ಯಾದಗಿರಿ: ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿದ್ದು, ತರಕಾರಿ ದರವೂ ಹೆಚ್ಚಳ ಕಂಡಿದೆ. ಹೊರ ಜಿಲ್ಲೆಯಿಂದ ಆಮದು ಮಾಡಿಕೊಳ್ಳುವ ತರಕಾರಿ ದರ ಏರಿಕೆಯಾಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಟೊಮೆಟೊ ದರ ಹೆಚ್ಚಳ ಕಂಡಿದೆ. ಎರಡು ವಾರಗಳಿಂದ ಬೀನ್ಸ್ ಬೆಲೆ ಗಗನಕ್ಕೇರಿದೆ.
ಬೇಸಿಗೆಯಲ್ಲಿ ಕೆಜಿಗೆ ₹20ರಿಂದ 30ದರವಿದ್ದ ಟೊಮೆಟೊ ಈಗ ₹60ರಿಂದ ₹70 ಇದೆ. ಗ್ರಾಹಕರು ಚೌಕಾಶಿ ಮಾಡಿ ಖರೀದಿ ಮಾಡುತ್ತಿದ್ದಾರೆ.
ಕಳೆದ ಎರಡು ವಾರಗಳಿಂದ ಬೀನ್ಸ್ ಬೆಲೆಯಲ್ಲಿ ಏರಿಕೆ ಕಂಡಿದೆ. ಕೆಲವು ಚಿಲ್ಲರೆ ಅಂಗಡಿಗಳಲ್ಲಿ ಬೀನ್ಸ್ ತಂದು ಮಾರಾಟ ಮಾಡುವುದನ್ನು ಬಿಟ್ಟಿದ್ದಾರೆ. ಹೆಚ್ಚಿನ ದರವಿದ್ದರಿಂದ ಅಷ್ಟು ಹಣ ಕೊಟ್ಟು ಗ್ರಾಹಕರು ಖರೀದಿಗೆ ಮುಂದಾಗುತ್ತಿಲ್ಲ ಎಂದು ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಾರೆ.
ಕಳೆದ ವರ್ಷ ಪೂರ್ತಿ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದ್ದ ಹಸಿ ಶುಂಠಿ, ಬೆಳ್ಳುಳ್ಳಿ ಇಳಿಕೆ ಕಂಡಿದ್ದು, ಎರಡು ಮೂರು ಗುಣಮಟ್ಟದಲ್ಲಿ ಮಾರಾಟ ಮಾಡಲಾಗುತ್ತಿದೆ. ಹಸಿ ಶುಂಠಿ ಕೆಜಿಗೆ ₹150ರಿಂದ160, ಬೆಳ್ಳುಳ್ಳಿ ₹120ರಿಂದ140ದರವಿದೆ.
ಗೀಚು ಹೀರೆಕಾಯಿ ₹100-110, ತುಪ್ಪದ ಹೀರೆಕಾಯಿ ₹70–80 ಕೆಜಿಗೆ ಮಾರಾಟ ಮಾಡಲಾಗುತ್ತಿದೆ. ಎರಡು ತಿಂಗಳ ಹಿಂದೆ ₹60ರಿಂದ 70 ಕೆಜಿಗೆ ಮಾರಾಟ ಮಾಡಲಾಗುತ್ತಿದೆ.
ಸೊಪ್ಪುಗಳ ದರ: ಸೊಪ್ಪುಗಳಲ್ಲಿ ಮೆಂತ್ಯೆ, ಸಬ್ಬಸಗಿ ಸೊಪ್ಪು, ಪುದೀನಾ, ಕೋತಂಬರಿ ₹20ಗೆ ಒಂದು ದೊಡ್ಡ ಕಟ್ಟು ಮಾರಾಟ ಮಾಡಲಾಗುತ್ತಿದೆ. ಪಾಲಕ್, ಪುಂಡಿಪಲ್ಯೆ, ರಾಜಗಿರಿ ಸೊಪ್ಪು ₹10ಗೆ ಒಂದು 20ಗೆ ಮೂರು ಕಟ್ಟು ಬಿಕರಿಯಾಗುತ್ತಿದೆ. ಈರುಳ್ಳಿ ಸೊಪ್ಪು ಕೆಜಿಗೆ ₹100ಗೆ ದರವಿದೆ.
‘ಮೆಂತ್ಯೆ, ಸಬ್ಬಸಗಿ ಸೊಪ್ಪು, ಪುದೀನಾ, ಕೋತಂಬರಿ, ಈರುಳ್ಳಿ ಸೊಪ್ಪು ಹೊರ ಜಿಲ್ಲೆಗಳಿಂದ ಆಮದು ಆಗುತ್ತಿದ್ದರಿಂದ ದರ ಹೆಚ್ಚಿದೆ. ನಿಂಬೆಹಣ್ಣು ದೊಡ್ಡ ಗಾತ್ರದ್ದು, ₹10ಗೆ ಎರಡು, ಸಣ್ಣ ಗಾತ್ರದು ₹10ಗೆ 3 ಮಾರಾಟ ಮಾಡಲಾಗುತ್ತಿದೆ’ ಎಂದು ವ್ಯಾಪಾರಿ ಬಸು ಚಿಂತನಹಳ್ಳಿ ಹೇಳಿದರು.
ಮಳೆಗಾಲ ಆರಂಭವಾಗಿದ್ದು, ಕೆಲ ತರಕಾರಿ ದರ ಹೆಚ್ಚಳವಾಗಿದೆ. ಮೂರ್ನಾಲ್ಕು ತರಕಾರಿ ಮಾತ್ರ ಶತಕ ದಾಟಿದೆ.ಬಸು ಚಿಂತನಹಳ್ಳಿ, ತರಕಾರಿ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.