ಸುರಪುರ: ಸಾರಿಗೆ ನೌಕರರ ಒಕ್ಕೂಟ ಕರೆ ನೀಡಿದ್ದ ಮುಷ್ಕರ ಬೆಂಬಲಿಸಿ ಇಲ್ಲಿಯ ಸಾರಿಗೆ ನೌಕರರು ಮಂಗಳವಾರ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಇದರಿಂದ ಬಸ್ ನಿಲ್ದಾಣ ಸಾರಿಗೆ ಬಸ್‍ಗಳಿಲ್ಲದೆ ಬಿಕೋ ಎನ್ನುತ್ತಿತ್ತು.
ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳಿಗೆ ಪ್ರವೇಶ ಇರಲಿಲ್ಲ. ಮುಷ್ಕರದ ಕಾರಣ ಖಾಸಗಿ ಬಸ್‍ಗಳು, ಕ್ರೂಸರ್ ಜೀಪ್‍ಗಳು ಬಸ್‍ನಿಲ್ದಾಣಕ್ಕೆ ನುಗ್ಗಿ ಪ್ರಯಾಣಿಕರನ್ನು ಕರೆದೊಯ್ಯುವ ದೃಶ್ಯ ಕಂಡು ಬಂತು.
ಮುಷ್ಕರದ ಮಾಹಿತಿ ಇಲ್ಲದ ಸುತ್ತಲಿನ ಗ್ರಾಮೀಣರು ಬೆಳಿಗಿನಿಂದಲೆ ಬಸ್ ನಿಲ್ದಾಣಗಳಲ್ಲಿ ಬಸ್‍ಗಾಗಿ ಕಾಯ್ದು ಕುಳಿತಿದ್ದರು. ಖಾಸಗಿ ವಾಹನಗಳಲ್ಲಿ ಎರಡು ಪಟ್ಟು ಪ್ರಯಾಣ ದರ ಹೆಚ್ಚಿಸಿದ್ದರು. ರೂ. 40 ರೂ ಇದ್ದ ಶಹಾಪುರಕ್ಕೆ ರೂ. 80 ವಸೂಲಿ ಮಾಡುವುದು ಸಾಮಾನ್ಯವಾಗಿತ್ತು.
ಕಲಬುರಗಿ ಹೋಗಲು ₹250 ಕೇಳುತ್ತಿದ್ದಾರೆ ಎಂದು ಪ್ರಯಾಣಿಕರು ಗೊಣಗುತ್ತಿದ್ದರು. ಆಸ್ಪತ್ರೆಗೆ ಹೋಗುವವರು, ಸಮಾರಂಭಗಳಿಗೆ ಹಾಜರಾಗುವವರು ಇತರ, ಅರ್ಜಂಟ್ ಕೆಲಸ ಇದ್ದವರು ಅನಿವಾರ್ಯವಾಗಿ ದುಪ್ಪಟ್ಟು ಹಣ ನೀಡಿ ಪ್ರಯಾಣಿಸುತ್ತಿದ್ದರು. ಮುಂಜಾಗ್ರತಾ ಕ್ರಮವಾಗಿ ಬಸ್‍ನಿಲ್ದಾಣ ಮತ್ತು ಇತರ ಜನನಿಬಿಡ ಸ್ಥಳಗಳಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿತ್ತು. ಶಾಲಾ, ಕಾಲೇಜುಗಳಲ್ಲಿ ಹಾಜರಾತಿ ತೀವ್ರ ಕುಸಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.