ADVERTISEMENT

ಯಾದಗಿರಿ | ಅಗತ್ಯ ವಸ್ತುಗಳ ಬೆಲೆ ಏರಿಕೆ, ಕ್ರಮ ಕೈಗೊಳ್ಳದ ಅಧಿಕಾರಿಗಳು

ಲಾಕ್‌ಡೌನ್‌ ಪರಿಣಾಮ ದುಪ್ಪಟ್ಟು ದರದಲ್ಲಿ ದಿನಸಿ ಮಾರಾಟ

ಬಿ.ಜಿ.ಪ್ರವೀಣಕುಮಾರ
Published 3 ಮೇ 2021, 3:14 IST
Last Updated 3 ಮೇ 2021, 3:14 IST
ಯಾದಗಿರಿಯ ಚಿತ್ತಾ‍ಪುರ ರಸ್ತೆಯ ದಿನಸಿ ಅಂಗಡಿ ಬಳಿ ಗ್ರಾಹಕರು
ಯಾದಗಿರಿಯ ಚಿತ್ತಾ‍ಪುರ ರಸ್ತೆಯ ದಿನಸಿ ಅಂಗಡಿ ಬಳಿ ಗ್ರಾಹಕರು   

ಯಾದಗಿರಿ: ಕೊರೊನಾ ನಿಯಂತ್ರಣಕ್ಕೆ ಸರ್ಕಾರ 14 ದಿನಗಳ ಲಾಕ್‌ಡೌನ್‌ ಘೋಷಿಸಿರುವುದು, ವ್ಯಾಪಾರಿಗಳಿಗೆ ಶುಕ್ರದೆಸೆಯಾಗಿದೆ. ಅಗತ್ಯ ವಸ್ತುಗಳ ದಿಢೀರ್‌ ಬೆಲೆ ಏರಿಕೆ ಮಾಡಿದ್ದು, ಗ್ರಾಹಕರು ಹೆಚ್ಚುವರಿ ಹಣ ಪಾವತಿಸಿ ವಸ್ತುಗಳನ್ನು ಖರೀದಿಸಬೇಕಿದೆ.

ತರಕಾರಿ ದರದಲ್ಲಿ ಗಣನೀಯವಾಗಿ ಏರಿಕೆ ಕಂಡಿದ್ದು, ಪ್ರತಿ ತರಕಾರಿ ದರ ₹10ರಿಂದ ₹20ಕ್ಕೆ ಏರಿಕೆಯಾಗಿದೆ. ವ್ಯಾಪಾರಿಗಳನ್ನು ಕೇಳಿದರೆ ಬೇರೆ ಕಡೆಯಿಂದ ತರಕಾರಿ ಪೂರೈಕೆಯಾಗುತ್ತಿಲ್ಲ ಎನ್ನುವ ಉತ್ತರ ಕೇಳಿ ಬರುತ್ತಿದೆ.

ಬೆಳಿಗ್ಗೆ 6 ರಿಂದ 10ರವರೆಗೆ ಮಾತ್ರ ಶನಿವಾರದ ತನಕ ವ್ಯಾಪಾರ–ವಹಿವಾಟಿಗೆ ಅವಕಾಶವಿತ್ತು. ಆಗ ಅನಿವಾರ್ಯವಾಗಿ ಹೆಚ್ಚಿನ ಬೆಲೆಗೆ ವಸ್ತುಗಳನ್ನು ಖರೀದಿಸಬೇಕಾಗಿತ್ತು. ಈಗ ಮಧ್ಯಾಹ್ನ 12ರವರೆಗೆ ಅವಕಾಶ ಕಲ್ಪಿಸಲಾಗಿದೆ.

ADVERTISEMENT

ತರಕಾರಿ, ದಿನಸಿಗೆ ಬೇಡಿಕೆ: ಲಾಕ್‌ಡೌನ್‌ ವೇಳೆಯಲ್ಲಿ ಅಗತ್ಯ ವಸ್ತು ಬಿಟ್ಟರೆ ಬೇರೆ ಅಂಗಡಿ ತೆರೆಯಲು ಅನುಮತಿ ಇಲ್ಲ. ಹೀಗಾಗಿ ತರಕಾರಿ, ದಿನಸಿ ಅಂಗಡಿಗೆ ಭಾರಿ ಬೇಡಿಕೆ ಬಂದಿದೆ. ಅವರು ಹೇಳಿದಷ್ಟೆ ಹಣಕ್ಕೆ ಖರೀದಿ ಮಾಡುವ ಪರಿಸ್ಥಿತಿಯೂ ಏರ್ಪಟ್ಟಿದೆ.

ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದಂತೆ, ದಿನಸಿ, ಹಣ್ಣು, ತರಕಾರಿ ಬೆಲೆ ಏರಿಕೆಯಾಗಿದೆ. ಅದರಲ್ಲೂ ತಂಬಾಕು ಉತ್ಪನ್ನಗಳ ಬೆಲೆ ಗಗನಕ್ಕೇರಿದೆ. ಮಾರಾಟದ ಸಮಯ ಬೆಳಿಗ್ಗೆ 10 ಗಂಟೆಯವರೆಗೆ ಮಾತ್ರ ನಿಗದಿಪಡಿಸಿದ್ದರಿಂದ ಗ್ರಾಹಕರು ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಇದರ ಲಾಭ ಪಡೆಯುತ್ತಿರುವ ವರ್ತಕರು ಅಗತ್ಯ ವಸ್ತುಗಳ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.

ದಿನಸಿ ವಸ್ತುಗಳ ಬೆಲೆಗಳನ್ನು ಏರಿಸಲಾಗಿದೆ. ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರು ವಿಚಾರಿಸಿದರೆ ಬೇಕಿದ್ದರೆ ತೊಗೊಳ್ಳಿ ಎಂಬ ಮಾತುಗಳು ವ್ಯಾಪಾರಿಗಳಿಂದ ಕೇಳಿಬರುತ್ತಿವೆ.

ಹಣ್ಣು, ತರಕಾರಿ ಮನೆ ಮನೆಗೆ ಮಾರಾಟಕ್ಕೆ ಬರುತ್ತಿವೆ. ನಿಗದಿತ ಸ್ಥಳದಲ್ಲಿಯೂ ಮಾರಾಟವಾಗುತ್ತಿವೆ. ಅವುಗಳ ಬೆಲೆಯೂ ಜಾಸ್ತಿಯಾಗಿಯೇ ಇದೆ. ಆದರೆ, ಇದರ ಲಾಭ ರೈತನಿಗೆ ತಟ್ಟುತ್ತಿಲ್ಲ. ಮಂಡಿಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಸವಾಲಾಗುತ್ತಿವೆ.

ಶಹಾಪುರ ತಾಲ್ಲೂಕಿನ ನೀರಾವರಿ ಪ್ರದೇಶದಲ್ಲಿ ಹಾಗೂ ಕೃಷಿ ಹೊಂಡ ನಿರ್ಮಿಸಿದ ರೈತರು ಸ್ಥಳೀಯವಾಗಿ ಬೆಳೆಯುವ ತರಕಾರಿ ಹಾಗೂ ಸೊಪ್ಪಿನ ಬೆಲೆ ಏರಿಕೆಯಾಗಿಲ್ಲ. ಆದರೆ, ನೆರೆ ಜಿಲ್ಲೆ ಹಾಗೂ ಇನ್ನಿತರ ಕಡೆಯಿಂದ ತರುವ ಹೂಕೋಸು, ಆಲೂಗಡ್ಡೆ, ದ್ವಿದಳ ಆಹಾರದ ವಸ್ತುಗಳಲ್ಲಿ ತುಸು ಏರಿಕೆಯಾಗಿದೆ. ಅದರಲ್ಲಿ ಶೇಂಗಾ ಎಣ್ಣೆಯ ಬೆಲೆಯು ಚಿನ್ನದ ಬೆಲೆ ಪಡೆದುಕೊಂಡಿದೆ. ಆದರೆ, ಶೇಂಗಾದ ಧಾರಣಿ ಮಾತ್ರ ಕುಸಿತುವಾಗಿದೆ. ಇದು ಕೃತವಾಗಿ ಸೃಷ್ಟಿಸಿದ ಅಭಾವ ಎನ್ನುತ್ತಾರೆ ಸ್ಥಳೀಯ ಜನತೆ.

ಲಾಕ್‌ಡೌನ್‌ನಿಂದ ಬೇರೆಡೆ ಸಾಗಿಸಲು ಸಾಧ್ಯವಾಗದೆ ಮಾವು, ಪಪ್ಪಾಯಿ, ಸೀಬೆಹಣ್ಣು, ಕಲ್ಲಂಗಡಿ ಮುಂತಾದ ವಸ್ತುಗಳ ಬೆಲೆ ಕುಸಿತವಾಗಿದೆ. ರೈತರು ದಿಕ್ಕೆಟ್ಟು ಹೋಗಿದ್ದಾರೆ. ರಂಜಾನ್ ಹಬ್ಬದಲ್ಲಿ ಹೆಚ್ಚು ಬೆಲೆ ಬರುತ್ತದೆ ಎಂದು ಕಲ್ಲಂಗಡಿ ಬೆಳೆದ ಈಗ ಅದೇ ರಾಗ ಅದೇ ಹಾಡು ಎನ್ನುವಂತೆ ಆಗಿದೆ ಎಂದು ರೈತ ಸೋಮಣ್ಣ ತಿಳಿಸಿದರು.

ಹುಣಸಗಿ ತಾಲ್ಲೂಕಿನಲ್ಲಿ ಲಾಕ್‌ಡೌನ್ ಕಾರಣ ಆರಂಭದ ದಿನದಲ್ಲಿ ಗುಟ್ಕಾ ಮತ್ತು ದಿನಸಿ ಬೆಲೆಯಲ್ಲಿ ಅಲ್ಪ ಏರಿಕೆ ಕಂಡಿತ್ತು. ಈಗ ಯಥಾಸ್ಥಿತಿ ಇದೆ. ಪ್ರತಿಯೊಂದು ದಿನಸಿ ಬೆಲೆ ಲಾಕ್‌ಡೌನ್ ಮುನ್ನ ಇರುವ ಬೆಲೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. ಹಣ್ಣು-ತರಕಾರಿ ಬೆಲೆ ಯಥಾಸ್ಥಿತಿಯಿದ್ದು, ಯಾವುದೇ ಬೆಲೆ ಏರಿಕೆ ಆಗಿಲ್ಲ. ಆದರೆ, ಬೆಳಗಿನ ಸಂದರ್ಭದಲ್ಲಿ ಹೆಚ್ಚಿನ ಜನರು ಅಗತ್ಯ ವಸ್ತು ಕೊಳ್ಳಲು ಮಾರು ಕಟ್ಟೆ ಆಗಮಿಸುತ್ತಿರುವುದು ಕಂಡು ಬಂತು.

*
ತರಕಾರಿ ದರ ಹೆಚ್ಚಳ ಮಾಡಿದ್ದು, ಗ್ರಾಹಕರಿಗೆ ಹೊರೆಯಾಗಿದೆ. ಎಲ್ಲ ತರಕಾರಿ ದರದಲ್ಲೂ ವ್ಯಾಪಾರಿಗಳು ಹೆಚ್ಚು ಮಾಡಿದ್ದಾರೆ. ಅಧಿಕಾರಿಗಳು ಇತ್ತ ಗಮನ ಹರಿಸಿ ಕಡಿಮೆ ಮಾಡಿಸಬೇಕು.
-ಮಹ್ಮದ್‌ ಯೂಸುಫ್‌, ಗ್ರಾಹಕ

*
ಬೇರೆ ಜಿಲ್ಲೆಗಳಿಂದ ಬರುವ ತರಕಾರಿಗೆ ಸಹಜವಾಗಿ ಬೆಲೆ ಇದೆ. ಅಲ್ಲದೇ ಸ್ಥಳೀಯವಾಗಿ ತರಕಾರಿ ಮಾರುಕಟ್ಟೆಗೆ ಬರುತ್ತಿಲ್ಲ. ಲಾಕ್‌ಡೌನ್‌ ಕಾರಣದಿಂದ ದರ ಏರಿಕೆ ಅನಿವಾರ್ಯ.
-ಅಹ್ಮದ್‌ ಖಾನ್‌, ವ್ಯಾಪಾರಿ

ಪೂರಕ ಮಾಹಿತಿ: ಅಶೋಕ ಸಾಲವಾಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.