
ವಡಗೇರಾ: ‘ಹಿರಿಯರಾಗಲಿ ಕಿರಿಯರಾಗಲಿ ಆಗಾಗ ಕಣ್ಣುಗಳ ತಪಾಸಣೆಯನ್ನು ಮಾಡಿಕೊಳ್ಳುವುದರಿಂದ ದೃಷ್ಟಿ ದೋಷದಿಂದ ಮುಕ್ತಿ ಹೊಂದಲು ಸಾಧ್ಯ’ ಎಂದು ನೇತ್ರಾಧಿಕಾರಿ ಶ್ರೀನಿವಾಸ ಹೇಳಿದರು.
ತಾಲ್ಲೂಕಿನ ಬಿಳ್ಹಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ವಡಗೇರಾ ಆಶಾಕಿರಣ ದೃಷ್ಟಿ ಕೇಂದ್ರದ ವತಿಯಿಂದ ದೃಷ್ಟಿ ದೋಷವಿರುವ ಶಾಲಾ ಮಕ್ಕಳಿಗೆ ಉಚಿತ ಕನ್ನಡಕಗಳನ್ನು ವಿತರಿಸಿ ಅವರು ಮಾತನಾಡಿದರು.
‘ರಾಜ್ಯ ಸರ್ಕಾರವು ಪ್ರತಿಯೊಬ್ಬರ ಕಣ್ಣುಗಳನ್ನು ರಕ್ಷಿಸಲು ‘ಆಶಾ ಕಿರಣ’ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕು. ಈ ಯೋಜನೆ ಅಡಿಯಲ್ಲಿ ಉಚಿತವಾಗಿ ಕಣ್ಣಿನ ತಪಾಸಣೆ, ಕಣ್ಣಿನ ಪೊರೆ ಚಿಕಿತ್ಸೆಗಳು ಹಾಗೂ ಕನ್ನಡಕಗಳನ್ನು ವಿತರಿಸುವ ಜತೆಗೆ ಕುರುಡುತನಕ್ಕೆ ಚಿಕಿತ್ಸೆ ನೀಡುವ ಗುರಿಯನ್ನು ಹೊಂದಲಾಗಿದೆ’ ಎಂದು ತಿಳಿಸಿದರು.
‘ಹುಟ್ಟು ಆಕಸ್ಮಿಕ ಸಾವು ಖಚಿತ ಎಂಬಂತೆ ಇಂದಿಲ್ಲ ನಾಳೆ ಎಲ್ಲರೂ ಸಾಯುವುವರೆ ಆದರೆ ಸಾಯುವದಕ್ಕಿಂತ ಮುಂಚೆ ಬೇರೆಯವರ ಬಾಳಿನಲ್ಲಿ ಬೆಳಕಾಗಬೇಕಾದರೆ ಮರಣ ಪೂರ್ವದಲ್ಲಿ ಕಣ್ಣುಗಳನ್ನು ದಾನ ಮಾಡುವ ಒಪ್ಪಿಗೆ ಸೂಚಿಸುವ ದಾನ ಪತ್ರಕ್ಕೆ ರುಜು ಮಾಡಬೇಕು’ ಎಂದರು.
‘ನಮ್ಮಲ್ಲಿರುವ ಸಂಕುಚಿತ ಭಾವನೆ ಹಾಗೂ ಭಯವನ್ನು ಬಿಟ್ಟು ನಮ್ಮ ದೇಹದ ಅಂಗಾಂಗಳನ್ನು ದಾನ ಮಾಡುವುದರಿಂದ ಬೇರೆಯವರ ಜೀವನವನ್ನು ಉಳಿಸಿದಂತಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರು ದೇಹದ ಅಂಗಾಂಗಳನ್ನು ದಾನ ಮಾಡಬೇಕು’ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಅಂಧತ್ವ ವಿಭಾಗ ಯಾದಗಿರಿ ವತಿಯಿಂದ ದೃಷ್ಟಿ ದೋಷವಿರುವ ಶಾಲಾ ಮಕ್ಕಳಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕ, ಶಿಕ್ಷಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.