ADVERTISEMENT

ಶಹಾಪುರ: ಅವನತಿಯಲ್ಲಿದ್ದ ಕೆರೆಗಳಿಗೆ ಮರುಜೀವ

ಕೆರೆ ಹೂಳೆತ್ತುವ, ನೀರು ತುಂಬಿಸುವ ಯೋಜನೆ ಫಲಪ್ರದ

ಟಿ.ನಾಗೇಂದ್ರ
Published 22 ಜೂನ್ 2020, 19:30 IST
Last Updated 22 ಜೂನ್ 2020, 19:30 IST
ಶಹಾಪುರದ ಹೊಸಕೇರಾ ಗ್ರಾಮದ ಬಳಿ ಕೆರೆ ಹೂಳೆತ್ತುವ ಕಾರ್ಯ ಸಾಗಿದೆ
ಶಹಾಪುರದ ಹೊಸಕೇರಾ ಗ್ರಾಮದ ಬಳಿ ಕೆರೆ ಹೂಳೆತ್ತುವ ಕಾರ್ಯ ಸಾಗಿದೆ   

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ನೀರು ವಂಚಿತ ಹಳ್ಳಿಯ ಕೆರೆಗಳ ಹೂಳೆತ್ತುವ ಕಾರ್ಯ ಭರದಿಂದ ಸಾಗಿದೆ. ಇದರಿಂದ ಕೆರೆಗಳಿಗೆ ಜೀವ ಕಳೆ ತುಂಬಿದೆ. ಹೂಳೆತ್ತುವ ಕಾರ್ಯ ಸಕಾಲದಲ್ಲಿ ಮುಕ್ತಾಯದ ಹಂತಕ್ಕೆ ಬಂದಿರುವುದರಿಂದ ಮಳೆ ನೀರು ಸಂಗ್ರಹಕ್ಕೆ ಅನುಕೂಲವಾಗಲಿದೆ.

ತಾಲ್ಲೂಕಿನ ಹೊಸಕೇರಾ, ಚಾಮನಾಳ, ಚಂದಾಪುರ, ನಡಿಹಾಳ, ಗುಂಡಾಪುರ ಖಾನಾಪುರ ಮುಂತಾದ ಹಳ್ಳಿಗಳು ಕಾಲುವೆ ನೀರಿನಿಂದ ವಂಚಿತ ಗ್ರಾಮಗಳಾಗಿವೆ. ಈ ಗ್ರಾಮಗಳು ಎತ್ತರ ಪ್ರದೇಶದಲ್ಲಿ ಇರುವುದರಿಂದ ಕಾಲುವೆ ನಿರ್ಮಿಸಲು ಸಾಧ್ಯವಾಗಲಿಲ್ಲ. ಅದೇ 10-15 ಕಿ.ಮೀ ದೂರದ ಹಳ್ಳಿಗಳಿಗೆ ಕಾಲುವೆ ನೀರು ಬಂದಿದೆ. ನೀರು ವಂಚಿತ ಗ್ರಾಮಗಳಿಗೆ ನೀರು ಹರಿಸಲು ಸಾಕಷ್ಟು ಹೋರಾಟ ನಡೆಸಿದರೂ ಯಶಸ್ವಿ ಆಗಲಿಲ್ಲ. ಹೀಗಾಗಿ ನೀರಿನ ಸಮಸ್ಯೆಯನ್ನು ಜೀವಂತವಾಗಿ ಇಡಲಾಗಿತ್ತು ಎನ್ನುತ್ತಾರೆ ರೈತ ಮುಖಂಡ ಭಾಸ್ಕರರಾವ ಮುಡಬೂಳ.

ಕೊನೆಗೂ ಕೆರೆಗಳ ಹೂಳೆತ್ತುವ ಮತ್ತು ನೀರು ತುಂಬಿಸುವ ಯೋಜನೆಯು ಪರಿಣಾಮಕಾರಿಯಾಗಿ ಜಾರಿಗೊಂಡಿದ್ದರಿಂದ ಅಲ್ಲಿನ ಗ್ರಾಮಗಳಿಗೆ ಈಗ ಜೀವ ಕಳೆ ಬಂದಿದೆ. ಒಂದು ವರ್ಷ ಕೆರೆಗೆ ನೀರು ತುಂಬಿಸಿದರೆ ಸಾಲದು, ಬೇಸಿಗೆ ಕಾಲದಲ್ಲಿ ನೀರು ಸಂಗ್ರಹಿಸಿ ಇಡಬೇಕು. ಕೆರೆಯ ಸರ್ವೆ ನಡೆಸಿ ಗಡಿ ಗುರುತು ಹಾಕುವುದರ ಜೊತೆಗೆ ಯಾವುದೇ ಮುಲಾಜಿಲ್ಲದೆ ಒತ್ತುವರಿದಾರರನ್ನು ತೆರವುಗೊಳಿಸಬೇಕು. ಕೆರೆಯ ದಂಡೆಯಲ್ಲಿ ದೊಡ್ಡದಾದ ನಾಮಫಲಕ ಅಳವಡಿಸಿ ಕೆರೆಯ ವಿಸ್ತೀರ್ಣ ಹಾಗೂ ಎಕರೆ ಗುಂಟೆಯನ್ನು ನಮೂದಿಸಬೇಕು. ಇದರಿಂದ ಅದು ಸಾರ್ವಜನಿಕ ಆಸ್ತಿ ಹಾಗೂ ದಾಖಲೆಯಾಗಿ ಉಳಿಯಲು ಸಾಧ್ಯ ಎನ್ನುತ್ತಾರೆ ಅವರು.

ADVERTISEMENT

ನೀರು ವಂಚಿತ ಗ್ರಾಮಗಳಿಗೆ ಕನಿಷ್ಠ ನೀರು ಒದಗಿಸಬೇಕು ಎಂಬ ಉದ್ದೇಶದಿಂದ ಕೃಷ್ಣಾ ಭಾಗ್ಯ ಜಲ ನಿಗಮದಿಂದ ₹12 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿ 2 ವರ್ಷದಿಂದ ಕೆರೆಗೆ ಹೂಳೆತ್ತುವ ಹಾಗೂ ನೀರು ತುಂಬಿಸುವ ಯೋಜನೆ ಸಾಗಿದೆ. ಅದರಲ್ಲಿ ಹೊಸಕೇರಾ ಕೆರೆ ಹೂಳೆತ್ತುವುದು ಮುಕ್ತಾಯವಾಗಿದೆ. ಅದರಂತೆ ನಡಿಹಾಳ ಹಾಗೂ ಖಾನಾಪುರ ಕೆರೆಯಲ್ಲಿ ನೀರು ಸಂಗ್ರಹಿಸಿದೆ. ಉಳಿದಂತೆ ಉಕ್ಕಿನಾಳ, ಮಡ್ನಾಳ, ಮುಡಬೂಳ ಮುಂತಾದ ಕೆರೆಗಳ ಹೂಳೆತ್ತುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ಪ್ರಸಕ್ತ ಬಾರಿ ಕೆರೆ ಹೂಳೆತ್ತುವುದು ಮತ್ತು ನೀರು ತುಂಬಿಸುವುದಕ್ಕೆ ಬೇಸಿಗೆ ಸಮಯದಲ್ಲಿ ಹೆಚ್ಚಿನ ಆದ್ಯತೆ ನೀಡಿದರ ಫಲವಾಗಿ ಹಲವಾರು ಕೆರೆಗಳಿಗೆ ಜೀವ ಕಳೆ ಬಂದಿದೆ. ಅಲ್ಲದೆ ಪೋಲಾಗುತ್ತಿರುವ ನೀರನ್ನು ಹಿಡಿದಿಟ್ಟುಕೊಳ್ಳಲು ಚಿಕ್ಕದಾದ ಬ್ರಿಜ್‌ ಕಂ ಬ್ಯಾರೇಜ್ ನಿರ್ಮಾಣ ಮಾಡಿ ಗೇಟ್ ಅಳವಡಿಸಲಾಗುವುದು. ಇಂತಹ ರಚನಾತ್ಮಕ ಕೆಲಸಗಳಿಗೆ ರೈತರು ಕೈ ಜೋಡಿಸುವುದರ ಜೊತೆಗೆ ಪೋಲಾಗುತ್ತಿರುವ ನೀರಿನ ಬಗ್ಗೆ ನಮ್ಮ ಗಮನಕ್ಕೆ ತಂದರೆ ಅನುಕೂಲವಾಗುತ್ತದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.