ಡಾ. ಅಂಬೇಡ್ಕರ್
ಯಾದಗಿರಿ: ನಗರದಲ್ಲಿ ಅಂಬೇಡ್ಕರ್ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಗಲಾಟೆ ಮಾಡಿ, ಹಲ್ಲೆಮಾಡಿ, ಜಾತಿನಿಂದನೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಹತ್ತು ಜನರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೈದಪ್ಲ ಕೂಲೂರು ಎಂಬುವವರು ನೀಡಿದ ದೂರಿನ್ವಯ ನಗರ ಪೊಲೀಸ್ ಠಾಣೆಯಲ್ಲಿ 10 ಜನರ ವಿರುದ್ಧ ಜಾತಿನಿಂದನೆ ಸೇರಿದಂತೆ ವಿವಿಧ ಪ್ರಕರಣಗಳು ಬುಧವಾರ ದಾಖಲಾಗಿವೆ.
ಘಟನೆಯಲ್ಲಿ ಗಾಯಗೊಂಡ ಚಂದಪ್ಪ ಮುನಿಯಪ್ಪನೋರ್, ಸುರೇಶ ನಾಯಕ ಎಂಬುವವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
ಕಲ್ಲು ತೂರಾಟ, ಹೊಡೆದಾಟ, ಜಾತಿನಿಂದನೆ ಮತ್ತು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆಯೇ ಬಸವರಾಜ ತಳವಾರ, ಭೀಮರಡ್ಡಿ ಅಂಬಿಗೇರ, ಆಕಾಶ ಪಾಮಳ್ಳಿ, ಶ್ರೀನಿವಾಸ, ಹಣಮಂತ ಬಾವೂರ, ರವಿ ಪಸ್ಪೂಲ್, ಚಂದಪ್ಪ ಬಾವೂರ, ಸುರೇಶ, ಮಲ್ಲು ಬಬಲಾದಿ, ಹಾಗೂ ಮಲ್ಲು ರಾಡ್ ಎಂಬುವವರ ವಿರುದ್ಧ ದೂರು ದಾಖಲಾಗಿದೆ.
ಘಟನೆ ವಿವರ: ಏ.15ರಂದು ಜಯಂತಿ ಸಮಿತಿಯಿಂದ ಡಾ.ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ನಗರದ ವಿವಿಧಡೆಯಿಂದ ಸಾಗಿ ಕೋಲಿವಾಡ ಏರಿಯಾಕ್ಕೆ ಬರುತ್ತಿದಂತೆಯೇ ಎದುರಿಗೆ ಬಂದ ಸುಮಾರು ಹತ್ತು ಜನರು ಏಕಾಏಕಿ ಮೆರವಣಿಗೆ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇಲ್ಲಿಂದ ಹೋಗಲು ಬಿಡುವುದಿಲ್ಲ ಎಂದು ಹೇಳಿ ಅಡ್ಡಿಪಡಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಗುಂಪು ಚದುರಿಸಿ ಮೆರವಣಿಗೆಗೆ ಮುಂದೆ ಹೊಗಲು ಅನುವು ಮಾಡಿಕೊಟ್ಟರು. ಅರ್ಧ ಗಂಟೆಯಲ್ಲಿಯೇ ಮತ್ತೇ ಅದೇ ಗುಂಪು ಬಡಿಗೆ, ಕಲ್ಲುಗಳೊಂದಿಗೆ ಬಂದು ದಾಂಧಲೆ ಮಾಡಲು ಮುಂದಾದಾಗ ಸಮಿತಿ ಪ್ರಮುಖರು ಎಷ್ಟೇ ಸಮಾಧಾನ ಪಡಿಸಿದರೂ ಬಡಿಗೆಗಳಿಂದ ಹಲ್ಲೆಮಾಡಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಸೈದಪ್ಪ ಕೂಲೂರು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.