ADVERTISEMENT

ಯಾದಗಿರಿ | ‘ಸರ್ವತೋಮುಖ ಏಳ್ಗೆಗೆ ಪ್ರತಿಭಾ ಕಾರಂಜಿ ವೇದಿಕೆ’

ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ: ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 7:09 IST
Last Updated 6 ಡಿಸೆಂಬರ್ 2025, 7:09 IST
ಯಾದಗಿರಿಯಲ್ಲಿ ಶುಕ್ರವಾರ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಉದ್ಘಾಟಿಸಿದರು 
ಯಾದಗಿರಿಯಲ್ಲಿ ಶುಕ್ರವಾರ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಉದ್ಘಾಟಿಸಿದರು    

ಯಾದಗಿರಿ: ‘ಮಕ್ಕಳಲ್ಲಿನ ಸೂಕ್ತ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಪ್ರತಿಭಾ ಕಾರಂಜಿ, ಕಲೋತ್ಸವ ಮುಖ್ಯ ವೇದಿಕೆಯಾಗಿದೆ’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.

ಇಲ್ಲಿನ ಆರ್‌.ವಿ. ಪ್ರೌಢಶಾಲೆಯಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಉಪ ನಿರ್ದೇಶಕರ ಕಾರ್ಯಾಲಯ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮತ್ತು ಶಿಕ್ಷಣ ಇಲಾಖೆ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕಥೆ ಹೇಳುವ, ಚಿತ್ರ ಬಿಡಿಸುವ, ಮಹಾಪುರುಷರ ವೇಷ ಧರಿಸುವ, ಜನಪದ ನೃತ್ಯ, ರಸಪ್ರಶ್ನೆ, ಮಣ್ಣಿನಿಂದ ಆಕೃತಿ ರಚನೆ, ಭರತನಾಟ್ಯ, ಕವ್ವಾಲಿ ಗಾಯನದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳು ಹೊಂದಿರುವ ಪ್ರತಿಭೆ ಕಾರಂಜಿ ಕಾರ್ಯಕ್ರಮಗಳ ಮೂಲಕ ಅನಾವರಣವಾಗುತ್ತದೆ. ಇಂತಹ ವೇದಿಕೆಯ ಮೂಲಕ ಪ್ರದರ್ಶನಕ್ಕೂ ಒಂದು ಅವಕಾಶ ಕಲ್ಪಿಸಿದಂತೆ ಆಗುತ್ತದೆ’ ಎಂದರು.

ADVERTISEMENT

‘ವಿದ್ಯಾರ್ಥಿಗಳು ಕೇವಲ ಪುಸ್ತಕದ ಜ್ಞಾನ ಕಲಿತರೆ ಸಾಲದು, ಅದರ ಜೊತೆಗೆ ನೀತಿ ಶಿಕ್ಷಣ, ಚಿತ್ರಕಲೆ, ಅಭಿನಯ, ನೃತ್ಯ, ಧಾರ್ಮಿಕ ವಿಷಯಗಳನ್ನು ಅರಿವು, ಕುಶಲಕಲೆಗಳನ್ನು ರೂಢಿ ಮಾಡಿಕೊಳ್ಳಬೇಕು. ಒಳ್ಳೆಯ ಸಮಾಜ ನಿರ್ಮಿಸಿಲು ಪಠ್ಯದೊಂದಿಗೆ ಪಠ್ಯೇತರ ಜ್ಞಾನವೂ ಅವಶ್ಯವಾಗಿದೆ. ಅಂಕ ಗಳಿಕೆಯೊಂದಿಗೆ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

‘ಪ್ರಶಸ್ತಿ ಬರಲಿ, ಬರದೆ ಇರಲಿ. ಸ್ಪರ್ಧೆಗಳಲ್ಲಿ ಭಾಗವಹಿಸಿ, ಆರೋಗ್ಯಕರ ಮನಸ್ಸನ್ನು ಬೆಳೆಸಿಕೊಳ್ಳಬೇಕು. ಅಂಕ ಗಳಿಕೆಯೊಂದಿದ್ದರೆ ಜೀವನ ಪರಿಪೂರ್ಣ ಅಲ್ಲ. ಉತ್ತಮ ವ್ಯಕ್ತಿತ್ವವೂ ಬೇಕು. ಅಂಕದ ಜತೆಗೆ ವಿನಯವು ಬೇಕು. ಅದಕ್ಕಾಗಿ ಕಣ್ಣು, ಕಿವಿ ತೆರೆದಿಡಬೇಕು. ಪ್ರತಿಯೊಬ್ಬರಿಂದಲೂ ಕಲಿಯುತ್ತಿರಬೇಕು’ ಎಂದು ಹೇಳಿದರು.

‘ಬದುಕಿನಲ್ಲಿ ಮೇಲ್ಮುಖವಾಗಿ ನಡೆಯಲು ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿಯ ಸಮನ್ವಯತೆ ಮುಖ್ಯವಾಗುತ್ತದೆ. ಸೋಲು-ಗೆಲುವು ಶಾಶ್ವತವಲ್ಲ ಎಂಬ ಸತ್ಯದ ಅರಿವಿನೊಡನೆ ಮುನ್ನಡೆಯಬೇಕು. ಅವಕಾಶಗಳು ವಿರಳವಾಗಿದ್ದ ಕಾಲದಲ್ಲಿ ಸಾಧನೆ ತೋರಿದ ಹಲವರು ಇಂದಿನ ಮಕ್ಕಳಿಗೆ ಪ್ರೇರಣೆದಾಯಕ ಆಗಬೇಕು. ಅವಕಾಶ ಹೇರಳವಾಗಿರುವ ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿ ಜೀವನದಲ್ಲಿ ಶ್ರಮ ಪಟ್ಟು ಸಾಧನೆ ಮಾಡಬೇಕು’ ಎಂದು ಸಲಹೆ ನೀಡಿದರು.

ಡಿಡಿಪಿಐ ಚನ್ನಬಸಪ್ಪ ಮುಧೋಳ ಮಾತನಾಡಿ, ‘ಶಿಕ್ಷಕರು ನಾವು ಮಾಡುತ್ತಿರುವ ಪಾಠವೇ ಸರಿಯಾಗಿದೆ ಎಂದುಕೊಂಡು ಒಂದೇ ಕ್ರಮದಲ್ಲಿ ಬೋಧನೆ ಮಾಡಬಾರದು. ಮಕ್ಕಳು ಬೇರೆ–ಬೇರೆ ಪರಿಸರದಿಂದ ಬಂದಿರುತ್ತಾರೆ. ಅವರ ವಿಭಿನ್ನತ್ತಗೆ ತಕ್ಕಂತೆ ನಿಮ್ಮದೆಯಾದ ಬೋಧನ ಉಪಕ್ರಮಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

‘ಯುಡಾ’ ಅಧ್ಯಕ್ಷ ಬಾಬುರಾವ ಕಾಡ್ಲೂರ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ನಿರ್ದೇಶಕ ವೃಷಭೇಂದ್ರಯ್ಯ ಜಿ.ಎಂ., ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಎಚ್‌.ಬಿ. ರಾಠೋಡ, ಶಿಕ್ಷಕರ ವಿವಿಧ ಸಂಘಟನೆಗಳ ಅಧ್ಯಕ್ಷ ಅಶೋಕ ಕುಮಾರ ಕೆಂಭಾವಿ, ರಾಘವೇಂದ್ರ ಅಳ್ಳೊಳ್ಳಿ, ಆದೆಪ್ಪ ಬಾಗ್ಲಿ, ಲಕ್ಷ್ಮಿಕಾಂತ ರೆಡ್ಡಿ, ಹಣಮಂತ ಹೊಸಮನಿ, ಮಲ್ಲಯ್ಯ ಸಂಜೀವಿನಿ, ಭೀಮರಾಯ ಬೊಮ್ಮನ್, ಚನ್ನಬಸಪ್ಪ ಗೋಡಿಕಾರ, ಆರ್‌ವಿ ಸಂಸ್ಥೆಯ ಮಲ್ಲಿಕಾರ್ಜುನ ಅಕ್ಕಿ ಸೇರಿ ಹಲವರು ಉಪಸ್ಥಿತರಿದ್ದರು.

ಯಾದಗಿರಿಯಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು 
ಯಾದಗಿರಿಯಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದ ಮಕ್ಕಳು

ನಿರ್ಣಾಯಕರು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ತಕ್ಕುದಾದ ಬೆಲೆ ಕೊಡಬೇಕು. ನನ್ನ ವಲಯದಿಂದ ಬಂದಿರುವ ಮಗು ಎನ್ನದೆ ನಿಷ್ಪಕ್ಷಪಾತವಾಗಿ ತೀರ್ಪುಕೊಡಬೇಕು

-ಚನ್ನಬಸಪ್ಪ ಮುಧೋಳ ಡಿಡಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.