
ಯಾದಗಿರಿ: ‘ಪುರಂದರದಾಸರು ತಮ್ಮ ಕೀರ್ತನೆ, ಸುಳಾದಿ, ಉಗಾಭೋಗ ಸೇರಿದಂತೆ 4.75 ಲಕ್ಷ ರಚನೆಗಳ ಮೂಲಕ ಸಾಮಾನ್ಯ ಜನತೆಗೆ ದ್ವೈತ ಮತವನ್ನು ಅರ್ಥೈಸಿದರು’ ಎಂದು ನರಸಿಂಹಾಚಾರ್ ಪುರಾಣಿಕ ಹೇಳಿದರು.
ನಗರದಲ್ಲಿ ಉತ್ತರಾದಿ ಮಠದ ಪರಿಮಳ ಮಂಟಪದಲ್ಲಿ ಉತ್ತರಾದಿಮಠ ವಿಶ್ವ ಮದ್ವ ಮಹಾಪರಿಷತ್ ಮತ್ತು ಸೌರಭದಾಸ ಸಾಹಿತ್ಯ ವಿದ್ಯಾಲಯ ಸಹಯೋಗದಲ್ಲಿ ಪುರಂದರದಾಸರ ಪುಣ್ಯತಿಥಿಯ ಹಿನ್ನಲೆ ಆಯೋಜಿಸಿದ್ದ ನಗರ ಸಂಕೀರ್ತನೆ ಕಾರ್ಯಕ್ರಮ ಹಾಗೂ ಪುರಂದರ ದಾಸರ ಆರಾಧನಾ ಮಹೋತ್ಸವದಲ್ಲಿ ಅವರು ಮಾತನಾಡಿದರು.
‘ಪುರಂದರದಾಸರು ತಮ್ಮ ಗುರುಗಳಾದ ವ್ಯಾಸರಾಜ ಶ್ರೀಗಳಿಂದ ‘ದಾಸರೆಂದರೆ ಪುರಂದರದಾಸರಯ್ಯ’ ಎಂದು ಕರೆಸಿಕೊಂಡರು. ಸಂಸಾರದಲ್ಲಿದ್ದೂ ಕೃಷ್ಣನ ಒಲುಮೆಯಿಂದ ಮುಕ್ತಿ ಪಡೆಯಬಹುದು ಎಂದು ಭಗವಂತನ ಮಹಿಮೆ ಮತ್ತು ಭಕ್ತವತ್ಸಲತೆಯನ್ನು ಸಾರಿದ್ದಾರೆ’ ಎಂದರು.
‘ಆಚಾರ್ಯರ ಪಂಚಭೇದ ತಾರತಮ್ಯವನ್ನು ಸಾಮಾನ್ಯರಿಗೂ ತಿಳಿಯುವಂತೆ ಉಪದೇಶಿಸಿದ ಕೀರ್ತಿ ಮತ್ತು ಮದ್ವಮುನಿಗಳ ಮೂಲಕ ಶ್ರೀಹರಿಯ ಸೇರುವ ಮಾರ್ಗವನ್ನಿತ್ತ ಮಹನೀಯರು’ ಎಂದು ಅಭಿಪ್ರಾಯಪಟ್ಟರು.
‘ಕರ್ಣಾಟಕ ಸಂಗೀತ ಪಿತಾಮಹ ಪುರಂದರದಾಸರು ತಮ್ಮ ಕೀರ್ತನೆಗಳಿಂದ ಜನರನ್ನು ತಿದ್ದಿದ್ದಾರೆ. ನಮ್ಮ ರಾಜ್ಯದಲ್ಲಿ ಹಲವು ದಾಸರು ಜನಿಸಿದ್ದು, ನಮ್ಮೆಲ್ಲರ ಭಾಗ್ಯ. ಪುರಂದರ ದಾಸರು ಪುಷ್ಯಮಾಸದ ಅಮಾವಾಸ್ಯೆಗೆ ಕೃಷ್ಣೈಕ್ಯರಾದರು’ ಎಂದು ವಿವರಿಸಿದರು.
ರಾಘವೇಂದ್ರ ಜೋಶಿ ಸೇರಿದಂತೆ ಅನೇಕ ವಿಪ್ರರು ಮತ್ತು ಗಣ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.