ADVERTISEMENT

ಯಾದಗಿರಿ: ನಿರಂತರ ಮಳೆ; ಗುಂಡಿಗಳಲ್ಲಿ ಕಳೆದುಹೋದ ರಸ್ತೆಗಳು

ಪವನ ಕುಲಕರ್ಣಿ
Published 19 ಅಕ್ಟೋಬರ್ 2025, 6:03 IST
Last Updated 19 ಅಕ್ಟೋಬರ್ 2025, 6:03 IST
ಮಳೆಗೆ ಸಂಪೂರ್ಣ ಹಾಳಾದ ನಗನೂರು-ಕೆಂಭಾವಿ ರಸ್ತೆ
ಮಳೆಗೆ ಸಂಪೂರ್ಣ ಹಾಳಾದ ನಗನೂರು-ಕೆಂಭಾವಿ ರಸ್ತೆ   

ಕೆಂಭಾವಿ: ನಿರಂತರ ಮಳೆಯಿಂದ ಕೆಂಭಾವಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಹದಗೆಟ್ಟ ರಸ್ತೆ ಮೇಲೆ ಸಂಚರಿಸಲು ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತಿದ್ದು, ದೈನಂದಿನ ಸಂಚಾರ, ಆರೋಗ್ಯ, ಶಿಕ್ಷಣ ಮತ್ತು ವ್ಯಾಪಾರದಂತಹ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ.

ಹದಗೆಟ್ಟ ಹಲವು ರಸ್ತೆಗಳ ನಿರ್ಮಾಣಕ್ಕೆ ಹಣ ಮಂಜೂರಾಗಿವೆ. ಮಳೆ ಬಿಡುವಿಲ್ಲದೆ ಸುರಿದಿದ್ದರಿಂದ ರಸ್ತೆ ನಿರ್ಮಾಣಕ್ಕೆ ತೊಡಕಾಗಿದೆ. ಇದರಿಂದ ಹಾಳಾದ ರಸ್ತೆಗಳು ಇನ್ನಷ್ಟು ಹದಗೆಟ್ಡಿದ್ದು ಸಂಚಾರಕ್ಕೆ ಸಂಚಕಾರ ಉಂಟುಮಾಡಿದೆ.

ADVERTISEMENT

ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿದರೂ ಮತ್ತೆ ಗುಂಡಿಗಳು ಬಾಯಿ ತೆರೆಯುತ್ತಿವೆ.

ರಸ್ತೆಗಳ ಹಾನಿ: ಕೆಲದಿನಗಳ ಹಿಂದೆ ಸುರಿದ ಮಳೆಗೆ ಯಡಿಯಾಪುರ, ನಡಕೂರ, ನಗನೂರ, ಮಲ್ಲಾ, ಹದನೂರ, ತಳ್ಳಳ್ಳಿ, ಕಾಚಾಪುರ ಸೇರಿದಂತೆ ಗ್ರಾಮೀಣ ರಸ್ತೆಗಳು ಸಂಪರ್ಕ ಹಾಳಾಗಿದೆ.

ಹಳ್ಳ ಕೊಳ್ಳಗಳಿಗೆ ಅಡ್ಡಲಾಗಿ ಕಟ್ಟಿರುವ ಕಿರು ಸೇತುವೆಗಳು ಕೊಚ್ಚಿಕೊಂಡು ಹೋಗಿದ್ದು, ಸುಗಮ ಸಂಚಾರಕ್ಕೆ ಸಂಚಕಾರ ತಂದೊಡ್ಡಿವೆ. ಇನ್ನೊಂದೆಡೆ ಹೊಲ–ಗದ್ದೆಗಳ ಸಂಪರ್ಕ ರಸ್ತೆಗಳು ಹಾಳಾಗಿವೆ. ಮಳೆ ನಿಂತರೂ ರೈತರು ಹೊಲ ಗದ್ದೆಗಳಿಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ.

ಸಿಂದಗಿ-ಕೊಡಗಂಲ್‌ ರಾಜ್ಯ ಹೆದ್ದಾರಿಯ ಗೋಗಿ ಯಿಂದ ಕೆಂಭಾವಿವರೆಗೆ ಅಲ್ಲಲ್ಲಿ ಸ್ವಲ್ಪ ರಸ್ತೆ ನಿರ್ಮಾಣವಾಗಿದ್ದರೂ ಬಹುತೇಕ ಕಡೆಗಳಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿದೆ.  ಅದರಲ್ಲೂ ಗ್ರಾಮೀಣ ರಸ್ತೆಗಳ ಸ್ಥಿತಿ ಹೇಳತೀರದಾಗಿದೆ. ಮೊದಲೇ ಹಾಳಾದ ರಸ್ತೆಗಳು ಇದೀಗ ರಾಕ್ಷಸ ರೂಪ ತಾಳಿವೆ.

ತಾಲ್ಲೂಕಿಗೆ ಸಂಪರ್ಕಿಸುವ ಸುರಪುರ ರಸ್ತೆಯಲ್ಲಿಯೂ ದೊಡ್ಡ ದೊಡ್ಡ ತಗ್ಗುಗಳು ನಿರ್ಮಾವಾಗಿದೆ. ಆಯತಪ್ಪಿದರೆ ಸವಾರರು ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಮಳೆಯಿಂದ ರಸ್ತೆಗಳು ಹಾಳಾಗಿರುವ ಬಗ್ಗೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೂ ಇದೆ. ಶೀಘ್ರದಲ್ಲಿ ರಸ್ತೆಗಳು ದುರಸ್ತಿ ಕಾಣಬೇಕಿದೆ.

ವಲಯದ ಬಹುತೇಕ ರಸ್ತೆಗಳಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿದ್ದು ಸಂಚಾರ ಮಾಡಲು ತೊಂದರೆಯಾಗಿತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ರಸ್ತೆ ದುರಸ್ತಿಗೆ ಕ್ರಮ ಜರುಗಿಸಬೇಕು.
– ಕುಮಾರ ಮೋಪಗಾರ, ಕರವೇ ಕೆಂಭಾವಿ ವಲಯ ಅಧ್ಯಕ್ಷ
ಈಗಾಗಲೇ ಕೆಂಭಾವಿ-ನಗನೂರ-ಮಲ್ಲಾ ರಸ್ತೆ ಹಾಗೂ ಗೋಗಿ-ಮಲ್ಲಾ ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಮಳೆಯಿಂದ ಸ್ವಲ್ಪ ವಿಳಂಬವಾಗಿವೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನುಳಿದ ಹಲವು ರಸ್ತೆಗಳ ಕ್ರಿಯಾಯೋಜನೆಗೆ ಅಧಿಕಾರಿಗಳಿಗೆ ತಿಳಿಸಿದ್ದೇನೆ.
– ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ
ಸೈಕಲ್ ಓಡಿಸಲು ಬರದಂತಾಗಿದೆ ಯಡಿಯಾಪುರ ರಸ್ತೆ ಹದಗೆಟ್ಟಿದೆ. ಸುರಪುರ ಶಾಸಕರು ಇತ್ತ ಗಮನಹರಿಸಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
– ಮಲ್ಲಿಕಾರ್ಜುನ ಕುಂಬಾರ, ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.