
ಬಸವರಾಜ ವಿಭೂತಿಹಳ್ಳಿ
ಯಾದಗಿರಿ: ‘ಕರ್ತವ್ಯ ಭವನದಲ್ಲಿ ಮೊದಲ ಬಾರಿಗೆ ಮಂಡನೆಯಾದ ಕೇಂದ್ರ ಸರ್ಕಾರದ ಬಜೆಟ್ ಅಸ್ಪಷ್ಟತೆಗಿಂತ ಕ್ರಿಯೆ, ಆಡಂಬರಕ್ಕಿಂತ ಸುಧಾರಣೆ ಮತ್ತು ಜನಪ್ರಿಯತೆಗಿಂತ ಜನಹಿತ ತತ್ವ ಆಧರಿಸಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಹೇಳಿದರು.
‘ಆತ್ಮನಿರ್ಭರತೆ ಮತ್ತು ವಿಕಸಿತ ಭಾರತ ಸ್ವಾವಲಂಬನೆ ಗುರಿಯನ್ನು ಇರಿಸಿಕೊಂಡು ಉದ್ಯೋಗ ಸೃಷ್ಟಿ, ಕೃಷಿ ಉತ್ಪಾದಕತೆ ಮತ್ತು ಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು ಒತ್ತು ನೀಡಲಾಗಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವುದು, ನಾಗರಿಕರ ಆಶಯಗಳನ್ನು ಈಡೇರಿಸುವುದು ಮತ್ತು ಆಡಳಿತದಲ್ಲಿ ಎಐನಂತಹ ಸುಧಾರಿತ ತಂತ್ರಜ್ಞಾನ ಬಜೆಟ್‌ನ ಆಧಾರ ಸ್ತಂಭಗಳಾಗಿವೆ. 350ಕ್ಕೂ ಹೆಚ್ಚು ಸುಧಾರಣೆಗಳ ಮೇಲೆ ಈ ಬಜೆಟ್ ನಿಂತಿದೆ. ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 4.3ಕ್ಕೆ ಇಳಿಸಲಾಗಿದೆ. 2030–31ರ ವೇಳೆಗೆ ಸಾಲದ ಪ್ರಮಾಣವನ್ನು ಶೇ 50ಕ್ಕೆ ತರುವ ಗುರಿ ಹಾಕಿಕೊಳ್ಳಲಾಗಿದೆ’ ಎಂದರು.
‘16ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳಿಗೆ ಶೇ 41ರಷ್ಟು ತೆರಿಗೆ ಪಾಲು ಮತ್ತು ₹ 1.4 ಲಕ್ಷ ಕೋಟಿ ಅನುದಾನ ನೀಡಲಾಗುತ್ತಿದೆ. ₹ 12 ಲಕ್ಷದ ವರೆಗೆ ಶೂನ್ಯ ಆದಾಯ ತೆರಿಗೆ ಸೌಲಭ್ಯ ಮುಂದುವರಿಸಲಾಗಿದೆ. ಸೇವಾ ವಲಯದಲ್ಲಿ ಭಾರತದ ಪಾಲು 2047ರ ವೇಳೆಗೆ ಶೇ 10ಕ್ಕೆ ಹೆಚ್ಚಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ’ ಎಂದು ಹೇಳಿದರು.
‘ಸಣ್ಣ ಉದ್ಯಮಗಳ ಬೆಳವಣಿಗೆಗಾಗಿ ₹10 ಸಾವಿರ ಕೋಟಿ ಮೊತ್ತದ ವಿಶೇಷ ನಿಧಿ ಮುಕ್ತ ಮೈಕ್ರೊ ಉದ್ಯಮಗಳಿಗೆ ಸ್ವಾವಲಂಬಿ ಭಾರತ ನಿಧಿಗೆ ಹೆಚ್ಚುವರಿಯಾಗಿ ₹ 2 ಸಾವಿರ ಕೋಟಿ ನೀಡಲಾಗಿದೆ. ಬಯೊಫಾರ್ಮಾ ಹಬ್‌ಗಾಗಿ ಮುಂದಿನ 5 ವರ್ಷಗಳಿಗೆ ₹ 10 ಸಾವಿರ ಕೋಟಿ ಮೀಸಲಿಡಲಾಗಿದೆ’ ಎಂದರು.
ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದ್ನಾಳ ಮಾತನಾಡಿ, ‘ದೇಶದಾದ್ಯಂತ ಏಳು ಹೊಸ ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಘೋಷಿಸಿದ್ದು, ಅದರಲ್ಲಿ ಹೈದರಾಬಾದ್– ಬೆಂಗಳೂರು ಮತ್ತು ಚೆನ್ನೈ– ಬೆಂಗಳೂರಿಗೂ ಎರಡು ಕಾರಿಡಾರ್ ಲಭಿಸಿದೆ. ಭಾರತದ ಸೆಮಿಕಂಡಕ್ಟರ್ ವ್ಯವಸ್ಥೆಯ ಬಲವರ್ಧನೆಗೂ ಆದ್ಯತೆ ಕೊಡಲಾಗಿದೆ’ ಎಂದರು.
ಮುಖಂಡರಾದ ನಾಗರತ್ನ ಕುಪ್ಪಿ ಮಾತನಾಡಿ, ‘ಜಿಲ್ಲೆಯಲ್ಲಿ ನಿಲುಗಡೆಯಾಗದ ರೈಲುಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯಪ್ರವೃತ್ತರಾಗುತ್ತೇವೆ’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ದೇವಿಂದ್ರನಾಥ ನಾದ, ಶರಣಗೋಪಾಲರೆಡ್ಡಿ, ವಿರುಪಾಕ್ಷಯ್ಯ ಸ್ವಾಮಿ ಸೇರಿ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.