ADVERTISEMENT

ಹಿಮೋಗ್ಲೋಬಿನ್ ಕೊರತೆ: ವರದಿ ಸಲ್ಲಿಸಿ

ಔಷಧಿನೇ ಇಲ್ಲಂದ್ರ ಆಸ್ಪತ್ರೆ ಹ್ಯಾಂಗ್ ನಡೆಸ್ತಿರಿ: ಶಾಸಕರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 6:42 IST
Last Updated 12 ಜುಲೈ 2025, 6:42 IST
ಗುರುಮಠಕಲ್ ಮತಕ್ಷೇತ್ರದ ಕೋಟಗೇರಾ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಶರಣಗೌಡ ಕಂದಕೂರ, ಔಷಧ ದಾಸ್ತಾನು ಪರಿಶೀಲಿಸಿದರು
ಗುರುಮಠಕಲ್ ಮತಕ್ಷೇತ್ರದ ಕೋಟಗೇರಾ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಶರಣಗೌಡ ಕಂದಕೂರ, ಔಷಧ ದಾಸ್ತಾನು ಪರಿಶೀಲಿಸಿದರು   

ಯಾದಗಿರಿ: ಗುರುಮಠಕಲ್ ಮತಕ್ಷೇತ್ರದ ಪಿಎಚ್‌ಸಿ, ಸಿಎಚ್‌ಸಿ, ತಾಲ್ಲೂಕು ಆರೋಗ್ಯ ಕೇಂದ್ರಗಳಿಗೆ ಶಾಸಕ ಶರಣಗೌಡ ಕಂದಕೂರ ಭೇಟಿ ಮೂಲಸೌಕರ್ಯ ಕಲ್ಪಿಸಲು ಸೂಚನೆ ನೀಡಿದರು.  

ಯಾವುದೇ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯವಿಲ್ಲವೆಂದು ಜನರು ದೂರಿದರೆ ನಾಯಿ ಕಡಿತಕ್ಕೆ ಕಳೆದ 6 ತಿಂಗಳಿಂದ ಲಸಿಕೆ ಲಭ್ಯವಿಲ್ಲ, 4 ತಿಂಗಳಿಂದ ಐವಿ ಪ್ಲೂಡ್ಸ್ ಸರಬರಾಜಿಲ್ಲ, ಕೆಲವೊಂದು ಔಷಧಿಗಳು ಆಸ್ಪತ್ರೆಯ ನಿರ್ವಹಣಾ ವೆಚ್ಚದಲ್ಲಿ ಖರೀದಿ ಮಾಡುತ್ತೇವೆ. ಹೀಗೆ ಸಾಲು ಸಾಲು ಸಮಸ್ಯೆಗಳು ಗುರುಮಠಕಲ್ ಮತಕ್ಷೇತ್ರದ ಹಲವು ಆಸ್ಪತ್ರೆಗಳಲ್ಲಿ ಕಂಡು ಬಂದವು.

ಶಾಸಕರು ಭೇಟಿ ನೀಡಿದ ಸಂದರ್ಭದಲ್ಲಿ ಹಲವು ಆಸ್ಪತ್ರೆಗಳಲ್ಲಿ ದಾಖಲಾದ ಗರ್ಭಿಣಿಯರಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಶೇಕಡವಾರು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇದೆ. 8, 9 ಹೀಗೆ 10ರೊಳಗೆ ಇರುವುದನ್ನು ಕಂಡು ಶಾಸಕ ಶರಣಗೌಡ ಕಂದಕೂರ ಕಳವಳ ವ್ಯಕ್ತಪಡಿಸಿದರು.

ADVERTISEMENT

ಹಿಮೋಗ್ಲೋಬಿನ್ ಹೆಚ್ಚಳಕ್ಕೆ ಶೀಘ್ರ ಕಾರಣ ಹುಡುಕು ಪಟ್ಟಿ ಮಾಡಿ ವರದಿ ಸಲ್ಲಿಸುವಂತೆ ತಾಲ್ಲೂಕು ಆರೋಗ್ಯ ಅಧಿಕಾರಿ ಹಣಮಂತರೆಡ್ಡಿಯವರಿಗೆ ಸೂಚಿಸಿದರು.

ಔಷಧಿನೇ ಇಲ್ಲಂದ್ರ ಆಸ್ಪತ್ರೆ ಹ್ಯಾಂಗ್ ನಡೆಸ್ತಿರಿ: ಇದೇ ರೀತಿ ಆಸ್ಪತ್ರೆಗಳಲ್ಲಿ ಔಷಧಿನೇ ಇಲ್ಲಂದ್ರೆ ಆಸ್ಪತ್ರೆ ಹ್ಯಾಂಗ್ ರೀ ನಡೆಸ್ತೀರಿ ಎಂದು ಡಿಎಚ್‌ಒ ಅವರನ್ನು ತರಾಟೆಗೆ ತೆಗೆದುಕೊಂಡರು.

ಸಮಜಾಯಿಸಿ ನೀಡಲು ಬಂದ ತಾಲ್ಲೂಕು ಆರೋಗ್ಯ ಅಧಿಕಾರಿ ಹಣಮಂತರಡ್ಡಿಯವರಿಗೆ ಸುಮ್ನೆ ಇರಪ್ಪ ನಾ ಬಂದಾಗ ಈ ಸಮಸ್ಯೆ ಗೊತ್ತಾಯಿತು. ಇಷ್ಟು ದಿನ ನಿವೆಲ್ಲ ಏನ್ರಿ ಮಾಡಿದ್ದೀರಿ. ಯಾವಗಾದರೂ ಬಂದು ಆಸ್ಪತ್ರೆಗೆ ವಿಸಿಟ್ ಮಾಡಿದ್ದೀರಾ, ಮಾಡಿದ್ದರೆ ಎಂದೋ ಈ ಸಮಸ್ಯೆ ಬಗೆ ಹರಿತಿತ್ತು. ಆಸ್ಪತ್ರೆಗಳಲ್ಲಿ ಇಷ್ಟೊಂದು ಸಮಸ್ಯೆ ಇದೆ ನೀವೇನ್ರಿ ಮಾಡ್ತಿರಿ ಎಂದು ಗದರಿದರು.

ಕೋಟಗೇರಾ, ಗಾಜರಕೋಟ್, ಸೈದಾಪುರ, ಮಲ್ಹಾರ ಆಸ್ಪತ್ರೆಗೆ ಭೇಟಿ: ಮತಕ್ಷೇತ್ರದ ಕೋಟಗೇರಾ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಟಾಫ್ ನರ್ಸ್‌ಗಳ ವರ್ತನೆ, ಫಾರ್ಮಾಸಿಸ್ಟ್ ನಿರ್ಲಕ್ಷ್ಯ ಕಂಡು ಕೆರಳಿದ ಶಾಸಕರು ಕೂಡಲೇ ಇಬ್ಬರಿಗೆ ನೊಟಿಸ್ ನೀಡುವಂತೆ ಸೂಚಿಸಿದರು.

ಗುರುಮಠಕಲ್ ಆಸ್ಪತ್ರೆಗೆ ಭೇಟಿ: ಗುರುಮಠಕಲ್ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು, ಆಸ್ಪತ್ರೆ ಅವ್ಯವಸ್ಥೆ ಕುರಿತು ಹಲವು ದೂರುಗಳು ಬರುತ್ತಿದ್ದು, ಎಚ್ಚರದಿಂದ ಇರಿ, ಆಸ್ಪತ್ರೆಗೆ ಬಡವರು ಬರುತ್ತಾರೆ. ಅವರನ್ನು ಮಾನವೀಯತೆ ಇಂದ ಕಾಣಿ, ನರ್ಸ್‌ಗಳು ಜನರೊಡನೆ ಸೌಜನ್ಯದಿಂದ ವರ್ತಿಸದಿದ್ದಲ್ಲಿ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು. ಆಸ್ಪತ್ರೆ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು. ಈ ಆಸ್ಪತ್ರೆಯನ್ನು 100 ಬೆಡ್ ಆಸ್ಪತ್ರೆಗೆ ಏರಿಸಲು ಕ್ರಮವಹಿಸಲಾಗಿದ್ದು, ಈ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ನಿವಾರಣೆಯಾಗಲಿದೆ ಎಂದರು.

‘6 ತಿಂಗಳಿಂದ ನಾಯಿ ಕಡಿತ ಲಸಿಕೆ ಸರಬರಾಜಿಲ್ಲ’:

ನಾಯಿ ಕಡಿತವೆಂದು ಬರುವ ರೋಗಿಗಳಿಗೆ ಚಿಕಿತ್ಸೆಗಾಗಿ ಸರ್ಕಾರ ಕಳೆದ 6 ತಿಂಗಳಿಂದ ಲಸಿಕೆ ಸರಬರಾಜು ಮಾಡಿಲ್ಲವೆಂದರೆ ಏನ್ರಿ ಅರ್ಥ. ನಾಯಿ ಕಡಿದು ಜನರು ಸತ್ತರೆ ಏನ್ರಿ ಮಾಡ್ತಿರಾ ಅವರ ಜೀವಕ್ಕೆ ಯಾವ ಬೆಲೆ ಇಲ್ಲವಾ ಎಂದು ಶಾಸಕ ಶರಣಗೌಡ ಕಂದಕೂರ ಆಕ್ರೋಶ ವ್ಯಕ್ತಪಡಿಸಿದರು. ಗಾಜರಕೋಟ್ ಗ್ರಾಮದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಳಿ ಬಂದ ಸಮಸ್ಯೆಗೆ ಕೆರಳಿ ಕೆಂಡವಾದ ಶಾಸಕ ಕಂದಕೂರ ಆಸ್ಪತ್ರೆಯಿಂದಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಅವರಿಗೆ ಕರೆ ಮಾಡಿ ನಾಯಿ ಕಡಿತಕ್ಕೆ ಚಿಕಿತ್ಸೆ ಲಭ್ಯವಿಲ್ಲ. ಕಳೆದ 6 ತಿಂಗಳಿಂದ ಲಸಿಕೆ ಸರಬರಾಜಿಲ್ಲವೆಂದು ಗಮನಕ್ಕೆ ತಂದು ಕೂಡಲೇ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಹರ್ಷಗುಪ್ತ ಕೂಡಲೇ ಕ್ರಮಕೈಗೊಳ್ಳುವುದಾಗಿ ಶಾಸಕರಿಗೆ ಭರವಸೆ ನೀಡಿದರು.

‘9 ಆರೋಗ್ಯ ಕ್ಷೇಮ ಕೇಂದ್ರಗಳ ಸ್ಥಾಪನೆ’:

ಗುರುಮಠಕಲ್ ಮತಕ್ಷೇತ್ರದ ಬಂದಳ್ಳಿ ಬೆಳಗುಂದಿ ಅಚ್ಚೋಲಾ ಸೈದಾಪುರ ಮಾಧ್ವಾರ ಅಜಲಾಪುರ ವಂಕಸಂಬ್ರ ಮೊಗದಂಪುರ ಕಂದಕೂರ ಹೀಗೆ 9 ಗ್ರಾಮಗಳಲ್ಲಿ ತಲಾ ₹65 ಲಕ್ಷ ವೆಚ್ಚದಲ್ಲಿ ಆರೋಗ್ಯ ಕ್ಷೇಮ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತಿದೆ. ಈ ಎಲ್ಲಾ ಕಾಮಗಾರಿ ಟೆಂಡರ್ ಹಂತದಲ್ಲಿದ್ದು ಶೀಘ್ರದಲ್ಲಿಯೇ ಈ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಕಂದಕೂರ ತಿಳಿಸಿದರು. ಗುರುಮಠಕಲ್ ಮತಕ್ಷೇತ್ರದ ನಸಲವಾಯಿ ಮತ್ತು ಬಾಡಿಯಾಳ ಗ್ರಾಮದಲ್ಲಿ ಹೊಸ ಆಸ್ಪತ್ರೆಗೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದ್ದು ಶೀಘ್ರದಲ್ಲಿಯೇ ಆಸ್ಪತ್ರೆಗೆ ಕ್ರಮಕೈಗೊಳ್ಳಲಾಗುವುದು. ಇದರ ಜೊತೆಗೆ ಗುರುಮಠಕಲ್ ಮತಕ್ಷೇತ್ರದ ಎಲ್ಲಾ ಆಸ್ಪತ್ರೆಗಳಿಗೆ ಮೂಲಸೌಕರ್ಯ ಒದಗಿಸಲು ಪಣತೊಟ್ಟಿದ್ದು ತಾಲ್ಲೂಕಿನ ಎಲ್ಲಾ ಆಸ್ಪತ್ರೆಗಳ ಮೂಲಸೌಕರ್ಯಗಳ ಪಟ್ಟಿ ಮಾಡಿ ವರದಿ ನೀಡುವಂತೆ ತಾಲ್ಲೂಕು ಆರೋಗ್ಯ ಅಧಿಕಾರಿ ಹಣಮಂತರೆಡ್ಡಿಯವರಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.