ADVERTISEMENT

ಯಾದಗಿರಿ: 7,579 ಅನರ್ಹ ಕಾರ್ಡ್‌ಗಳು ಪತ್ತೆ

ಶೇ 76ರಷ್ಟು ಅನರ್ಹ ಪಡಿತರ ಚೀಟಿಗಳು ವಿಲೇವಾರಿಗಾಗಿ ಬಾಕಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 7:56 IST
Last Updated 2 ಡಿಸೆಂಬರ್ 2025, 7:56 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಯಾದಗಿರಿ: ರಾಜ್ಯ ಸರ್ಕಾರ ಬಡತರ ರೇಖೆಗಿಂತ ಕೆಳಗಿನ (ಬಿಪಿಎಲ್) ಕಾರ್ಡ್ ಪರಿಷ್ಕರಣೆಗೆ ಮುಂದಾಗಿದ್ದು, ಜಿಲ್ಲೆಯಲ್ಲಿ 7,579 ಅನರ್ಹ ಕಾರ್ಡ್‌ಗಳನ್ನು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗುರುತಿಸಿದೆ. ಅವುಗಳಲ್ಲಿ 443 ಕಾರ್ಡ್‌ಗಳನ್ನು ಹಿಂಪಡೆಯಲಾಗಿದೆ.

ಜಿಲ್ಲೆಯಲ್ಲಿ 28,533 ಅಂತ್ಯೋದಯ ಅನ್ನ ಯೋಜನೆ (ಎಎವೈ) ಕಾರ್ಡ್‌ಗಳಲ್ಲಿ 1.15 ಲಕ್ಷ ಫಲಾನುಭವಿಗಳು; 2.40 ಲಕ್ಷ ಬಿಪಿಎಲ್‌ ಕಾರ್ಡ್‌ಗಳಲ್ಲಿ 9.45 ಲಕ್ಷ ಫಲಾನುಭವಿಗಳು; ಬಡತನ ರೇಖೆಗಿಂತ ಮೇಲಿರುವ (ಎಪಿಎಲ್‌) 22,243 ಕಾರ್ಡ್‌ಗಳಲ್ಲಿ 73,490 ಫಲಾನುಭವಿಗಳು ಸೇರಿ ಒಟ್ಟು 2.91 ಲಕ್ಷ ಕಾರ್ಡ್‌ಗಳಿವೆ. ಒಟ್ಟಾರೆ ಫಲಾನುಭವಿಗಳ ಸಂಖ್ಯೆ 11.34 ಲಕ್ಷದಷ್ಟಿದೆ.

ಕೇಂದ್ರ ಸರ್ಕಾರದ ಮಾನದಂಡಗಳು ಮತ್ತು ರಾಜ್ಯ ಸರ್ಕಾರದ ‘ಕುಟುಂಬ ತಂತ್ರಾಂಶ’ ದತ್ತಾಂಶದ ಮೂಲಕ 7,579 ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಪತ್ತೆ ಹಚ್ಚಲಾಗಿದೆ. ಅವುಗಳಲ್ಲಿ 1,389 ಕಾರ್ಡ್‌ಗಳನ್ನು ಪರಿವರ್ತನೆ ಮಾಡಿಲಾಗಿದ್ದು, 443 ಕಾರ್ಡ್‌ಗಳನ್ನು ಆಹಾರ ಇಲಾಖೆಯು ವಾಪಸ್ ಪಡೆದುಕೊಂಡಿದೆ. ಇನ್ನೂ 5,747 ಕಾರ್ಡ್‌ಗಳ ಬಾಕಿ ಉಳಿದಿದ್ದು, ಶೇ 24ರಷ್ಟು ಅನರ್ಹ ಕಾರ್ಡ್‌ಗಳ ವಿಲೇವಾರಿ ಮಾಡಲಾಗಿದೆ.

ADVERTISEMENT

ನಿಯಮಗಳನ್ನು ಉಲ್ಲಂಘಿಸಿ, ಆರ್ಥಿಕವಾಗಿ ಸಬಲರಾಗಿದ್ದರೂ ತಪ್ಪು ಮಾಹಿತಿ ಕೊಟ್ಟಿರುವುವರ ಕಾರ್ಡ್‌ಗಳನ್ನು ಉಪ ನೋಂದಣಿ, ವಾಣಿಜ್ಯ ತೆರಿಗೆ, ಪ್ರಾದೇಶಿಕ ಸಾರಿಗೆ, ಕಂದಾಯ ಸೇರಿದಂತೆ ಇತರೆ ಇಲಾಖೆಗಳ ಡಿಜಿಟಲ್‌ ಪೋರ್ಟಲ್‌ಗಳಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಪತ್ತೆ ಮಾಡಲಾಗುತ್ತಿದೆ. 

ವಾರ್ಷಿಕ ಆದಾಯ ₹1.2 ಲಕ್ಷ ಹೊಂದಿದ್ದ 4,584 ಕಾರ್ಡ್‌ಗಳು, ಜಿಎಸ್‌ಟಿಎನ್‌ ₹ 25 ಲಕ್ಷಕ್ಕೂ ಅಧಿಕ ವಹಿವಾಟು ಹೊಂದಿರುವ 13 ಕಾರ್ಡ್‌ಗಳು ಇರುವುದು ಗೊತ್ತಾಗಿದೆ. ಉದ್ಯಮಗಳ ವಹಿವಾಟು ನಡೆಸುವ 209, ಕಳೆದ 12ಕ್ಕೂ ಅಧಿಕ ತಿಂಗಳಿಂದ ಪಡಿತರ ಪಡೆಯದ 717, 6ರಿಂದ 12 ತಿಂಗಳ ನಡುವೆ ಪಡಿತರ ಸ್ವೀಕರಿಸದ 213, 18 ವರ್ಷಗಳ ಒಳಗಿನ ಒಬ್ಬರೇ ಸದಸ್ಯರು ಇರುವ 15, 7.5 ಎಕರೆಗೆ ಅಧಿಕ ಜಮೀನು ಹೊಂದಿರುವ 1,827 ಹಾಗೂ ವಾಹನಗಳ ಮಾಲೀಕತ್ವ ಇರುವ ಓರ್ವ ಕಾರ್ಡ್‌ದಾರರನ್ನು ಪತ್ತೆ ಮಾಡಲಾಗಿದೆ. ಅವುಗಳನ್ನು ಅನರ್ಹ ಗುಂಪಿಗೆಯೂ ಸೇರಿಸಲಾಗಿದೆ.

ಯಾದಗಿರಿ, ಶಹಾಪುರದಲ್ಲಿ ಅತ್ಯಧಿಕ: ಜಿಲ್ಲಾ ಕೇಂದ್ರವಾದ ಯಾದಗಿರಿ ತಾಲ್ಲೂಕು ಹಾಗೂ ವಾಣಿಜ್ಯ ಕೇಂದ್ರವಾಗಿರುವ ಶಹಾಪುರದಲ್ಲಿ ಕ್ರಮವಾಗಿ 1,750 ಹಾಗೂ 1,644 ಅನರ್ಹ ಕಾರ್ಡ್‌ಗಳು ಪತ್ತೆಯಾಗಿವೆ. ಈ ಎರಡೂ ತಾಲ್ಲೂಕುಗಳಲ್ಲಿ ಅತಿಹೆಚ್ಚು ಕಂಡುಬಂದಿವೆ.

ನೆರೆಯ ರಾಜ್ಯಗಳಲ್ಲೂ ಪಡಿತರ ಚೀಟಿ

ಯಾದಗಿರಿ ಸೇರಿ ನೆರೆಯ ರಾಜ್ಯಗಳಲ್ಲೂ ಪಡಿತರ ಚೀಟಿಗಳಲ್ಲಿ ಹೆಸರು ಹೊಂದಿರುವ 1478 ಸದಸ್ಯರನ್ನು ಪತ್ತೆ ಮಾಡಲಾಗಿದೆ. ಯಾದಗಿರಿ ಹಾಗೂ ಬೇರೆ ಜಿಲ್ಲೆಗಳಲ್ಲೂ ಪಡಿತರ ಚೀಟಿ ಹೊಂದಿರುವ ಐವರ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲಾಗಿದೆ. 100ಕ್ಕೂ ಅಧಿಕ ವರ್ಷಗಳಿರುವ 35 ಸದಸ್ಯರ ಕಾರ್ಡ್‌ಗಳು ಹಾಗೂ ಕಳೆದ ಮೂರು ತಿಂಗಳಲ್ಲಿ ಮರಣ ಹೊಂದಿರುವ 13 ಜನರ ಕಾರ್ಡ್‌ಗಳನ್ನು ಗುರುತಿಸಲಾಗಿದೆ. ಒಟ್ಟು 1814 ಕಾರ್ಡ್‌ಗಳಲ್ಲಿ 812 ಕಾರ್ಡ್‌ಗಳನ್ನು ಹಿಂಪಡೆದು 719 ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.