ADVERTISEMENT

ಸೈದಾಪುರ | ಪ್ರಾಥಮಿಕ ಶಾಲೆಯ ಚಾವಣಿ ಶಿಥಿಲ: ಆತಂಕದಲ್ಲಿ ವಿದ್ಯಾರ್ಥಿಗಳಿಗೆ ಪಾಠ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 4:32 IST
Last Updated 14 ಜುಲೈ 2025, 4:32 IST
ಸೈದಾಪುರ ಸಮೀಪದ ಕಾಳೆಬೆಳಗುಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಗೊಂಡಿರುವ ಚಾವಣಿ ಕೆಳಗೆ ವಿದ್ಯಾರ್ಥಿಗಳ ಕಲಿಕೆ ಸಾಗಿದೆ
ಸೈದಾಪುರ ಸಮೀಪದ ಕಾಳೆಬೆಳಗುಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಗೊಂಡಿರುವ ಚಾವಣಿ ಕೆಳಗೆ ವಿದ್ಯಾರ್ಥಿಗಳ ಕಲಿಕೆ ಸಾಗಿದೆ   

ಕಾಳೆಬೆಳಗುಂದಿ(): ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಶಿಥಿಲಗೊಂಡಿದ್ದು, ಅಪಾಯದಲ್ಲೆ ವಿದ್ಯಾರ್ಥಿಗಳ ಕಲಿಕೆ ಸಾಗಿದೆ.

ಕಳೆದ ಒಂದು ವರ್ಷದಿಂದ ಕಟ್ಟಡದ ಚಾವಣಿ ಸಂಪೂರ್ಣ ಹಾಳಾಗಿ ಸಿಮೆಂಟ್ ಉದುರಿ ಬೀಳುತ್ತಿದೆ. ಕಾಂಕ್ರೀಟ್‌ ಒಳಗಿನ ಕಬ್ಬಿಣದ ಸಲಾಕೆಗಳು ಹೊರಗೆ ಕಾಣುತ್ತಿವೆ. ಅದರ ಕೆಳಗೆ ಜೀವಭಯದಲ್ಲೇ ಮಕ್ಕಳ ವಿದ್ಯಾಭ್ಯಾಸ ನಡೆಯುತ್ತಿದೆ.

ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ.‌ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪರ್ಯಾಯ ಕೊಠಡಿ ವ್ಯವಸ್ಥೆ ಮಾಡಿಲ್ಲ. ಆ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಯೂ ಇಲ್ಲ.

ADVERTISEMENT

2023-24ನೇ ಸಾಲಿನ ಕೆಕೆಆರ್‌ಡಿಬಿಯ ಅಕ್ಷರ ಆವಿಷ್ಕಾರದ ಮೈಕ್ರೊ ಯೋಜನೆಯಡಿಯಲ್ಲಿ ಕಾಳೆಬೆಳಗುಂದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳ ದುರಸ್ತಿ ಹಾಗೂ ಇತರ ಕಾಮಗಾರಿಗಳಿಗೆ ಒಟ್ಟು ₹3 ಲಕ್ಷ ಅನುದಾನ ಬಂದಿತ್ತು. ಈ ದುರಸ್ತಿ ಕಾರ್ಯವನ್ನು ಕೆಆರ್‌ಐಡಿಎಲ್‌ನವರಿಗೆ ವಹಿಸಲಾಗಿತ್ತು. ಆದರೆ, ಬಂದಿರುವ ಅನುದಾನದಲ್ಲಿ ಕಟ್ಟಡದ ದುರಸ್ತಿ ಮಾಡಲು ಆಗುವುದಿಲ್ಲ ಎಂದು ಬೇರೆ ಕ್ರೀಡಾ ಸಾಮಗ್ರಿಗಳು ಸೇರಿದಂತೆ ಇನ್ನಿತರ ಕೆಲಸಕ್ಕೆ ಬಳಸಲಾಗಿದೆ. ಈ ನಡುವೆ, ಶಾಲೆಗೆ ಹೊಸ ಎರಡು ಕೊಠಡಿಗಳ ನಿರ್ಮಾಣಕ್ಕೆ ಮತ್ತೆ ಅನುದಾನ ಮಂಜೂರಾಗಿದೆ ಎಂದು ಮೂಲಗಳು ಹೇಳಿವೆ.

‘ಆದಷ್ಟು ಬೇಗನೆ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ ಹೊಸ ಕಟ್ಟಡವನ್ನು ನಿರ್ಮಿಸಬೇಕು. ದುರಸ್ತಿ ಆಗುವವರೆಗೆ ಶಿಕ್ಷಣ ಇಲಾಖೆ ಶೀಘ್ರದಲ್ಲೇ ಶಿಥಿಲ ಕೊಠಡಿಗಳಿಗೆ ಬೀಗ ಹಾಕಿ ಗ್ರಾಮದಲ್ಲಿ ಬೇರೆ ಸ್ಥಳದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಬೇಕು. ಒಂದು ವೇಳೆ ಹೀಗೆಯೇ ಮುಂದುವರಿದು, ಮಕ್ಕಳಿಗೆ ಅನಾಹುತ ಜರುಗಿದರೆ ಇದಕ್ಕೆ ಶಿಕ್ಷಣ ಇಲಾಖೆ ಹಾಗೂ ಸರ್ಕಾರವೇ ನೇರ ಹೊಣೆಯಾಗುತ್ತದೆ’ ಎಂದು ಕರವೇ ತಾಲ್ಲೂಕು ಘಟಕದ ಪದಾಧಿಕಾರಿಗಳಾದ ದೇವಸಿಂಗ್ ಠಾಕೂರ್, ಮೌನೇಶ್ ಮಾಧ್ವಾರ, ತಾಯಪ್ಪ ಚೇಳಿಮೆಲಿ, ರಾಜು ಕಲಾಲ್, ಲಕ್ಷ್ಮಣ್ ಬಾಗಿಲಿ ಎಚ್ಚರಿಸಿದ್ದಾರೆ.

ಶಿಥಿಲ ಕೊಠಡಿಯಲ್ಲಿ ಮಕ್ಕಳ ವಿದ್ಯಾಭ್ಯಾಸ ನಡೆಯುತ್ತಿದ್ದು ಏನಾದರೂ ಅನಾಹುತ ಸಂಭವಿಸಿದರೆ ಹೊಣೆ ಯಾರು
ಶರಣಬಸಪ್ಪ ಎಲೇರಿ ಕರವೇ ಗುರುಮಠಕಲ್ ತಾಲ್ಲೂಕು ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.