ADVERTISEMENT

‘ಪ್ರಜಾವಾಣಿ’ ವರದಿ ಫಲಶ್ರುತಿ: ಮೂರೇ ದಿನದಲ್ಲಿ ರಸ್ತೆ ದುರಸ್ತಿ

ಎಲ್‌ಐಸಿ ಕಚೇರಿ ಮುಂಭಾಗದ ಗುಂಡಿ ಬಿದ್ದ ರಸ್ತೆಗೆ ಡಾಂಬರೀಕರಣ

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 16:17 IST
Last Updated 9 ಜೂನ್ 2023, 16:17 IST
ಯಾದಗಿರಿ ನಗರದ ಎಲ್‌ಐಸಿ ಕಚೇರಿ ಮುಂಭಾಗ ಗುಂಡಿ ಬಿದ್ದ ರಸ್ತೆ ದುರಸ್ತಿ ಮಾಡಿರುವುದು
ಯಾದಗಿರಿ ನಗರದ ಎಲ್‌ಐಸಿ ಕಚೇರಿ ಮುಂಭಾಗ ಗುಂಡಿ ಬಿದ್ದ ರಸ್ತೆ ದುರಸ್ತಿ ಮಾಡಿರುವುದು   

ಯಾದಗಿರಿ: ನಗರದ ಎಲ್‌ಐಸಿ ಕಚೇರಿ ಮುಂಭಾಗ ರಸ್ತೆ ಡಾಂಬಾರು ಕಿತ್ತು ಬಂದಿರುವ ಕುರಿತು ‘ಪ್ರಜಾವಾಣಿ’ ಜೂನ್‌ 5ರ ಸಂಚಿಕೆಯಲ್ಲಿ ‘ಒಂದೂವರೆ ತಿಂಗಳಲ್ಲೇ ಕಿತ್ತು ಬಂದ ಹೆದ್ದಾರಿ ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.

ಇದಕ್ಕೆ ಸ್ಪಂದಿಸಿರುವ ರಾಷ್ಟ್ರೀಯ ಹೆದ್ದಾರಿ ಯಾದಗಿರಿ ಉಪ-ವಿಭಾಗದ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಿಸಿದ್ದಾರೆ. ವರದಿ ಪ್ರಕಟವಾದ ಮೂರೇ ದಿನದಲ್ಲೇ ದುರಸ್ತಿ ಕಾರ್ಯ ಮಾಡಿದ್ದು, ಜನರು ನಿಟ್ಟಿಸಿರು ಬಿಟ್ಟಿದ್ದಾರೆ. ಗುರುವಾರವೇ ಸಂಬಂಧಿಸಿದ ಗುತ್ತಿಗೆದಾರರು ರಸ್ತೆ ಗುಂಡಿ ಬಿದ್ದಿರುವುದನ್ನು ದುರಸ್ತಿ ಮಾಡಿದ್ದಾರೆ.

ಡಾಂಬರೀಕರಣವಾಗಿ ಒಂದೂವರೆ ತಿಂಗಳಾಗಿದ್ದು, ಗುಂಡಿ ಬಿದ್ದಿದ್ದರಿಂದ ವಾಹನ ಸವಾರರು ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದರು. ಕೋಟ್ಯಂತರ ರೂಪಾಯಿ ಖರ್ಚಾದರೂ ಗುಣಮಟ್ಟದ ಡಾಂಬರೀಕರಣ ಮಾಡಿಲ್ಲ ಎನ್ನುವ ಆರೋಪಗಳನ್ನು ಮಾಡಿದ್ದರು.

ADVERTISEMENT

ಪ್ರತಿಬಾರಿಯೂ ಅದೇ ಸ್ಥಳದಲ್ಲಿ ಗುಂಡಿಗಳಾಗಿ ರಸ್ತೆ ದುರಸ್ತಿಗೆ ಬರುತ್ತಿತ್ತು. ಹೀಗಾಗಿ ಈಗ ಅದೇ ಸ್ಥಳದಲ್ಲಿರುವ ರಸ್ತೆ ವಿಭಕಜವನ್ನು ಒಡೆದು ನೀರು ಹರಿದು ಹೋಗಲು ದಾರಿ ಮಾಡಿಕೊಟ್ಟಿದ್ದಾರೆ. ಇದರಿಂದ ಮತ್ತೆ ರಸ್ತೆ ಹಾಳಾಗುವುದಿಲ್ಲ ಎನ್ನುವುದು ರಾಷ್ಟ್ರೀಯ ಹೆದ್ದಾರಿ ಯಾದಗಿರಿ ಉಪ-ವಿಭಾಗದ ಅಧಿಕಾರಿಗಳ ಮಾತಾಗಿದೆ.

‘ನಗರದೊಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ–150 ಅನ್ನು ದುರಸ್ತಿ ಮಾಡಲಾಗಿದೆ. ಮಳೆಗಾಲ ಆರಂಭವಾಗುವ ಮೊದಲೆ ದುರಸ್ತಿ ಪಡಿಸಲಾಗಿದೆ. ಈಗ ನೀರು ಸರಾಗವಾಗಿ ಹರಿದು ಹೋಗಲು ಮಾರ್ಗ ಮಾಡಿದ್ದು, ಗುಣಮಟ್ಟದ ಕಾಮಗಾರಿ ಮಾಡಲಾಗಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಯಾದಗಿರಿ ಉಪ-ವಿಭಾಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸುನಿಲ್‌ ಕುಮಾರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ದಾವಣಗೆರೆ ಮೂಲದ ಗುತ್ತಿಗೆದಾರ ರಸ್ತೆ ಕಾಮಗಾರಿ ವಹಿಸಲಾಗಿದ್ದು, ಮೂರು ವರ್ಷಗಳ ಕಾಲ ಅವರೇ ದುರಸ್ತಿ ಮಾಡಬೇಕಾಗಿದೆ’ ಎಂದು ತಿಳಿಸಿದರು.

ಯಾದಗಿರಿ ನಗರದ ಎಲ್‌ಐಸಿ ಕಚೇರಿ ಮುಂಭಾಗ ಗುಂಡಿ ಬಿದ್ದ ರಸ್ತೆ ದುರಸ್ತಿ ಮಾಡಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.