ಕೆಂಭಾವಿ: ಪಟ್ಟಣದಲ್ಲಿ ಇತ್ತೀಚಿಗೆ ನೂತನವಾಗಿ ಉದ್ಘಾಟನೆಯಾದ ರೈತ ಸಂಪರ್ಕ ಕೇಂದ್ರದ ಕಚೇರಿಗೆ ತೆರಳಲು ಸರಿಯಾದ ರಸ್ತೆ ಇಲ್ಲದೆ ರೈತರು ನಿತ್ಯ ಹೈರಾಣುಗುತ್ತಿದ್ದಾರೆ. ಕೆಂಗೇರಿ ಬಡಾವಣೆಯಲ್ಲಿ ನಿರ್ಮಿಸಿದ ರೈತ ಸಂಪರ್ಕ ಕೇಂದ್ರದಲ್ಲಿ ನಿತ್ಯ ನೂರಾರು ರೈತರು ಬಿತ್ತನೆ ಬೀಜ ಖರೀದಿಗೆ ಬರುತ್ತಿದ್ದು ಕೆಸರು ಗದ್ದೆಯಾದ ರಸ್ತೆಯಲ್ಲಿ ಇಕ್ಕಟ್ಟಿಗೆ ಸಿಲುಕುತ್ತಿದ್ದಾರೆ.
ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದ್ದು ಪಟ್ಟಣ ಸೇರಿದಂತೆ ವಲಯದ ಸುಮಾರು ಐವತ್ತು ಗ್ರಾಮದ ರೈತರು ಬಿತ್ತನೆಗೆ ಬೀಜ ಖರೀದಿ ಮಾಡಲು ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ.
ಕೆಂಗೇರಿ ಬಡಾವಣೆಯ ಕೊನೆಯ ಭಾಗದಲ್ಲಿರುವ ಕಚೇರಿಗೆ ತೆರಳಲು ರಸ್ತೆಯೇ ಇಲ್ಲವಾದ್ದರಿಂದ ಅನಿವಾರ್ಯವಾಗಿ ಕಿರಿದಾದ ರಸ್ತೆಯಲ್ಲಿ ರೈತರು ತೆರಳುತ್ತಿದ್ದಾರೆ. ಆ ರಸ್ತೆಯೂ ಮಳೆಯಿಂದ ಕೆಸರು ಗದ್ದೆಯಾಗಿದ್ದು ದ್ವಿಚಕ್ರ, ತ್ರಿಚಕ್ರ ವಾಹನಗಳು ಕೆಸರಿನಲ್ಲಿ ಸಿಲುಕಿ ಪರದಾಡುತ್ತಿವೆ. ಇದಲ್ಲದೆ ಅನೇಕ ರೈತರು ಕೆಸರಿನಲ್ಲಿ ಸಿಲುಕಿ ನೆಲಕ್ಕೆ ಬಿದ್ದ ಉದಾಹರಣೆಗಳು ಇವೆ. ಸರಿಯಾದ ರಸ್ತೆ ನಿರ್ಮಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ರೈತರ ಒತ್ತಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.