದ್ದರು

’ ‘ಬೆಂಗಳೂರಿನಿಂದ ಹಿರಿಯ ಆರೋಗ್ಯ ಇಲಾಖೆ ತಂಡ ನೇರವಾಗಿ ಶಹಾಪುರಕ್ಕೆ ಆಗಮಿಸಿದೆ. ನಮಗೆ ಯಾವುದೇ ಮಾಹಿತಿ ನೀಡದೆ ಗೋಪ್ಯವಾಗಿ ಇಟ್ಟಿದ್ದಾರೆ. ಎರಡು ಕಡೆ ದಾಳಿ ಮಾಡಿದ್ದಾರೆ. ನನ್ನ ಮೊಬೈಲ್ ಸಹ ತೆಗೆದುಕೊಂಡಿದ್ದರು. ನಂತರ ಹೋಗುವಾಗ ನೀಡಿ ಹೋಗಿದ್ದಾರೆ’ ಎಂದು ಟಿಎಚ್‌ಒ ಡಾ.ರಮೇಶ ಗುತ್ತೆದಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.