ಯಾದಗಿರಿ: ಗುರುಮಠಕಲ್‌ನಲ್ಲಿನ ₹1.21 ಕೋಟಿ ಮೌಲ್ಯದ ಪಡಿತರ ಅಕ್ಕಿ ಅಕ್ರಮ ದಾಸ್ತಾನು ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ಒಪ್ಪಿಸಿದೆ.
ಸೆಪ್ಟೆಂಬರ್ 8ರಂದು ನರೇಂದ್ರ ರಾಠೋಡ ಹಾಗೂ ಅಯ್ಯಪ್ಪ ರಾಠೋಡ ಅವರಿಗೆ ಸೇರಿದ ಲಕ್ಷ್ಮಿ ವೆಂಕಟೇಶ್ವರ ಮತ್ತು ಲಕ್ಷ್ಮಿ ಬಾಲಾಜಿ ಇಂಡಸ್ಟ್ರೀಸ್ ಮಿಲ್‌ಗಳಲ್ಲಿ ಅಕ್ರಮವಾಗಿ 3,985 ಕ್ವಿಂಟಲ್ ಪಡಿತರ ಅಕ್ಕಿ ದಾಸ್ತಾನು ಮಾಡಿರುವುದು ಪತ್ತೆಯಾಗಿತ್ತು. ಈ ಸಂಬಂಧ ನಾಲ್ವರ ವಿರುದ್ಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾಳ ಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ಆಗದಂತೆ ಮೌಖಿವಾಗಿ ಸೂಚಿಸಿದ್ದರೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಅನಿಲ್‌ಕುಮಾರ್ ಎಚ್.ದವಳಗಿ ಅವರು ಕರ್ತವ್ಯ ಲೋಪ ಎಸಗಿದ್ದಾರೆ. ಗುರುಮಠಕಲ್‌ನಲ್ಲಿನ ಪ್ರಕರಣದಲ್ಲಿ ಅಧಿಕಾರಿಯ ಬೇಜವಾಬ್ದಾರಿತನ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ವರದಿಯಲ್ಲಿ ತಿಳಿಸಿದ್ದಾರೆ.
ವರದಿ ಆಧರಿಸಿ ಅನಿಲ್‌ಕುಮಾರ್ ಅವರನ್ನು ಆಹಾರ ಇಲಾಖೆಯಿಂದ ಮಾತೃ ಇಲಾಖೆಯಾದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಹಿಂದಿರುಗಿಸಿ ಆಹಾರ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲಾ ಒಂದು ಹಗರಣೆ ನಡೆಯುತ್ತಲ್ಲೇ ಇದೆ. ಬಡವರ ಅಕ್ಕಿಯಲ್ಲಿ ಕನ್ನ ಹಾಕುವವರ ವಿರುದ್ಧ ಬಿಗಿಯಾದ ಕ್ರಮ ತೆಗೆದುಕೊಳ್ಳಬೇಕುಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಸಚಿವರ ಹಸ್ತಕ್ಷೇಪ ಇಲ್ಲದೆ ಪಡಿತರ ಅಕ್ಕಿಯಲ್ಲಿ ಅಕ್ರಮ ನಡೆಯಲು ಸಾಧ್ಯವಿಲ್ಲ. ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಸಮಗ್ರವಾಗಿ ತನಿಖೆಯಾಗಲಿಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ
‘ಅಕ್ಕಿ ಅಕ್ರಮ ದಾಸ್ತಾನು ಪ್ರಕರಣ ತಳಮಟ್ಟದಿಂದ ತನಿಖೆಯಾಗಿ ಅಕ್ರಮ ಮಾರಾಟ ಸಂಪೂರ್ಣವಾಗಿ ನಿಲ್ಲಬೇಕು. ಸರ್ಕಾರದ ಯೋಜನೆ ದುರುಪಯೋಗ ಆಗಬಾರದು’ಶರಣಬಸಪ್ಪ ದರ್ಶನಾಪುರ, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.