ADVERTISEMENT

ಯಾದಗಿರಿ| ಸೋಂಕು ಪತ್ತೆ ಪರೀಕ್ಷೆ ವರದಿ ಬರುವುದಕ್ಕೂ ಮೊದಲೇ ಬಿಡುಗಡೆ: ಆಂತಕ

ಸಾಂಸ್ಥಿಕ ಕ್ವಾರಂಟೈನ್‌ಗಳಲ್ಲಿ ಬಿಡುಗಡೆಯಾದವರು ಗ್ರಾಮವೆಲ್ಲ ಸುತ್ತಾಡಿದರು!

ಬಿ.ಜಿ.ಪ್ರವೀಣಕುಮಾರ
Published 1 ಜೂನ್ 2020, 1:57 IST
Last Updated 1 ಜೂನ್ 2020, 1:57 IST
ಯಾದಗಿರಿ ತಾಲ್ಲೂಕಿನ ಕಾಳೆಬೆಳಗುಂದಿ ಶಾಲೆಯಲ್ಲಿ ಸ್ಥಾಪಿಸಿರುವ ಸಾಂಸ್ಥಿಕ ಕ್ವಾರಂಟೈನ್‌ ಚಿತ್ರ
ಯಾದಗಿರಿ ತಾಲ್ಲೂಕಿನ ಕಾಳೆಬೆಳಗುಂದಿ ಶಾಲೆಯಲ್ಲಿ ಸ್ಥಾಪಿಸಿರುವ ಸಾಂಸ್ಥಿಕ ಕ್ವಾರಂಟೈನ್‌ ಚಿತ್ರ   

ಯಾದಗಿರಿ: ವರದಿ ಬರುವ ಮುನ್ನವೇ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದವರನ್ನು ಬಿಡುಗಡೆ ಮಾಡಿದ್ದು, ಅವರಿಗೆ ಈಗ ಕೋವಿಡ್‌–19 ದೃಢವಾಗಿದೆ. ಇದರಿಂದ ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

45 ದಿನಗಳ ಕಾಲ ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ಜಿಲ್ಲೆಯಲ್ಲಿ ಮೇ 12ರಂದು ಮೊದಲ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಕೋವಿಡ್‌ ಕಾಲಿಟ್ಟಿತ್ತು. ಅಲ್ಲಿಂದ ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ. ಇಂಥ ಸಂದರ್ಭದಲ್ಲಿ ವರದಿ ಬಂದ ನಂತರ ಮನೆಗೆ ಕಳಿಸುವುದು ಬಿಟ್ಟು, ಅದಕ್ಕೆ ಮುನ್ನವೆ ಕಳಿಸಿದ್ದು ಎಡವಟ್ಟಾಗಿದೆ.

ಬಿಡುಗಡೆಯಾದವರು ಗ್ರಾಮ, ನಗರದಲ್ಲಿ ಸುತ್ತಾಡಿದ್ದಾರೆ ಎನ್ನಲಾಗಿದೆ. ಅವರ ಪ್ರಾಥಮಿಕ, ದ್ವಿತೀಯ ಸಂಪರ್ಕ ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಲಿದೆ. ಅಲ್ಲದೆ ಇದು ಸಮುದಾಯಕ್ಕೂ ಹರಡುವ ಸಾಧ್ಯತೆ ಇದೆ ಎನ್ನುವ ಆತಂಕ ಶುರುವಾಗಿದೆ.

ADVERTISEMENT

ಬಿಡುಗಡೆಯಾದವರನ್ನು ಸರ್ಕಾರವೇನೂ ಹೋಂ ಕ್ವಾರಂಟೈನ್‌ಗೆ ಸೂಚಿಸಿದೆ. ಆದರೆ, ಬಿಡುಗಡೆ ಹೊಂದಿದವರು ಎಲ್ಲ ಕಡೆ ಸುತ್ತಾಡಿದ್ದಾರೆ. ಇದರಿಂದ ಜಿಲ್ಲೆಗೆ ಮತ್ತಷ್ಟು ಆಪತ್ತು ಕಾದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

‘ಸೋಂಕಿನ ಲಕ್ಷಣಗಳು ಇಲ್ಲದಿದ್ದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಸಾಂಸ್ಥಿಕ ಕ್ವಾರಂಟೈನ್‌ಗಳಿಂದ ಬಿಡುಗಡೆ ಮಾಡಲಾಗುತ್ತಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಆದರೆ, ಸೋಂಕಿನ ಲಕ್ಷಣಗಳೇ ಇಲ್ಲದಿದ್ದರೂ ಕೋವಿಡ್‌–19 ದೃಢ ಪಟ್ಟ ಉದಾಹರಣಗಳಿವೆ. ಹೀಗಾಗಿ ಅವರ ವರದಿ ಬರುವ ತನಕ ಜಿಲ್ಲಾಡಳಿತ ಕಾಯಬೇಕಿತ್ತು. ಈಗ ಅವರನ್ನು ಮನೆಗೆ ಕಳಿಸಿ ಎಡವಟ್ಟು ಮಾಡಿದೆ ಎಂದು ಜೆಡಿಎಸ್‌ ಯುವ ಮುಖಂಡ ಶರಣಗೌಡ ಕಂದಕೂರ ಆರೋಪಿಸುತ್ತಾರೆ.

***

ವಲಸೆ ಕಾರ್ಮಿಕರನ್ನು ಮನೆಗೆ ಕಳುಹಿಸುವಾಗ ಅವರಿಗೆ ಸ್ಟ್ಯಾಂಪಿಂಗ್ ಮತ್ತು ಹೆಲ್ತ್ ಸ್ಕ್ರೀನಿಂಗ್ ಮಾಡಿ ವೈದ್ಯಕೀಯ ಪ್ರಮಾಣ ಪತ್ರ ನೀಡಲಾಗುತ್ತಿದೆ
ಎಂ.ಕೂರ್ಮಾರಾವ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.